ಮೈಸೂರು: ರಥಸಪ್ತಮಿ ಪ್ರಯುಕ್ತ ಮೈಸೂರು ಯೋಗ ಒಕ್ಕೂಟ ಸೇರಿದಂತೆ ಹಲವು ಯೋಗ ಸಂಸ್ಥೆಗಳ ಸಹಯೋಗದಲ್ಲಿ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಏರ್ಪಡಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಒಂದು ಸಾವಿರ ಮಂದಿ ಪಾಲ್ಗೊಂಡು 108 ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
ಮಂಗಳವಾರ ಮುಂಜಾನೆ 5.45ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಸೂರ್ಯ ಯಜ್ಞ ದಲ್ಲಿ ವಿದೇಶಿಯರು ಸೇರಿದಂತೆ ಮಕ್ಕಳು, ಹಿರಿಯ ನಾಗರಿಕರು ಭಾಗವಹಿಸಿದ್ದರು.
ವಿವಿಯಲ್ಲಿ ಯೋಗ ಕೋರ್ಸ್: ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿ, ಮಾನಸಿಕ ಮತ್ತು ದೈಹಿಕ ಸದೃಢತೆ ಮತ್ತು ಮನಃಶಾಂತಿಗೆ ಯೋಗ ಅತ್ಯಗತ್ಯವಾಗಿದ್ದು, ಪ್ರಸ್ತುತ ಯೋಗ ಶಿಕ್ಷಣ ಜಗತ್ತಿನಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೂ ಯೋಗ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ಕೋರ್ಸ್ ಆರಂಭಿಸುವ ಚಿಂತನೆ ಇದೆ ಎಂದು ಹೇಳಿದರು.
ಮೈಸೂರು ಯೋಗ ಒಕ್ಕೂಟದ ಗೌರವ ಅಧ್ಯಕ್ಷ ಡಾ.ಎ.ಎಸ್.ಚಂದ್ರಶೇಖರ್, ಒಕ್ಕೂಟದ ಅಧ್ಯಕ್ಷ ಡಾ.ಬಿ.ಪಿ.ಮೂರ್ತಿ, ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಪ್ರಧಾನ ಕಾರ್ಯದರ್ಶಿ ಕೆ.ಜಿ.ದೇವರಾಜು ಇತರರು ಹಾಜರಿದ್ದರು.
ನಗರದ ವಿವಿಧೆಡೆ ಸೂರ್ಯ ನಮಸ್ಕಾರ ರಥಸಪ್ತಮಿ ಪ್ರಯುಕ್ತ ಶ್ರೀಪತಂಜಲಿ ಯೋಗ ಪ್ರತಿಷ್ಠಾನದವತಿಯಿಂದ ಸೂರ್ಯ ನಮಸ್ಕಾರದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಐದು ಪ್ರಮುಖ ಸ್ಥಳಗಳಲ್ಲಿ ಮುಂಜಾನೆ 5.30ಕ್ಕೆ ಏಕಕಾಲದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ ಅವರಣ, ಒಂಟಿಕೊಪ್ಪಲ್‌ನ ಚೆಲುವಾಂಬ ಉದ್ಯಾನ, ಮೈಸೂರು ಡೇರಿ ಬಳಿಯ ಡೆಕಥ್ಲಾನ್ ಮುಂಭಾಗ, ಜೆಎಸ್‌ಎಸ್ ಮಹಾ ವಿದ್ಯಾಪೀಠದ ಎದುರಿನ ಬಸವ ಪ್ರತಿಮೆ ಬಳಿ, ಜೆ.ಪಿ. ನಗರದ ಗೊಬ್ಬಳಿ ಮರದ ಬಳಿ ಏರ್ಪಡಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಪ್ರತಿ ವಲಯದಲ್ಲೂ 200ಕ್ಕೂ ಹೆಚ್ಚು ಮಂದಿ ಸೂರ್ಯ ನಮಸ್ಕಾರ ಮಾಡಿದರು.