ಉಳ್ಳಾಲ : ಮನೆಯಲ್ಲಿ ಇರಲು ಅವಕಾಶ ನೀಡದ ಕಾರಣಕ್ಕೆ ಕೇರಳ ನಿವಾಸಿ ವ್ಯಕ್ತಿಯೋರ್ವ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಕೋಟೆಕಾರು ಗ್ರೌಂಡ್ ಬಳಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಅಬೂಬಕರ್ ಸಿದ್ದೀಖ್ ಅವರು ಕೊಲೆ ಯತ್ನಕ್ಕೆ ಒಳಗಾದವರು. ಕೇರಳದ ಮಂಜೇಶ್ವರ ಪಾವೂರು ಗುಂಡಾಪು ನಿವಾಸಿ ಉಮ್ಮರ್ ನವಾಫ್ ಆರೋಪಿತನಾಗಿದ್ದಾನೆ. ರಾತ್ರಿ 11ಕ್ಕೆ ಪರಿಚಿತರೇ ಆಗಿರುವ ಅಬೂಬಕರ್ ಸಿದ್ದೀಖ್ ಅವರಿಗೆ ಕರೆ ಮಾಡಿರುವ ಉಮ್ಮರ್ ನವಾಫ್ ಅರ್ಜೆಂಟಾಗಿ ಕೋಟೆಕಾರು ಗ್ರೌಂಡಿಗೆ ಬರುವಂತೆ ತಿಳಿಸಿದ್ದ.
ಅಬೂಬಕರ್ ಅವರು ನಡೆದು ಕೊಂಡು ಅಜ್ಜಿನಡ್ಕ ಬಳಿ ತಲುಪುತ್ತಿದ್ದಂತೆ ಬೈಕಿನಲ್ಲಿ ಬಂದಿದ್ದ ಉಮ್ಮರ್ ನವಾಫ್, ಅವರನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಕೋಟೆಕಾರು ಗ್ರೌಂಡಿಗೆ ಕರೆತಂದಿದ್ದ. ಅಲ್ಲಿ ಪೂರ್ವನಿಯೋಜಿತವಾಗಿ ಬೈಕಿನಲ್ಲಿ ತಂದಿದ್ದ ತಲವಾರು ಮೇಲಕ್ಕೆತ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ “ನಿನ್ನ ಮನೆಯಲ್ಲಿ ನಾನು ಇರಬಾರದಾ, ನೀನು ಯಾರಿಗೆ ಹೆದರುವುದು?, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ’ ಎಂದು ತಲವಾರಿನಿಂದ ಅಬೂಬಕರ್ ಅವರ ಕುತ್ತಿಗೆಗೆ ಬೀಸಿದ್ದಾನೆ. ತತ್‌ಕ್ಷಣ ತಪ್ಪಿಸಿಕೊಂಡ ಕಾರಣ ಅವರ ಬಲಭುಜಕ್ಕೆ ಏಟು ಬಿದ್ದು, ಬಲಹಣೆ, ಎಡಕೈ, ಬಲಕೈ, ಭುಜಕ್ಕೆ ಕಡಿದ ರಕ್ತದ ಗಾಯಗಳಾಗಿದೆ.
ಅಬೂಬಕರ್ ಸಿದ್ದೀಖ್ ಅವರು ಬೊಬ್ಬೆ ಹಾಕಿದಾಗ ಘಟನ ಸ್ಥಳಕ್ಕೆ ಜನ ಓಡಿಕೊಂಡು ಬರುವುದನ್ನು ಗಮನಿಸಿ, ಉಮ್ಮರ್ ನವಾಫ್, ಅಬೂಬಕರ್ ಅವರಿಗೆ ಸೇರಿದ ಮೊಬೈಲನ್ನು ಪುಡಿಗೈದು, ಸಹೋದರ ಉಮ್ಮರ್ ಫಾರೂಕ್‌ನಿಗೂ ಇದೇ ರೀತಿಯಾಗಿ ಕೊಲ್ಲುವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾನೆ. ಗಾಯಾಳುವನ್ನು ಸ್ಥಳೀಯರೊಬ್ಬರು ಕಾರಿನಲ್ಲಿ ದೇರಳಕಟ್ಟೆ ಯೇನಪೊಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.