Advertisement

ಕೊಟ್ಲಾ ಟೆಸ್ಟ್‌ಗೆ ಮಾಲಿನ್ಯ ಮುಜುಗರ

06:50 AM Dec 04, 2017 | Team Udayavani |

ನವದೆಹಲಿ: ದಿಲ್ಲಿಯಲ್ಲಿ ಕೆಲವು ದಿನಗಳಿಂದ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸಿರುವ ವಾಯುಮಾಲಿನ್ಯದ ಬಿಸಿ ಕೋಟ್ಲಾದಲ್ಲಿ ನಡೆಯುತ್ತಿದ್ದ ಭಾರತ-ಶ್ರೀಲಂಕಾ ನಡುವಿನ 3ನೇ ಟೆಸ್ಟ್‌ಗೂ ತಟ್ಟಿತು.

Advertisement

ವಾಯುಮಾಲಿನ್ಯದ ಪರಿಣಾಮ ಆಟಗಾರರು ಮುಖಕ್ಕೆ ಮಾಸ್ಕ್ ಧರಿಸಿ ಆಡಬೇಕಾಯಿತು. ಇದು ಟೆಸ್ಟ್‌ ಕ್ರಿಕೆಟ್‌ನ 141 ವರ್ಷ ಇತಿಹಾಸದಲ್ಲೇ ಸಂಭವಿಸಿದ ದೊಡ್ಡ ವಾಯುಮಾಲಿನ್ಯ ದುರಂತ. ಒಟ್ಟಾರೆ 26 ನಿಮಿಷ ಪಂದ್ಯಕ್ಕೆ ಅಡಚಣೆಯಾಯಿತು. 20 ಸಾವಿರ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು. ಭಾರತ 536ಕ್ಕೆ 7 ವಿಕೆಟ್‌ ಕಳೆದುಕೊಂಡಿದ್ದಾಗ ಕೊಹ್ಲಿ ಡಿಕ್ಲೇರ್‌ ಘೋಷಿಸಿದರು. ಈ ವೇಳೆ ಲಂಕಾ ಆಟಗಾರರು ಫೀಲ್ಡಿಂಗ್‌ಗೆ ಇಳಿಯಲು ನಿರಾಕರಿಸಿದರು. ವಾಯುಮಾಲಿನ್ಯದ ಕಾರಣವನ್ನು ಒಡ್ಡಿದರು, ಇದರಿಂದಾಗಿ ಆತಿಥೇಯ ಭಾರತ ಸ್ವಲ್ಪ ಮುಜುಗರವನ್ನು ಅನುಭವಿಸಿತು. ಈ ವೇಳೆ ಭಾರತ ಅಭಿಮಾನಿಗಳು ಲಂಕಾ ಆಟಗಾರರನ್ನು ಲೂಸರ್…ಲೂಸರ್ ಎಂದು ಕೂಗಿ ಗೇಲಿ ಮಾಡಿದರು.

ಲಂಕಾ ಆಟಗಾರರ ನಾಟಕ?: ಸರಣಿ ಸೋಲಿನ ಆಟಗಾರರು ವಾಯುಮಾಲಿನ್ಯದ ನಾಟಕವಾಡಿದರೆ? ಇಂತಹದೊಂದು ಅನುಮಾನ ಕ್ರಿಕೆಟ್‌ ವಲಯದಿಂದ ಕೇಳಿಬಂದಿದೆ. ಕೊಟ್ಲಾದಲ್ಲಿ ನೆರೆದಿದ್ದ 20 ಸಾವಿರ ಕ್ರಿಕೆಟ್‌ ಅಭಿಮಾನಿಗಳಿಗೆ ಮಾಲಿನ್ಯದ ಸಮಸ್ಯೆಯಾಗಲಿಲ್ಲ. ಭಾರತ ಕ್ರಿಕೆಟಿಗರಿಗೂ ಮಾಲಿನ್ಯ ಸಮಸ್ಯೆ ಆಗಲಿಲ್ಲ, ಹೀಗಿದ್ದ ಮೇಲೆ ಲಂಕಾ ಆಟಗಾರರಿಗೆ ಮಾತ್ರ ಮಾಲಿನ್ಯ ಸಮಸ್ಯೆ ಹೇಗೆ ಬಂತು? ಅನ್ನುವುದು ಗೊತ್ತಿಲ್ಲ. ಈ ಬಗ್ಗೆ ಲಂಕಾ ಮಂಡಳಿಗೆ ಪತ್ರ ಬರೆಯಲಾಗುವುದು ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ತಿಳಿಸಿದ್ದಾರೆ.

ಅನಾರೋಗ್ಯ: ಹೊರ ನಡೆದ ಗಮಗೆ
ರವಿಚಂದ್ರನ್‌ ಅಶ್ವಿ‌ನ್‌ ವಿಕೆಟ್‌ ಪಡೆದ ಬೆನ್ನಲ್ಲೇ ಲಂಕಾದ ವೇಗದ ಬೌಲರ್‌ ಗಮಗೆ ಇದ್ದಕ್ಕಿದಂತೆ ಅನಾರೋಗ್ಯಕ್ಕೆ ಒಳಗಾದರು. ಇದಕ್ಕೂ ಮೊದಲು ಅವರು ವಾಯುಮಾಲಿನ್ಯದಿಂದ ಬೌಲಿಂಗ್‌ ಮಾಡಲು ಸಾಧ್ಯವೇ ಇಲ್ಲ ಎಂದು ದೂರು ನೀಡಿದ್ದರು. ಬಳಿಕ ಅವರು ಹೊರ ನಡೆದರು. ಇವರ ಓವರ್‌ ಅನ್ನು ಸುರಂಗ ಎಸೆದು ಪೂರ್ಣಗೊಳಿಸಿದರು. ಲಂಕಾದ 125ನೇ ಓವರ್‌ ವೇಳೆ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next