Advertisement

ಮತ್ತೆ ಮತ್ತೆ ರೈತರಿಗೆ ಸಮಸ್ಯೆ ನೀಡುವ ಅಂತರಗಂಗೆ

01:26 PM Jul 05, 2022 | Team Udayavani |

ಕೋಟ: ಕೋಟ ಹೋಬಳಿಯ ವಿವಿಧ ಗ್ರಾಮಗಳ ಸುಮಾರು 500 ಎಕ್ರೆ ಕೃಷಿ ಪ್ರದೇಶದಲ್ಲಿ ಅಂತರಗಂಗೆ ಎನ್ನುವ ಜಲಕಳೆ ಹಲವು ದಶಕದಿಂದ ರೈತರ ಕೃಷಿ ಬೆಳೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಕಾಂಪೋಸ್ಟ್‌ ವಿಧಾನದ ಮೂಲಕ ಈ ಕಳೆಯನ್ನು ನಾಶಪಡಿಸಬಹುದು ಎನ್ನುವುದು ಸಂಶೋಧನೆಯಿಂದ ಖಚಿತವಾದರೂ ಇದರ ಹತೋಟಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.

Advertisement

ಅಂತರಗಂಗೆ ಆವಿ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಹೇರಳವಾಗಿ ಶೇಖರಣೆಯಾಗುವ ಒಂದು ಜಲ ಕಳೆ. ಮಳೆ ಬಿದ್ದಾಕ್ಷಣ ಇದರ ಗಾತ್ರ ಹಿಗ್ಗುತ್ತದೆ ಹಾಗೂ ನೆರೆ ನೀರಿನೊಂದಿಗೆ ಸೇರಿ ಕೃಷಿ ಭೂಮಿಗೆ ಲಗ್ಗೆ ಇಟ್ಟು ಭತ್ತದ ಸಸಿಯನ್ನು ನಾಶಗೊಳಿಸುತ್ತದೆ. ಬೇಳೂರು, ಗಿಳಿಯಾರು, ಚಿತ್ರಪಾಡಿ, ಬೆಟ್ಲಕ್ಕಿ, ಮಲ್ಯಾಡಿ ಮುಂತಾದ ಕಡೆ ಈ ಸಮಸ್ಯೆ ವಿಪರೀತವಾಗಿದ್ದು ಈ ಬಾರಿ ಕೂಡ ಸಮಸ್ಯೆ ಮರುಕಳಿಸಿದೆ. ಸಮಸ್ಯೆಗೆ ಹೆದರಿ ಹಲವಾರು ಮಂದಿ ರೈತರು ಹಲವು ಎಕ್ರೆ ಕೃಷಿಭೂಮಿಯನ್ನು ಈಗಾಗಲೇ ಹಡಿಲು ಹಾಕಿದ್ದಾರೆ.

ಸಂಶೋಧನೆ ಅನುಷ್ಠಾನವಿಲ್ಲ

ಬ್ರಹ್ಮಾವರ ಕೃಷಿವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೌತಿಕ ವಿಧಾನದಲ್ಲಿ ನೀರಿನಿಂದ ಅಂತರಗಂಗೆಯನ್ನು ಬೇರ್ಪಡಿಸಿ ಸಗಣಿ ಗೊಬ್ಬರವನ್ನು ಮಿಶ್ರಣ ಮಾಡಿ ಆ ಮಿಶ್ರಣಕ್ಕೆ ವೆಸ್ಟ್ಡಿ ಕಂಪೋಸರ್ನ ದ್ರಾವಣವನ್ನು ಬೆರೆಸಿ 30 ದಿನಗಳವರೆಗೆ ಕೊಳೆಸಿ ಎರೆಹುಳುಗಳನ್ನು ಬಿಟ್ಟಾಗ ಅಂತರಗಂಗೆ ಎರೆ ಕಾಂಪೋಸ್ಟ್‌ಆಗಿ ಪರಿವರ್ತಿಸಲಾಗುತ್ತದೆ ಮತ್ತು ಈ ಕಂಪೋಸ್ಟ್‌ನಲ್ಲಿ ಸಾರಜನಕ, ರಂಜಕ, ಪೊಟ್ಯಾಶಿಯಂ ಅಂಶಗಳು ದೊರೆಯಲಿದ್ದು ಬೆಳೆಗಳಿಗೆ ಉತ್ತಮ ಸಾರವಾಗಲಿದೆ ಎನ್ನುವುದನ್ನು ಸಂಶೋಧಿಸಿತ್ತು.ಹಲವು ಕಡೆ ಈ ಬಗ್ಗೆ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗಿತ್ತು. ಆದರೆ ಆಡಳಿತ ವ್ಯವಸ್ಥೆ ಈ ವಿಧಾನವನ್ನು ಬಳಸಿಕೊಂಡು ಅಂತರಗಂಗೆ ಹಾವಳಿ ನಿಯಂತ್ರಿಸಲು ಪೂರಕ ಯೋಜನೆ ಕೈಗೊಂಡಿಲ್ಲ.

ಹೂಳೆತ್ತದೆ ಸಮಸ್ಯೆ

Advertisement

ಇಲ್ಲಿನ ದೊಡ್ಡ ಹೊಳೆಯ ಹೂಳೆತ್ತದಿರುವುದು ಸಮಸ್ಯೆ ಗಂಭೀರವಾಗಲು ಪ್ರಮುಖ ಕಾರಣವಾಗಿದೆ. ಹೊಳೆಯ ಮೂಲಕ ನೀರು ಸರಾಗವಾಗಿ ಹರಿದರೆ ನೀರಿನೊಂದಿಗೆ ಅಂತರಗಂಗೆ ಸಮುದ್ರ ಸೇರುತ್ತದೆ. ಆದರೆ ಈ ಬಗ್ಗೆ ಕೂಡ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ.

ಹೋರಾಟ ರೂಪಿಸಲಿದ್ದೇವೆ: ನೂರಾರು ಎಕ್ರೆಯಲ್ಲಿ ಈ ಸಮಸ್ಯೆ ಇರುವುದರಿಂದ ಆಡಳಿತ ವ್ಯವಸ್ಥೆ ಸೂಕ್ತವಾದ ಯೋಜನೆಯೊಂದನ್ನು ರೂಪಿಸಬೇಕಿದೆ. ಆದರೆ ಯಾರೂ ಕೂಡ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮಂಗಳವಾರ ರೈತರು ಕೋಟದಲ್ಲಿ ಸಭೆ ಸೇರಿ ಈ ಬಗ್ಗೆ ಹೋರಾಟ ರೂಪಿಸಲಿದ್ದೇವೆ. – ಭರತ್‌ ಶೆಟ್ಟಿ ಗಿಳಿಯಾರು, ಸ್ಥಳೀಯ ರೈತರು

ನಾಶ ಪಡಿಸುವುದು ಮುಖ್ಯ: ಇಲಾಖೆಯಿಂದ ವಿಶೇಷವಾದ ಅನುದಾನ ಇದುವರೆಗೆ ಲಭ್ಯವಿಲ್ಲ. ಕಳೆಯನ್ನು ನಾಶಪಡಿಸುವುದ ಮಾತ್ರ ಪರಿಹಾರವಾಗಿದ್ದು ರೈತರು ಎಲ್ಲ ಒಟ್ಟಾಗಿ ಇದರ ಹತೋಟಿಗೆ ಕೈ ಜೋಡಿಸಬೇಕಾಗುತ್ತದೆ. –ಕೆಂಪೇಗೌಡ, ಜಂಟಿ ನಿರ್ದೇಶಕರು ಕೃಷಿ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next