Advertisement

ಉಚಿತ ವಿದ್ಯುತ್ ಯೋಜನೆ ತ್ವರಿತ ಅನುಷ್ಠಾನಕ್ಕೆ ಸಚಿವ ಕೋಟ ಸೂಚನೆ

05:52 PM Dec 06, 2022 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಯೋಜನೆಯ ಅನುಷ್ಠಾನ ತ್ವರಿತಗೊಳಿಸುವಂತೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ವಿಕಾಸಸೌಧದಲ್ಲಿ ಮಂಗಳವಾರ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪ.ಜಾತಿ, ಪಂಗಡ ಸಮುದಾಯಕ್ಕೆ ಪ್ರತಿ ತಿಂಗಳು 75 ಯೂನಿಟ್ ಉಚಿತ ವಿದ್ಯುತ್ ಒದಗಿಸುವ ಯೋಜನೆಯ ವಾಸ್ತವಿಕ ಅನುಷ್ಠಾನ ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಯೋಜನೆ ಜಾರಿಗೆ ಎದುರಾಗುವ ಅಡೆತಡೆ ನಿವಾರಿಸಲು ನಿಯಮಗಳನ್ನು ಸರಳೀಕರಿಸಬೇಕು ಎಂದು ಅವರು ಸೂಚಿಸಿದರು.

ಡಿಬಿಟಿ ಹೊರತುಪಡಿಸಿ ಸರಳ ಮಾರ್ಗಗಳಲ್ಲಿ ಯೋಜನೆ ಜಾರಿ ಮಾಡಿ. ಇದಕ್ಕೆ ಪರ್ಯಾಯ(ಬದಲೀ) ವ್ಯವಸ್ಥೆ ರೂಪಿಸುವಂತೆ ಸಚಿವರು ಸೂಚನೆ ನೀಡಿದರು.

ಎಸ್ಕಾಂಗಳಲ್ಲಿ ಬಾಕಿ ಉಳಿದಿರುವ ಫಲಾನುಭವಿ ಕುಟುಂಬಗಳ ವಿದ್ಯುತ್ ಶುಲ್ಕ ವಸೂಲಿ ಮತ್ತು ಪರಿಹಾರ ಕ್ರಮಗಳಿಗೆ ಮಾರ್ಗೋಪಾಯ ಕಂಡುಕೊಳ್ಳಬೇಕು,ಆದರೆ ಯೋಜನೆಯ ತ್ವರಿತ ಅನುಷ್ಠಾನ ಇಂದಿನ ಅಗತ್ಯ. ಈ ಯೋಜನೆಗೆ ವಾರ್ಷಿಕ 800 ಕೋಟಿ ರೂ. ಲಭ್ಯವಾಗುತ್ತಿದೆ. ಮುಂದೆ ಇದು ಏರಿಕೆ ಆಗಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ವಿವರ ನೀಡಿದರು.

ಸಭೆಯಲ್ಲಿ ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಕುಮಾರ್ ನಾಯಕ್ ಜಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ. ಕೆ ರಾಕೇಶ್ ಕುಮಾರ್, ಸಲಹೆಗಾರ ಡಾ॥ ಇ ವಂಕಟಯ್ಯ,ಇ ಆಡಳಿತ ಇಲಾಖೆ ನಿರ್ದೇಶಕ ದಿಲೀಶ್ ಸಾಮಿ ಹಾಗೂ ಇಂಧನ ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.

Advertisement

ಇದನ್ನೂ ಓದಿ: ಅಂಬೇಡ್ಕರ್ ಅವರ ಹೋರಾಟ ಲಕ್ಷಾಂತರ ಜನರಿಗೆ ಭರವಸೆ ನೀಡಿದೆ: ಪ್ರಧಾನಿ ಮೋದಿ

Advertisement

Udayavani is now on Telegram. Click here to join our channel and stay updated with the latest news.

Next