Advertisement

ಕೋಟ ಬಂದ್‌: ಮಣಿದ ನವಯುಗ

09:45 AM Dec 08, 2018 | |

ಕೋಟ: ಸ್ಥಳೀಯ ವಾಹನಗಳಿಂದ ಸುಂಕ ಸಂಗ್ರಹ ವಿರೋಧಿಸಿ ಶುಕ್ರವಾರ ಭಾರೀ ಜನಬೆಂಬಲದೊಂದಿಗೆ ನಡೆದ ಕೋಟ ಬಂದ್‌ನ ಬಿಸಿ ನವಯುಗ ಕಂಪೆನಿಗೆ ತಟ್ಟಿದ್ದು, ಜಿಲ್ಲಾ ಪಂಚಾಯತ್‌ನ ಕೋಟ ಕ್ಷೇತ್ರ ವ್ಯಾಪ್ತಿಯ ಎಲ್ಲ ವಾಹನಗಳಿಗೆ ಟೋಲ್‌ನಿಂದ ವಿನಾಯಿತಿಗೆ ಒಪ್ಪಿಗೆ ನೀಡಿದೆ. 

Advertisement

ಮಾಬುಕಳದಿಂದ ಮಣೂರುವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಜನಸಂಚಾರ ವಿರಳವಾಗಿತ್ತು. ಸಾಸ್ತಾನ ಟೋಲ್‌ಗೇಟ್‌ನಲ್ಲಿ ನಡೆದ ಪ್ರತಿಭಟನೆಗೆ ಕೋಟ ಆಸುಪಾಸು, ಜಿಲ್ಲೆಯ ವಿವಿಧ ಭಾಗಗಳ 3 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು. 

ಜಿಲ್ಲಾಧಿಕಾರಿ ಸಭೆ;ತಾತ್ಕಾಲಿಕ ಜಯ
ಪ್ರತಿಭಟನೆ ಕಾವು ಏರುತ್ತಿದ್ದಂತೆ ಅಪರಾಹ್ನ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಹೋರಾಟ
ಗಾರರನ್ನು ಕಂಪೆನಿ ಜತೆಗೆ ಮಾತುಕತೆಗೆ ಉಡುಪಿ ಪ್ರವಾಸಿ ಮಂದಿರಕ್ಕೆ ಬರಹೇಳಿದರು. ಸಭೆ ಆರಂಭದಲ್ಲಿ ಕಂಪೆನಿ ಬಗ್ಗದಿದ್ದಾಗ ಹೋರಾಟಗಾರರು ಟೋಲ್‌ಗೆ ಆಗಮಿಸಿ ಪ್ರತಿಭಟನೆ ತೀವ್ರಗೊಳಿಸಿದರು. ಸಂಜೆ ಕೈಮೀರುವ ಹಂತ ತಲುಪಿದ ವೇಳೆ ಜನಪ್ರತಿನಿಧಿಗಳು ಮಾತುಕತೆ ಮುಗಿಸಿ ಟೋಲ್‌ಗೆ ಆಗಮಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸ್ಥಳೀಯ ವಾಹನಗಳಿಗೆ ಉಚಿತ ಸಂಚಾರಕ್ಕೆ ಕಂಪೆನಿ ಒಪ್ಪಿಕೊಂಡಿರುವುದನ್ನು ಘೋಷಿಸಿದರು.

ಮತ್ತೆ ರಸ್ತೆ ತಡೆ; ಬಂಧನ 
ಎಲ್ಲಾ ಬೇಡಿಕೆಯನ್ನು ಪೂರೈಸಬೇಕು. 20 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಉಚಿತ ಪ್ರವೇಶ ನೀಡಬೇಕು ಎಂದು ಹೋರಾಟಗಾರರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಸಂಸದರು, ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ 62 ಮಂದಿಯನ್ನು ವಶಕ್ಕೆ ಪಡೆದು ಅನಂತರ ಬಿಡುಗಡೆಗೊಳಿಸಲಾಯಿತು.  ಈ ವೇಳೆ ಹತ್ತು ನಿಮಿಷ ಸಂಚಾರಕ್ಕೆ ಸಮಸ್ಯೆಯಾಯಿತು. ವಾಹನಗಳಿಗೆ ಕೋಟ-ಬನ್ನಾಡಿ ರಸ್ತೆಯ ಮೂಲಕ
ಬದಲಿ ಮಾರ್ಗ ವ್ಯವಸ್ಥೆ ಮಾಡ ಲಾಯಿತು. ಸ್ಥಳದಲ್ಲಿ 300ಕ್ಕೂ ಹೆಚ್ಚು ಪೊಲೀಸ್‌ ಸಿಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಶಾಸಕ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ, ಲಾಲಾಜಿ ಮೆಂಡನ್‌, ಉಡುಪಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ ಬಾಬು, ರಾಕೇಶ್‌ ಮಲ್ಲಿ ಹಾಗೂ ಅಪಾರ ಸಂಖ್ಯೆಯ ಜನಪ್ರತಿನಿಧಿಗಳು, ಹೋರಾಟಗಾರರು ಉಪಸ್ಥಿತರಿದ್ದರು. ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್‌ ಶೆಟ್ಟಿ ಹೋರಾಟದ ನೇತೃತ್ವ ವಹಿಸಿದ್ದರು.

ವಿನಾಯಿತಿ ಯಾರಿಗೆ?
ಮಾಬುಕಳದಿಂದ ಕರಿಕಲ್‌ಕಟ್ಟೆವರೆಗಿನ ಎಲ್ಲ ವಾಹನಗಳಿಗೆ ಉಚಿತ ಸಂಚಾರಕ್ಕೆ ಕಂಪೆನಿ ಒಪ್ಪಿದೆ. ಟೂರಿಸ್ಟ್‌ ವಾಹನಗಳ ಪಟ್ಟಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ನೀಡಲು ಸೂಚಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

ಟ್ಯಾಕ್ಸಿಗಳಿಗೆ ರಿಯಾಯಿತಿ:
 ಡಿ. 22ರ ಬಳಿಕ  ಪ್ರತಿಭಟನೆ ಜಿಲ್ಲಾಧಿಕಾರಿಗಳ ಸಭೆಯ ಸಂದರ್ಭ ಉಡುಪಿ ಜಿಲ್ಲೆಯ ಎಲ್ಲ ಟ್ಯಾಕ್ಸಿಗಳಿಗೆ ಕಡಿಮೆ ದರದಲ್ಲಿ ಪಾಸ್‌ ನೀಡಬೇಕು ಎಂಬ ಬೇಡಿಕೆಯನ್ನು ಉಡುಪಿ ಶಾಸಕ ರಘುಪತಿ ಭಟ್‌ ಇಟ್ಟರು. ಆದರೆ ಕಂಪೆನಿ ಯಾವುದೇ ಸ್ಪಂದನೆ ನೀಡಲಿಲ್ಲ. ಹೀಗಾಗಿ ಡಿ. 22ರ ಬಳಿಕ ಮತ್ತೆ ಹೋರಾಟ ನಡೆಸುವುದಾಗಿ ಟ್ಯಾಕ್ಸಿಮನ್‌ ಅಸೋಸಿಯೇಶನ್‌ ಪರವಾಗಿ ರಘುಪತಿ ಭಟ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next