Advertisement

ಕೋಟೇಶ್ವರ-ಹಾಲಾಡಿ ಮುಖ್ಯ ರಸ್ತೆ: ಬೀದಿದೀಪವೇ ಇಲ್ಲ

08:22 PM Sep 07, 2021 | Team Udayavani |

ಕುಂದಾಪುರ:  ಸಾರ್ವಜನಿಕರು ನಿರ್ಭಯವಾಗಿ ಸಂಚರಿಸಲು ಅನುಕೂಲವಾಗುವಂತೆ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪ ಅಳವಡಿಸುವುದು ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್‌ಗಳ ಜವಾಬ್ದಾರಿಯಾಗಿದೆ. ಆದರೆ ಕೋಟೇಶ್ವರದಿಂದ ಹಾಲಾಡಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯುದ್ದಕ್ಕೂ ಬೀದಿ ದೀಪದ ವ್ಯವಸ್ಥೆಯೇ ಇಲ್ಲ.

Advertisement

ಕೋಟೇಶ್ವರದಿಂದ ಹಾಲಾಡಿಗೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯು ಕುಂದಾಪುರ ತಾಲೂಕಿನ ಪ್ರಮುಖ ಮಾರ್ಗಗಳಲ್ಲಿ ಒಂದಾಗಿದ್ದು, ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಾಳಾವರ, ಹುಣ್ಸೆಮಕ್ಕಿ, ಬಿದ್ಕಲ್‌ಕಟ್ಟೆ, ಜನ್ನಾಡಿ, ಹಾಲಾಡಿಯಂತಹ ಜಂಕ್ಷನ್‌ಗಳು ಸಿಗುತ್ತವೆ. ಈ ಪೈಕಿ ಬಿದ್ಕಲ್‌ಕಟ್ಟೆ ಹಾಗೂ ಹಾಲಾಡಿ ಜಂಕ್ಷನ್‌ ಹೊರತುಪಡಿಸಿದರೆ ಬೇರೆಲ್ಲೂ ಬೀದಿ ದೀಪದ ವ್ಯವಸ್ಥೆಯೇ ಅಳವಡಿಸಿಲ್ಲ.

19.5 ಕಿ.ಮೀ. ದೂರ :

ಕೋಟೇಶ್ವರದಿಂದ ಹಾಲಾಡಿಯವರೆಗಿನ ಈ ಜಿಲ್ಲಾ ಮುಖ್ಯ ರಸ್ತೆಯು 19.5 ಕಿ.ಮೀ. ದೂರವಿದೆ. ಕೋಟೇಶ್ವರ, ಕಾಳಾವರ, ಹೊಂಬಾಡಿ- ಮಂಡಾಡಿ, ಹಾರ್ದಳ್ಳಿ- ಮಂಡಳ್ಳಿ ಹಾಗೂ ಹಾಲಾಡಿ ಗ್ರಾಮ ಪಂಚಾಯ ತ್‌ಗಳ ವ್ಯಾಪ್ತಿಯಲ್ಲಿ ಈ ಮಾರ್ಗವು ಹಾದು ಹೋಗುತ್ತದೆ.

ಈ ರಸ್ತೆಯ ನಿರ್ವಹಣೆ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯಾಗಿದ್ದು, ಆದರೆ ಪ್ರಮುಖ ಜಂಕ್ಷನ್‌ ಅಭಿವೃದ್ಧಿಯಾದರೆ ಆ ಜಂಕ್ಷನ್‌ನಲ್ಲಿ ಹೈಮಾಸ್ಟ್‌ ದೀಪ ಅಳವಡಿಸುವುದು ಇಲಾಖೆಯ ಹೊಣೆ, ಇನ್ನು ಬಾಕಿ ಉಳಿದ ಕಡೆಗಳಲ್ಲಿ ಆಯಾಯ ಪಂಚಾಯತ್‌ನವರೇ ತಮ್ಮ – ತಮ್ಮ ವ್ಯಾಪ್ತಿಯಲ್ಲಿ ಹಾದುಹೋಗುವ ರಸ್ತೆಗಳಿಗೆ ವಿದ್ಯುತ್‌ ದೀಪದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

Advertisement

ಪಾದಚಾರಿಗಳಿಗೆ ಸಮಸ್ಯೆ :

ಈ ಮುಖ್ಯ ರಸ್ತೆಯುದ್ದಕ್ಕೂ ಅನೇಕ ಸಣ್ಣ- ಪುಟ್ಟ ಪೇಟೆಗಳಿದ್ದು, ಸಂಜೆ ಅನಂತರ ಪೇಟೆಯಿಂದ ಮನೆಗೆ ತೆರಳಲು, ಕುಂದಾಪುರ, ಕೋಟೇಶ್ವರದಿಂದ ಬಸ್‌ನಲ್ಲಿ ಬಂದು, ಬಸ್‌ ನಿಲ್ದಾಣದಲ್ಲಿ ಇಳಿದು ಮನೆ ಕಡೆಗೆ ಹೋಗಬೇಕಾದರೆ ಪಾದಚಾರಿಗಳು ವಿದ್ಯುತ್‌ ದೀಪದ ವ್ಯವಸ್ಥೆಯಿಲ್ಲದೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಅದರಲ್ಲೂ  ಮಹಿಳೆಯರು, ಯುವತಿಯರು ಕಗ್ಗತ್ತಲ ಹಾದಿಯಲ್ಲಿ ಭಯದಿಂದಲೇ ನಡೆದುಕೊಂಡು ಹೋಗಿ ಮನೆ ಸೇರುವಂತಾಗಿದೆ. ಪ್ರಮುಖವಾಗಿ ಕಾಳಾವರ, ಹುಣ್ಸೆಮಕ್ಕಿಯಂತಹ ಪ್ರಮುಖ ಪೇಟೆ ಆಸುಪಾಸಿನ ರಸ್ತೆಯುದ್ದಕ್ಕೂ ಬೆಳಕಿನ ವ್ಯವಸ್ಥೆ ಅಳವಡಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೋಟೇಶ್ವರ – ಹಾಲಾಡಿಯವರೆಗಿನ ಮುಖ್ಯ ರಸ್ತೆಯ ಬಿದ್ಕಲ್‌ಕಟ್ಟೆ ಹಾಗೂ ಹಾಲಾಡಿಯಲ್ಲಿ ಜಂಕ್ಷನ್‌ ಕಾಮಗಾರಿ ವೇಳೆ ಹೈಮಾಸ್ಟ್‌ ದೀಪವನ್ನು ಅಳವಡಿಸಲಾಗಿದೆ. ಇನ್ನು ಈ ರಸ್ತೆಯ ಕಾಳಾವರ ಜಂಕ್ಷನ್‌ ಅಭಿವೃದ್ಧಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಂಕ್ಷನ್‌ ಅಭಿವೃದ್ಧಿ ವೇಳೆ ಬೀದಿ ದೀಪವನ್ನು ಅಳವಡಿಸಲಾಗುತ್ತದೆ. ಬಾಕಿ ಉಳಿದ ಕಡೆಗಳಲ್ಲಿ ಸ್ಥಳೀಯ ಪಂಚಾಯತ್‌ನವರೇ ವ್ಯವಸ್ಥೆ ಮಾಡಿಕೊಳ್ಳಬೇಕು.ಹರ್ಷವರ್ಧನ್‌, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ ಕುಂದಾಪುರ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next