Advertisement

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ: ನಾಲ್ಕನೇ ಹಂತದ ನೆರವಿನ ಮೊತ್ತ ಶೀಘ್ರ ಬಿಡುಗಡೆ

10:20 AM Jan 27, 2020 | Hari Prasad |

ಮಂಗಳೂರು: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳಿಗೆ 4ನೇ ಹಂತದ ನೆರವಿನ ಮೊತ್ತವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ದ.ಕ. ಜಿಲ್ಲಾಡಳಿತ ಮತ್ತು ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಿತಿ ವತಿಯಿಂದ ನಗರದ ನೆಹರೂ ಮೈದಾನಿನಲ್ಲಿ ರವಿವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಅವರು ಗಣರಾಜ್ಯೋತ್ಸವ ಸಂದೇಶ ನೀಡಿದರು.

ದ.ಕ. ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 1,33,247 ರೈತರು ಫಲಾನುಭವಿಗಳಾಗಿದ್ದಾರೆ. ಕೇಂದ್ರದಿಂದ 6 ಸಾವಿರ ರೂ. ಹಾಗೂ ರಾಜ್ಯದಿಂದ ಹೆಚ್ಚವರಿಯಾಗಿ 4 ಸಾವಿರ ರೂ.ಗಳನ್ನು ಈ ಯೋಜನೆಯಡಿ ರೈತರಿಗೆ ನೀಡಲಾಗುತ್ತಿದ್ದು, ಈಗಾಗಲೇ ಮೂರು ಕಂತುಗಳ ನೆರವು ಪಾವತಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಸುಮಾರು 893 ಕೋಟಿ ರೂ. ನಷ್ಟ ಅಂದಾಜಿಸಲಾಗಿದ್ದು, ಸಂಪೂರ್ಣ ಹಾನಿಗೊಳಗಾದ 1914 ಸಂತ್ರಸ್ತ ಕುಟುಂಬಗಳಿಗೆ ಅವಶ್ಯ ವಸ್ತು ಖರೀದಿಗೆ ಆರ್ಥಿಕ ನೆರವು ನೀಡಲಾಗಿದೆ. ಸಹಕಾರ ಸಂಘಗಳಿಂದ ನೇಕಾರರು ಪಡೆದಿರುವ 50 ಸಾವಿರ ರೂ. ಸಾಲ ಮನ್ನಾ ಮಾಡಲಾಗಿದೆ.

ರೈತರು ಸಹಕಾರ ಸಂಘಗಳ ಮೂಲಕ ಪಡೆದ ಅಲ್ಪಾವಧಿ ಬೆಳೆ ಸಾಲವನ್ನು 1 ಲಕ್ಷ ರೂ.ಗಳವರೆಗೆ ಮನ್ನಾ ಯೋಜನೆಯಡಿ ಜಿಲ್ಲೆಯ ಒಟ್ಟು 67620 ರೈತರ 52647 ಲಕ್ಷ ರೂ. ಸಾಲ ಮನ್ನಾ ಮಾಡಲಾಗಿದೆ ಎಂದವರು ಹೇಳಿದರು.

Advertisement

198 ಕೋ.ರೂ. ನೀರು ಸರಬರಾಜು ಯೋಜನೆ
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್‌ ಹಾಗೂ ಮಾರ್ಗ ಮಧ್ಯೆ ಬರುವ ಗ್ರಾಮಗಳಿಗೆ ನೇತ್ರಾವತಿ ನದಿಯಿಂದ ನೀರು ಸರಬರಾಜು ಮಾಡುವ ಸುಮಾರು 198 ಕೋಟಿ ರೂ. ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆಯಡಿ 2051ನೇ ಜನಗಣತಿಯನ್ವಯ ನಿರಂತರ ನೀರು ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.

ಎ. 26ರಂದು ಸಪ್ತಪದಿ
ಹಿಂದು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಆಯ್ದ 100 ದೇವಸ್ಥಾನಗಳಲ್ಲಿ ‘ಸಪ್ತಹದಿ’ ಉಚಿತ ಸರಳ ವಿವಾಹ ಯೋಜನೆಯ ಮೊದಲ ಹಂತವಾಗಿ ಎ. 26ರಂದು ಸರಳ ವಿವಾಹ ಸಮಾರಂಭ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ವಿವರಿಸಿದರು.

ಶಾಸಕರಾದ ಯು. ಟಿ. ಖಾದರ್‌, ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯರಾದ ಐವನ್‌ ಡಿಸೋಜ, ಭೋಜೇಗೌಡ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ತಾಪಂ ಅಧ್ಯಕ್ಷ ಮೊಹಮ್ಮದ್‌ ಮೋನು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ| ಪಿ. ಎಸ್‌. ಹರ್ಷ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ನಝೀರ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌ ಮೊದಲಾದವರು ಉಪಸ್ಥಿತರಿದ್ದರು.

ಮೀನುಗಾರ ಮಹಿಳೆಯರ ಸಾಲ ಮನ್ನಾ
ಕರಾವಳಿಯ ಸುಮಾರು 23 ಸಾವಿರ ಮೀನುಗಾರ ಮಹಿಳೆಯರು ಪಡೆದಿರುವ 60.54 ಕೋಟಿ ರೂ. ಸಾಲ ಮನ್ನಾ ಮಾಡುವ ನಿರ್ಧಾರವನ್ನು ಈಗಾಗಲೇ ರಾಜ್ಯ ಸರಕಾರ ಕೈಗೊಂಡಿದೆ. ಕೃಷಿಕರಿಗೆ ನೀಡುತ್ತಿದ್ದ ಕ್ರೆಡಿಟ್‌ ಕಾರ್ಡ್‌ನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಮೀನುಗಾರರಿಗೆ ನೀಡುವ ಮೂಲಕ ಅವರಿಗೆ ಹೊಸ ಶಕ್ತಿ ನೀಡಲಾಗಿದೆ.

2019-20ನೇ ಸಾಲಿನಲ್ಲಿ ಜಿಲ್ಲೆಯ 954 ಯಾಂತ್ರೀಕೃತ ದೋಣಿಗಳಿಗೆ 28.09 ಕೋಟಿ ಡೀಸೆಲ್‌ ಮೇಲಿನ ಮಾರಾಟಕರ ಸಹಾಯಧನವನ್ನು ದೋಣಿ ಮಾಲಿಕರೆ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ.1291 ನಾಡದೋಣಿಗಳಿಗೆ ಎಪ್ರಿಲ್‌-ಸೆಪ್ಟಂಬರ್‌ವರೆಗೆ 7.92 ಲಕ್ಷ ಲೀ. ಸೀಮೆಎಣ್ಣೆ ವಿತರಿಸಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬೋಟ್‌ ಹೌಸ್‌ಗೆ ಉತ್ತೇಜನ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next