Advertisement

ಕೋಟೆ: ಕರೆಂಟ್‌ ಕಟ್‌ ಇಲ್ಲದ ದಿನವೇ ಇಲ್ಲ!

09:41 PM Oct 22, 2019 | Lakshmi GovindaRaju |

ಎಚ್‌.ಡಿ.ಕೋಟೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್‌ ಪೂರೈಸುವ ನಿಟ್ಟಿನಲ್ಲಿ ನಿರಂತರ ಜ್ಯೋತಿ ಯೋಜನೆ ಜಾರಿಗೊಳಿಸಲಾಗಿದೆ. ದಿನದ ಎಲ್ಲಾ ವೇಳೆ ವಿದ್ಯುತ್‌ ಸರಬರಾಜು ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಆದರೆ, ಇದರ ಆಶಯವೇ ಈಡೇರುತ್ತಿಲ್ಲ. ಪದೇ ಪದೇ ವಿದ್ಯುತ್‌ ಸಮಸ್ಯೆಯಿಂದ ಜನರು ಇನ್ನಿಲ್ಲದಂತೆ ರೋಸಿ ಹೋಗಿದ್ದಾರೆ. ವಿದ್ಯುತ್‌ ಕಡಿತವಾಗದ ದಿನವೇ ಇಲ್ಲ. ಪ್ರತಿದಿನ ಈ ಅವ್ಯವಸ್ಥೆಗೆ ಹೈರಾಣಾಗಿರುವ ಜನರು ಹಿಡಶಾಪ ಹಾಕುವುದು ಸಾಮಾನ್ಯವಾಗಿದೆ.

Advertisement

ಬೆಳಗಿನ ವೇಳೆ ಹಾಗಿರಲಿ ಕೆಲವೊಮ್ಮೆ ರಾತ್ರಿ ವಿದ್ಯುತ್‌ ಕಡಿತವಾದರೆ ಮತ್ತೆ ಬರುವುದು ಮರುದಿನವೇ. ಇಡೀ ರಾತ್ರಿ ಕಗ್ಗತ್ತಲಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳ ದಿನನಿತ್ಯದ ಕೆಲಸ ಕಾರ್ಯಗಳಿಗೆ ಯಂತ್ರಗಳನ್ನು ಅವಲಂಬಿಸಿದ್ದೇವೆ. ವಿದ್ಯುತ್‌ ಇಲ್ಲದಿದ್ದರೆ ಮಿಕ್ಸಿ, ವಾಷಿಂಗ್‌ ಮಷಿನ್‌, ಫ್ರಿಡ್ಜ್, ಗೀಸರ್‌, ಫ್ಯಾನ್‌ಗಳು ತಿರುಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್‌ ಪದೇ ಪದೆ ಕಡಿತವಾಗುತ್ತಿರುವುದರಿಂದ ಜನರು ಬೇಸತ್ತಿದ್ದಾರೆ. ಸೆಸ್ಕ್ ಕಾರ್ಯವೈಖರಿಗೆ ರೋಸಿ ಹೋಗಿದ್ದಾರೆ.

3 ತಿಂಗಳಿನಿಂದ ವ್ಯತ್ಯಯ: ಬೇಸಿಗೆ ಕಾಲ ಇನ್ನೂ ದೂರವಿದ್ದು, ಮಳೆಗಾಲ ಕೂಡ ಮುಗಿದಿಲ್ಲ. ಆಗಲೇ ಕರೆಂಟ್‌ ವ್ಯತ್ಯಯ ಉಂಟಾಗಿದೆ. ಕಳೆದ ಮೂರು ತಿಂಗಳಿಂದ ವಿದ್ಯುತ್‌ ಕಡಿತಗೊಳ್ಳದ ದಿನವೇ ಇಲ್ಲವಾಗಿದೆ. ಈಗಲೇ ಪರಿಸ್ಥಿತಿ ಹೀಗಿರುವಾಗ ಇನ್ನು ಬೇಸಿಗೆಯಲ್ಲಿ ಯಾವ ರೀತಿ ಇರಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ದುರಸ್ತಿಗಾಗಿ ವಿದ್ಯುತ್‌ ಕಡಿತ: ಈ ಅವ್ಯವಸ್ಥೆ ಕುರಿತು ಪ್ರತಿಕ್ರಿಯಿಸಿರುವ ಸೆಸ್ಕ್ ಎಇಇ ಮಹೇಶ್‌ ಕುಮಾರ್‌, ಮೈಸೂರು ಜಿಲ್ಲೆಯಲ್ಲಿಯೇ ಮೂರು ತಿಂಗಳಿಂದ ವಿದ್ಯುತ್‌ ಕಡಿತಗೊಳ್ಳದೇ ಇರುವ ದಿನವೇ ಇಲ್ಲ. ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ದುರಸ್ತಿ ಕಾರ್ಯಕ್ಕಾಗಿ ವಿದ್ಯುತ್‌ ಕಡಿತಗೊಳಿಸಬೇಕಾದ ಅನಿವಾರ್ಯತೆ ಇರುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಎಚ್‌.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಲ್ಲಿ ಇಡೀ ದಿನ ವಿದ್ಯುತ್‌ ಪೂರೈಕೆಯಾಗುತ್ತಿರುವ ದಿನವೇ ಇಲ್ಲ. ಪ್ರತಿ ದಿನ ತಾಸುಗಟ್ಟಲೆ ವಿದ್ಯುತ್‌ ಕಡಿತಗೊಳ್ಳುತ್ತಲೇ ಇರುತ್ತದೆ. ದಿನವೊಂದರಲ್ಲಿ ಅದೆಷ್ಟೊ ಬಾರಿ ಕರೆಂಟ್‌ ಹೋಗುತ್ತದೆ ಅನ್ನುವ ಮಾಹಿತಿ ಗ್ರಾಹಕರಿಗೆ ತಿಳಿದಿಲ್ಲ. ವಿದ್ಯುತ್‌ ಸಮಸ್ಯೆ ಸರಿಪಡಿಸಲು ಸೆಸ್ಕ್ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ.

Advertisement

ಮಾಹಿತಿ ಇಲ್ಲ: ವಿದ್ಯುತ್‌ ದುರಸ್ತಿ ಕಾರ್ಯಕ್ಕಾಗಿ ತಿಂಗಳಲ್ಲಿ ಒಂದೆರಡು ದಿನ ವಿದ್ಯುತ್‌ ಕಡಿತಗೊಳಿಸಲಿ. ಆದರೆ, ಪ್ರತಿದಿನ ಮನಬಂದಂತೆ ವಿದ್ಯುತ್‌ ಕಡಿತಗೊಳಿಸುವುದು ಎಷ್ಟರ ಮಟ್ಟಿಗೆ ಸರಿ?, ವಿದ್ಯುತ್‌ ಪೂರೈಕೆ ವ್ಯತ್ಯಯ ಕುರಿತು ಕೂಡ ಸಾರ್ವಜನಿಕರಿಗೆ ಮಾಹಿತಿ ನೀಡುವುದಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಜನಜೀವನ ಕಷ್ಟವಾಗುತ್ತದೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮರ್ಪಕ ವಿದ್ಯುತ್‌ ಪೂರೈಸಬೇಕು ಎಂದು ಎಚ್‌.ಡಿ.ಕೋಟೆ ನಿವಾಸಿ ಪವಿತ್ರಾ ಸಂದೇಶ್‌ ಮತ್ತಿತರರು ಆಗ್ರಹಿಸಿದ್ದಾರೆ.

ದುರಸ್ತಿ ಕಾರ್ಯಕ್ಕಾಗಿ ವಿದ್ಯುತ್‌ ಕಡಿತ – ಸೆಸ್ಕ್: ಪ್ರತಿದಿನ ವಿದ್ಯುತ್‌ ದುರಸ್ತಿಗಾಗಿ ಲೈನ್‌ ಕ್ಲಿಯರ್‌ ಮಾಡಲೇಬೇಕು. ಈ ಸಂದರ್ಭದಲ್ಲಿ ವಿದ್ಯುತ್‌ ಕಡಿತಗೊಳ್ಳುತ್ತದೆ. ಒವರ್‌ ಲೋಡ್‌ ಮತ್ತು ಲೈನ್‌ ಕ್ರಾಸ್‌ ಆದಾಗ ವಿದ್ಯುತ್‌ ಕಡಿಗೊಳ್ಳುವುದು ಸಹಜ. ಪ್ರತಿ ಮನೆಗಳಲ್ಲಿ ಯುಜಿ ಕೇಬಲ್‌ (ಅಂಡರ್‌ ಗ್ರೌಂಡ್‌ ವೈರ್‌) ಅಳವಡಿಸಿಕೊಂಡರೆ ಬಹುತೇಕ ಸಮಸ್ಯೆ ಪರಿಹರಿಸಬಹುದು. ತಡರಾತ್ರಿ ವಿದ್ಯುತ್‌ ವ್ಯತ್ಯಯ ಆದರೆ ದುರಸ್ತಿಗೊಳಿಸುವುದು ಕಷ್ಟಕರ. ಹೀಗಾಗಿ ಮರುದಿನ ದುರಸ್ತಿಪಡಿಸಿ ವಿದ್ಯುತ ಸಂಪರ್ಕ ನೀಡುತ್ತೇವೆ ಎಂದು ಸೆಸ್ಕ್ ಎಇಇ ಮಹೇಶ್‌ ಕುಮಾರ್‌ ತಿಳಿಸಿದ್ದಾರೆ.

ಪಟ್ಟಣ ವಿಸ್ತಾರವಾಗಿದೆ ವಿದ್ಯುತ್‌ ಸಾಲುತ್ತಿಲ್ಲ – ಶಾಸಕ: ಎಚ್‌.ಡಿ.ಕೋಟೆ ಪಟ್ಟಣ ವ್ಯಾಪ್ತಿ ವಿಸ್ತಾರವಾಗುತ್ತಿದೆ. 13 ವಾರ್ಡ್‌ ಇದ್ದ ಪುರಸಭೆ ಇದೀಗ 23 ವಾರ್ಡ್‌ಗಳನ್ನು ಹೊಂದಿದೆ. ಸುತ್ತಮುತ್ತಲ ಕೆಲ ಹಳ್ಳಿಗಳು ಕೂಡ ಇದಕ್ಕೆ ಸೇರ್ಪಡೆಯಾಗಿವೆ. ಹೀಗಾಗಿ ವಿದ್ಯುತ್‌ ಸಾಮರ್ಥ್ಯ ಕಡಿಮೆ ಇರುವುದರಿಂದ ವಿದ್ಯುತ್‌ ವ್ಯತ್ಯಯ ಸಾಮಾನ್ಯವಾಗಿದೆ. ತ್ವರಿತಗತಿಯಲ್ಲಿ 2 ಕೋಟಿ ರೂ.ವೆಚ್ಚದ ಸಬ್‌ ಸ್ಟೇಷನ್‌ ನಿರ್ಮಿಸಲಾಗುವುದು. ಬಳಿಕ ವಿದ್ಯುತ್‌ ಸಮಸ್ಯೆ ಬಹುತೇಕ ಕಡಿಮೆಯಾಗಲಿದೆ ಎಂದು ಶಾಸಕ ಅನಿಲ್‌ ಚಿಕ್ಕಮಾದು ತಿಳಿಸಿದ್ದಾರೆ.

* ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next