Advertisement
ಜಿ.ಪಂ. ಎಂಜಿನಿಯರ್ ಗೋವರ್ಧನ ಮಾತನಾಡಿ, ಸೇತುವೆಯ ಕಂಬಿಗಳಿಗೆ ತುಕ್ಕು ಹಿಡಿದಿರುವುದರಿಂದ ಸಾಮರ್ಥ್ಯ ಕಡಿಮೆ ಇದೆ. ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆ ಇದೆ. ಸೇತುವೆ ಅಪಾಯದಲ್ಲಿರುವ ಬಗ್ಗೆ ಎಂಜಿನಿಯರ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕರಿಗೆ ವರದಿ ಸಲ್ಲಿಸುತ್ತೇನೆ. ಅಲ್ಲಿಂದ ಜಿಲ್ಲಾಧಿಕಾರಿಗಳಿಗೆ ಹೋಗಿ,ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಸರಕಾರ ಅನುದಾನ ಸಿಕ್ಕಿದರೆ ನೂತನ ಸೇತುವೆ ನಿರ್ಮಾಣ ಮಾಡಲಾಗುವುದು. ಸೇತುವೆ ಸಾಮರ್ಥ್ಯವನ್ನು ಗುರುತಿಸುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು. ಘನವಾಹನಗಳ ಸಂಚಾರ ನಿರ್ಬಂಧಿಸುವ ಹಕ್ಕು ಜಿ.ಪಂ.ಗೆ ಇಲ್ಲ ಎಂದು ಹೇಳಿದರು. ಕೇರಳದ ಲೋಕೋಪಯೋಗಿ ಇಲಾಖೆ ಪಳ್ಳತ್ತೂರು ಸೇತುವೆ ಕಾಮಗಾರಿ ನಡೆಯುತ್ತಿದ್ದು, ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಅನಿವಾರ್ಯವಾಗಿ ನೆರೆಯ ರಾಜ್ಯವನ್ನು ಸಂಪರ್ಕಿಸುವ ಪಂಚೋಡಿ- ಗಾಳಿ ಮುಖ ರಸ್ತೆ ಯಲ್ಲಿ ವಾಹನ ಸಂಚಾರ ಅಧಿಕವಾಗಿದೆ.
‘ಕುಸಿಯುವ ಭೀತಿಯಲ್ಲಿ ಕರ್ನೂರು- ಕೋಟಿಗದ್ದೆ ಸೇತುವೆ’ ಎಂಬ ಶೀರ್ಷಿಕೆಯಲ್ಲಿ ಬುಧವಾರ ಉದಯವಾಣಿಯ ‘ಸುದಿನ’ ದಲ್ಲಿ ಸಚಿತ್ರವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ವೀಕ್ಷಿಸಿದ್ದು, ಮೇಲಧಿಕಾರಿಗಳಿಗೆ ವರದಿ ಕಳುಹಿಸಲಿದ್ದಾರೆ. ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಸಲ್ಮಾ, ಗುತ್ತಿಗೆದಾರ ಮಹಮ್ಮದ್ ಉಪಸ್ಥಿತರಿದ್ದರು. ಬ್ಯಾನರ್ ಆಳವಡಿಕೆ
ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪಂಚೋಡಿ-ಗಾಳಿಮುಖ ಜಿ.ಪಂ.
ರಸ್ತೆಯ ಪಂಚೋಡಿ ಜಂಕ್ಷನ್, ಕರ್ನೂರು, ಗಾಳಿಮುಖ ಜಂಕ್ಷನ್ ಈ ರಸ್ತೆಯಲ್ಲಿ ಘನ ವಾಹನಗಳು, ಟಿಪ್ಪರ್, ಬೋರ್‌ವೆಲ್ ಲಾರಿಗಳ ಸಂಚಾರಗಳನ್ನು 2018 ಸೆಪ್ಟಂಬರ್ ವರೆಗೆ ನಿಷೇಧಿಸಲಾಗಿದೆ. ತಪ್ಪಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಆದರೆ ಇದಕ್ಕೆ ಬೆಲೆ ಕೊಡದೇ ದಿನನಿತ್ಯ ಹಲವಾರು ಘನ ವಾಹನಗಳು ಸಂಚರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.