Advertisement

Kota: ಬ್ಲಾಕ್‌ ಲಿಸ್ಟ್‌ನಿಂದ ಅಪಾಯಕಾರಿ ಸ್ಥಳಗಳೇ ಔಟ್‌!

03:18 PM Dec 17, 2024 | Team Udayavani |

ಕೋಟ: ಉಡುಪಿ ಜಿಲ್ಲೆಯಲ್ಲಿ 2020ರಿಂದ 22ರ ವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತವಾದ ಸ್ಥಳಗಳನ್ನು ಗಮನದಲ್ಲಿರಿಸಿಕೊಂಡು 20 ಬ್ಲಾಕ್‌ ಸ್ಪಾಟ್‌ಗಳನ್ನು ಜಿಲ್ಲಾಡಳಿತ ನೇತೃತ್ವದ ಸಮಿತಿ ಗುರುತಿಸಿದ್ದು ಇಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಆದರೆ ಈ ಪಟ್ಟಿಯಲ್ಲಿ ಬ್ರಹ್ಮಾವರ ತಾಲೂಕಿನ ಕೆಲವು ಅತ್ಯಂತ ಅಪಾಯಕಾರಿ ಸ್ಥಳಗಳು ಸೇರ್ಪಡೆಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ. ಹೀಗಾಗಿ ಈ ಬಗ್ಗೆ ಪುನಃ ಪರಿಶೀಲನೆ ನಡೆಸಿ ಅವುಗಳ ಬಗ್ಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬೇಡಿಕೆ ಸಾರ್ವಜನಿಕ ವಲಯದಲ್ಲಿದೆ.

Advertisement

ಜಿಲ್ಲೆಯಲ್ಲಿ ಸಣ್ಣಪುಟ್ಟ ಹಾಗೂ ಗಂಭೀರ ಅಪಘಾತಗಳು ನಡೆಯುವ ಪ್ರದೇಶಗಳ ಬಗ್ಗೆ ನಿಗಾ ಇರಿಸಿ ಪೊಲೀಸ್‌ ಇಲಾಖೆ, ಹೆದ್ದಾರಿ ಇಲಾಖೆ ಹಾಗೂ ಜಿಲ್ಲಾಡಳಿತದ ರಸ್ತೆ ಸುರಕ್ಷಾ ಸಮಿತಿ ಸೇರಿ ಬ್ಲ್ಯಾಕ್‌ ಸ್ಪಾಟ್‌ ಗಳನ್ನು ಗುರುತಿಸಿದ್ದಾರೆ. ಪಡುಬಿದ್ರಿ ಜಂಕ್ಷನ್‌, ಉಚ್ಚಿಲ, ಬ್ರಹ್ಮಾವರದ ಮಹೇಶ್‌ ಆಸ್ಪತ್ರೆ ಜಂಕ್ಷನ್‌, ಬ್ರಹ್ಮಾವರ ಪೆಟ್ರೋಲ್‌ ಪಂಪ್‌, ಕುಮ್ರಗೋಡು ಕ್ರಾಸ್‌, ಕೋಟ ಜಂಕ್ಷನ್‌, ತೆಕ್ಕಟ್ಟೆ ಜಂಕ್ಷನ್‌, ಕುಂಭಾಶಿ ಸ್ವಾಗತ ಗೋಪುರ, ಮೂಳೂರು, ಕಾಪು ವಿದ್ಯಾನಿಕೇತನ ಜಂಕ್ಷನ್‌, ಪಾಂಗಳ, ಅಂಬಲಪಾಡಿ ಜಂಕ್ಷನ್‌, ನಿಟ್ಟೂರು ಜಂಕ್ಷನ್‌, ಅಂಬಾಗಿಲು ಜಂಕ್ಷನ್‌ಗಳು ಈ ಪಟ್ಟಿಯಲ್ಲಿದೆ.

ಈ ಹಿಂದೆ ಜಿಲ್ಲೆಯಲ್ಲಿ ಸುಮಾರು 30 ಬ್ಲ್ಯಾಕ್‌ ಸ್ಪಾಟ್‌ಗಳಿತ್ತು. ಅದನ್ನು ಈಗ 20ಕ್ಕೆ ಇಳಿಸಿದ್ದರಿಂದ ಕೆಲವೊಂದು ಪ್ರಮುಖ ಪ್ರದೇಶಗಳನ್ನು ಕೈಬಿಡಲಾಗಿದೆ ಎನ್ನುವ ಅಭಿಪ್ರಾಯವಿದೆ. ಆದರೆ, ಹೀಗೆ ಮಾಡುವುದರಿಂದ ಅವಘಡಗಳು ಹೆಚ್ಚಾಗಬಹುದು ಎನ್ನುವುದು ಸಾರ್ವಜನಿಕರ ಅಭಿಮತ. ಹೀಗಾಗಿ ಸಾರ್ವಜನಿಕರ ಜತೆ ಚರ್ಚಿಸಿ ಕೈಬಿಟ್ಟ ಪ್ರದೇಶಗಳನ್ನು ಸೇರಿಸಬೇಕು ಎಂಬ ಆಗ್ರಹವಿದೆ.

ಕೈಬಿಟ್ಟ ಅಗತ್ಯ ಸ್ಥಳಗಳು
ಬ್ರಹ್ಮಾವರ ಬಸ್‌ ನಿಲ್ದಾಣ, ಆಕಾಶವಾಣಿ ಜಂಕ್ಷನ್‌ ಇವೆರಡೂ ಜಂಕ್ಷನ್‌ಗಳು ಗೊಂದಲದ ಗೂಡಾಗಿವೆ. ಜತೆಗೆ ಮಾಬುಕಳ ಸೇತುವೆಯಿಂದ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ತನಕ ಹೆಚ್ಚು ಅಪಘಾತಗಳು ನಡೆಯುತ್ತಿದೆ. 2024ನೇ ಸಾಲಿನಲ್ಲಿ ಸುಮಾರು 30ಕ್ಕೂ ಹೆಚ್ಚು ಅಪಘಾತಗಳು ಇಲ್ಲಿ ನಡೆದಿದ್ದು ಎರಡು ಜೀವಹಾನಿ ಕೂಡ ಸಂಭವಿಸಿದೆ.

Advertisement

ಸಾಸ್ತಾನ, ಸಾಲಿಗ್ರಾಮ ಜಂಕ್ಷನ್‌
ಸಾಸ್ತಾನ ಜಂಕ್ಷನ್‌ ಮತ್ತು ಸಾಲಿಗ್ರಾಮ ದೇಗುಲದ ಎದುರಿನ ಜಂಕ್ಷನ್‌ನಲ್ಲೂ ಸಮಸ್ಯೆ ಇದೆ. 2022-2024ನೇ ಸಾಲಿನಲ್ಲಿ 20ಕ್ಕೂ ಹೆಚ್ಚು ಅಪಘಾತ ನಡೆದಿದ್ದು 4ಕ್ಕೂ ಅಧಿಕ ಜೀವ ಹಾನಿ ಸಂಭವಿಸಿದೆ.

ಕೋಟ ಹೈಸ್ಕೂಲ್‌ ಜಂಕ್ಷನ್‌
ಅತೀ ಹೆಚ್ಚು ವಿದ್ಯಾರ್ಥಿಗಳು ಓಡಾಟ ನಡೆಸುವ ಕೋಟ ಹೈಸ್ಕೂಲ್‌ ಜಂಕ್ಷನ್‌ನಲ್ಲಿ ಕೂಡ ಹೆಚ್ಚಿನ ಅಪಘಾತಗಳು ನಡೆದಿದ್ದು ಅಪಘಾತ ಸೂಕ್ಷ್ಮ ಪ್ರದೇಶವಾಗಿದೆ.

ಕಳೆದ ವರ್ಷ 1,284 ಅಪಘಾತ
ಜಿಲ್ಲೆಯಲ್ಲಿ ರಸ್ತೆ ಅಪಘಾತ ಪ್ರಕರಣ ಪ್ರತಿ ವರ್ಷವೂ ಹೆಚ್ಚುತ್ತಿದೆ. ಕಳೆದ ವರ್ಷ 1,284 ರಸ್ತೆ ಅಪಘಾತ ಪ್ರಕರಣದಲ್ಲಿ 222 ಜನ ಮೃತಪಟ್ಟಿದ್ದು, 1,381 ಪ್ರಕರಣ ದಲ್ಲಿ ಸಾಮಾನ್ಯ, ತೀವ್ರ ತರದ ಗಾಯಗಳು ಉಂಟಾಗಿದೆ. ಅವುಗಳಲ್ಲಿ ಹೆಚ್ಚಾಗಿ ಶೇ.90ರಷ್ಟು ಅತೀವೇಗದ ವಾಹನ ಚಾಲನೆ ಹಾಗೂ ಅಜಾಗರೂಕತೆಯಿಂದಲೇ ಉಂಟಾಗಿದೆ. ಕೆಲವು ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದಲೂ ಆಗಿವೆ ಎನ್ನುವುದನ್ನು ಸಮೀಕ್ಷೆ ಹೇಳುತ್ತದೆ.

ಪರಿಹಾರ ಸೂತ್ರಗಳು ಏನು?
– ಬ್ರಹ್ಮಾವರದ ಪ್ರಮುಖ ಎರಡು ಜಂಕ್ಷನ್‌ಗಳ ಸಮಸ್ಯೆ ಪರಿಹಾರಕ್ಕೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಬೇಕಿದೆ.
– ಮಾಬುಕಳದಲ್ಲಿ ಈಗಿರುವ ಯೂಟರ್ನ್ ಕ್ರಾಸ್‌ನಲ್ಲಿರುವುದರಿಂದ ಕುಂದಾಪುರ ಕಡೆಯಿಂದ ಬರುವ ವಾಹನಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಅದನ್ನು ಸರಿಪಡಿಸಬೇಕು. ಸರ್ವೀಸ್‌ ರಸ್ತೆ ನಿರ್ಮಾಣ, ಬಸ್ಸು ತಂಗುದಾಣ ಅಗತ್ಯವಿದೆ. ಹೈಮಾಸ್ಟ್‌ ದೀಪ ಅಳವಡಿಸಬೇಕು.
– ಸಾಸ್ತಾನ ಬಸ್ಸು ನಿಲ್ದಾಣದಲ್ಲಿ ಕೋಡಿ ರಸ್ತೆಯಲ್ಲಿ ಬಂದು ಉಡುಪಿ ಕಡೆಗೆ ಸಾಗುವ ವಾಹನಗಳು ನೇರವಾಗಿ ಪ್ರವೇಶಿಸುವುದನ್ನು ತಪ್ಪಿಸಿ ಟೋಲ್‌ ಸಮೀಪದ ಯು ಟರ್ನ್ ಮೂಲಕ ಮುಖ್ಯ ರಸ್ತೆ ಪ್ರವೇಶಿಸುವಂತೆ ಮಾಡಬಹುದು. ಇಲ್ಲಿ ಕೂಡ ಸರ್ವಿಸ್‌ ರಸ್ತೆ, ಹೈಮಾಸ್ಟ್‌ ದೀಪ ಅಳವಡಿಕೆ ಅಗತ್ಯ.
– ಸಾಲಿಗ್ರಾಮ ದೇಗುಲದ ಸಮೀಪ ಅಪಘಾತ ಪರಿಹಾರಕ್ಕೆ ಸಮೀಕ್ಷೆಗಳು ನಡೆಯುತ್ತಿದ್ದು ಅದನ್ನು ಕಾರ್ಯಗತಗೊಳಿಸಬೇಕು.
– ಕೋಟ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ಸಂಚಾರಕ್ಕೆ ಪಾದಚಾರಿ ಮೇಲ್ಸೇತುವೆ, ಸರ್ವೀಸ್‌ ರಸ್ತೆ, ಸಿಗ್ನಲ್‌ ವ್ಯವಸ್ಥೆ ಕೈಗೊಳ್ಳಬಹುದು.
– ಅಮೃತೇಶ್ವರೀ ಜಂಕ್ಷನ್‌ನಲ್ಲಿ ಘನ ವಾಹನಗಳು ಹೆಚ್ಚಾಗಿ ಸಂಚರಿಸುವುದರಿಂದ ಈ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಸೂತ್ರ ಕಂಡುಹಿಡಿಯಬೇಕು.

ಸೂಚಿತ ಪರಿಹಾರವೂ ಅವೈಜ್ಞಾನಿಕ
ಪೊಲೀಸ್‌ ಇಲಾಖೆ, ಹೆದ್ದಾರಿ ಇಲಾಖೆ ಹಾಗೂ ಜಿಲ್ಲಾಡಳಿತದ ರಸ್ತೆ ಸುರಕ್ಷಾ ಸಮಿತಿ ನೀಡಿದ ಪರಿಹಾರ ಕ್ರಮದಲ್ಲಿ ಕೋಟ ಜಂಕ್ಷನ್‌ನಲ್ಲಿ ಅತೀ ಹೆಚ್ಚು ಅಪಘಾತಗಳು ನಡೆಯುತ್ತದೆ. ಹೀಗಾಗಿ ಇಲ್ಲಿನ ಸಮಸ್ಯೆಗೆ ಪರಿಹಾರವಾಗಿ ಅಮೃತೇಶ್ವರಿ ದೇವಸ್ಥಾನದ ತಿರುವಿನಲ್ಲಿರುವ ಓಪನಿಂಗ್‌ ಅನ್ನು ಮುಚ್ಚಿ, ಅಮೃತೇಶ್ವರೀ ದೇವಸ್ಥಾನದ ಕಡೆಯಿಂದ ಬರುವ ವಾಹನಗಳು 50 ಮೀ.ದೂರದಲ್ಲಿರುವ ಅಂಡರ್‌ ಪಾಸ್‌ನಲ್ಲಿ ಸಾಗಬೇಕು ಎನ್ನುವುದಾಗಿ ಪರಿಹಾರ ಸೂಚಿಸಲಾಗಿದೆ. ಆದರೆ ಸೂಚಿತ ಪ್ರದೇಶವು ಕ್ಯಾಟಲ್‌ಪಾಸ್‌ ಆಗಿದ್ದು ಕಾರು ಹೊರತುಪಡಿಸಿ ಯಾವುದೇ ಘನ ವಾನಹ ಸಂಚರಿಸಲು ಸಾಧ್ಯವಿಲ್ಲ. ಹೀಗಾಗಿ ಪರಿಹಾರವೇ ಅವೈಜ್ಞಾನಿಕವಾಗಿದೆ.

ಪರಿಶೀಲಿಸಿ ಕ್ರಮ
ಈಗಾಗಲೇ ಹೆದ್ದಾರಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ಬೈಂದೂರಿನಿಂದ ಮಂಗಳೂರು ತನಕದ ಅಪಘಾತ ಪ್ರದೇಶಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವಂತೆ ತಿಳಿಸಿದ್ದು ಕೇಂದ್ರ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪರಿಹಾರ ಯೋಜನೆಗಳ ಬಗ್ಗೆ ವರದಿ ನೀಡಲಿದೆ. ಹಂತ- ಹಂತವಾಗಿ ಈ ಬಗ್ಗೆ ಪರಿಹಾರ ರೂಪಿಸಲಾಗುವುದು.
– ಕೋಟ ಶ್ರೀನಿವಾಸ್‌ ಪೂಜಾರಿ, ಸಂಸದರು

ಇಲಾಖೆ ವಿಫ‌ಲ
ಮಾಬುಕಳ ಸೇರಿದಂತೆ ಹಲವಾರು ಬ್ಲಾಕ್‌ ಸ್ಪಾಟ್‌ಗಳಲ್ಲಿ ಅಪಘಾತ ತಡೆ ಹಾಗೂ ಮೂಲ ಸೌಕರ್ಯ ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖೆ ವಿಫಲವಾಗಿದ್ದು, ಈ ಬಗ್ಗೆ ಇನ್ನಾದರೂ ಗಮನಹರಿಸಬೇಕಿದೆ.
– ಶ್ರೀಪತಿ, ಅಧಿಕಾರಿ, ಹಂಗಾರಕಟ್ಟೆ, ಸ್ಥಳೀಯರು

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next