ಚಿಕ್ಕಮಗಳೂರು: ಗಂಗಾ ಕಲ್ಯಾಣ ಯೋಜನೆಯಲ್ಲಿ ಒಂದೇ ಒಂದು ರೂ. ಹೆಚ್ಚು ಕಡಿಮೆಯಾಗಿದ್ದರೂ ಅದರ ತಪ್ಪಿಗೆ ಶಿಕ್ಷೆ ಅನುಭವಿಸುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಿಯಾಂಕ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಸಂಬಂಧ ವಿಧಾನಸಭೆ ಯಲ್ಲಿ ಉತ್ತರಿಸಿದ್ದೇನೆ. ಆರೋಪ ಮಾಡಿದವರೊಂದಿಗೆ ಚರ್ಚಿಸಲು ಸಿದ್ಧವಿದ್ದೇನೆ. ಆರೋಪ ಮಾಡಿದವರು ಒಂದು ಬಾರಿ ಸಚಿವರ ಪಾತ್ರವಿಲ್ಲ ಎನ್ನುತ್ತಾರೆ.
ಇನ್ನೊಂದು ಬಾರಿ ಸಚಿವರ ಪಾತ್ರ ಇದೆ ಎನ್ನುತ್ತಾರೆ. ಯಾವುದು ಸತ್ಯ, ಯಾವುದು ಸುಳ್ಳು ತಿಳಿಯದಾಗಿದೆ. ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡೆYವಾರ್ ಭಾಷಣವನ್ನು ಪಠ್ಯದಲ್ಲಿ ಸೇರ್ಪಡೆ ಗೊಳಿಸಿರುವುದು ಸರಿಯಾಗಿದೆ. ನಾರಾಯಣಗುರು ಮತ್ತು ಭಗತ್‌ಸಿಂಗ್ ಅವರನ್ನು ಪಠ್ಯದಲ್ಲಿ ಕೈಬಿಟ್ಟಿರುವ ಬಗ್ಗೆ ತಿಳಿದಿಲ್ಲ. ಈ ಸಂಬಂಧ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದರು.
ವಿದ್ಯಾರ್ಥಿ ನಿಲಯ ಸ್ಥಾಪನೆ
ಹಿಂದುಳಿದ ವರ್ಗದವರಿಗೆ ಕನಕ ದಾಸರ ಹೆಸರಿನಲ್ಲಿ 50 ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುತ್ತಿದ್ದು, ಪ್ರತೀ ಹಾಸ್ಟೆಲ್‌ಗೆ 3.50 ಕೋಟಿ ರೂ. ವೆಚ್ಚವಾಗಲಿದೆ. 100 ಅಂಬೇಡ್ಕರ್ ವಸತಿ ನಿಲಯ ತೆರೆಯಲಾಗುವುದು. ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗೆ ಕರಾಟೆಯನ್ನು ಕಲಿಸಲಾಗುತ್ತಿದೆ.
ಅಸ್ಪೃಶ್ಯತೆ ನಿವಾರಿಸುವ ನಿಟ್ಟಿನಲ್ಲಿ ವಿನಯ ಸಾಮರಸ್ಯ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ 2408 ಹಾಸ್ಟೆಲ್‌ಗಳಲ್ಲಿ 30ಕ್ಕೂ ಹೆಚ್ಚು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅದಕ್ಕಾಗಿ 4.40 ಕೋಟಿ ರೂ. ವೆಚ್ಚವಾಗುತ್ತಿದೆ. ವಿಧಾನಸೌಧದ ಪಕ್ಕದಲ್ಲಿ ಅಂಬೇಡ್ಕರ್ ಸ್ಫೂರ್ತಿಧಾಮ ನಿರ್ಮಿಸುತ್ತಿದ್ದು, ಮುಖ್ಯಮಂತ್ರಿಗಳು 50 ಕೋಟಿ ರೂ. ಬಿಡುಗಡೆಗೊಳಿಸಿದ್ದಾರೆ ಎಂದರು.