Advertisement

Koratagere; ಅರಸಾಪುರ ರಸ್ತೆ ಅಗಲೀಕರಣಕ್ಕೆ ಶಾಲಾ ಕೊಠಡಿಗಳು ಬಲಿ

08:39 PM Dec 22, 2023 | Team Udayavani |

ಕೊರಟಗೆರೆ:ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಜ್ಞಾನ ದೇಗುಲದಲ್ಲಿ ಹಲವು ಎಡರು ತೊಡರುಗಳಿಂದ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಅಡಚಣೆಯಾಗುತ್ತಿದ್ದು, ಅಂತಹದೇ ಘಟನೆಯೊಂದು ಕೊರಟಗೆರೆ ತಾಲೂಕಿನ ಅರಸಾಪುರದಲ್ಲಿ ಜರುಗಿದ್ದು, ರಸ್ತೆ ಅಗಲಿಕರಣಕ್ಕೆ ಶಾಲೆ ನೆಲ ಸಮವಾದ ಕಾರಣ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುವ ಅನಿವಾರ್ಯ ದುಸ್ಥಿತಿ ಒದಗಿದೆ.

Advertisement

ಕೊರಟಗೆರೆ ತಾಲೂಕಿನ ಅರಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಊರಲ್ಲಿ ಸಮರ್ಪಕ ಶಾಲಾ ಕೊಠಡಿಗಳಿಲ್ಲದೆ ಮರದ ಕೆಳಗಡೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬೋಧನೆ ನಡೆಸುತ್ತಿದ್ದರೆ, 4 ಹಾಗೂ 5ತರಗತಿ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ಗೊಂದಲದ ನಡುವೆ ಪಾಠ ಪ್ರವಚನ ಕೇಳುವ ಅನಿವಾರ್ಯತೆ ಒದಗಿರುವುದು ಆಧುನಿಕ ಸಮಾಜವನ್ನು ಅಣಕಿಸುವಂತಿದೆ.

ಅರಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗೌರಿಬಿದನೂರು ಹಾಗೂ ಮಧುಗಿರಿ ಎನ್.ಹೆಚ್ 4 ಚತುಸ್ಪತಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮೂರು ಕೊಠಡಿಗಳು ಜೊತೆಗೆ ಕಾಂಪೌಂಡ್ ನಾಶವಾದ ಕಾರಣ, ಪ್ರೌಢಶಾಲೆಯ ಕೊಠಡಿಗಳನ್ನು ಬಳಸಿಕೊಳ್ಳುತ್ತಿದ್ದು ಜೊತೆಗೆ ಉರ್ದು ಶಾಲೆಯ ಕೊಠಡಿಯನ್ನು ಬಳಸಿದರೂ 1, 2, 3 ಹಾಗೂ 7 ನೇ ತರಗತಿ ವಿದ್ಯಾರ್ಥಿಗಳು ಮರದ ನೆರಳಿನಲ್ಲಿ ಕುಳಿತು ಪಾಠ ಪ್ರವಚನ ಕೇಳಿದರೆ 4 ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ಕುಳಿತು ಗೊಂದಲದ ನಡುವೆ ಪಾಠ ಕೇಳುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಮಾರಕವಾಗಿದೆ.

ಈ ಶಾಲೆಗೆ ಮತ್ತೊಂದು ದೊಡ್ಡ ಅಡಚಣೆ ಅಂದ್ರೆ ರಸ್ತೆ ಅಗಲೀಕರಣ ಹಾಗೂ ಚತುಸ್ಪಥ ರಸ್ತೆಯಿಂದ ವಾಹನಗಳ ದಟ್ಟಣೆ ಹೆಚ್ಚಾಗಿದ್ದು ಹಿರಿಯ ಪ್ರಾಥಮಿಕ ಪಾಠ ಶಾಲೆಯಾದ ಕಾರಣ, ಸಣ್ಣ ಪುಟ್ಟ ಮಕ್ಕಳು 1 ತರಗತಿಯಿಂದ 4 ತರಗತಿಯ ವಿದ್ಯಾರ್ಥಿಗಳು ರಸ್ತೆ ದಾಟಿ ಶಾಲೆಗೆ ಹೋಗಲು ತುಂಬಾ ಅನಾನುಕೂಲವಾಗಿ ಹರ ಸಾಹಸ ಪಡುವ ಪರಿಸ್ಥಿತಿ ಇರುವುದರಿಂದ, ಜೊತೆಗೆ ಈ ಹಿಂದೆ ಹಲವು ಬಾರಿ ಈ ರಸ್ತೆಯಲ್ಲಿ ರಸ್ತೆ ದಾಟುವಾಗ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರುಗಳಿಗೆ ಎರಡು ಮೂರು ಬಾರಿ ಅಪಘಾತವಾಗಿ ದೊಡ್ಡ ಅವಘಡಗಳಿಂದ ಪಾರಾಗಿ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶಾಲೆಗೆ ಹೋಗಿದ್ದಾರೆ. ಅಲ್ಲಿನ ಪೋಷಕರು ನೆನೆದು ಈ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಕಾಂಪೌಂಡ್ ಇಲ್ಲದಿರುವುದು ಜೊತೆಗೆ ರಸ್ತೆ ದಾಟಿ ವಿದ್ಯಾರ್ಥಿಗಳನ್ನು ಕಳಿಸುವುದು ಬಹಳ ಅಪಾಯಕಾರಿ ಆದಕಾರಣ ಈ ಶಾಲೆಗೆ ಯಾರೊಬ್ಬ ವಿದ್ಯಾರ್ಥಿಗಳು ಬರಲು ಸಾಧ್ಯವೇ ಇಲ್ಲ ಎಂದು ಇಲ್ಲಿನ ವಿದ್ಯಾರ್ಥಿಗಳ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟೇಲ್ಲಾ ಗೊಂದಲಗಳ ನಡುವೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಿಸಿಯೂಟಕ್ಕಾಗಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಿದ್ದು, ಶಿಕ್ಷಕರುಗಳು ಸಹ ಪಾಠ ಪ್ರವಚನಗಳಿಗೆ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಕೊಠಡಿಗಳಿಗೆ ಓಡಾಡುವಂಥದ್ದು ಅವರಿಗೂ ಸಹ ತಲೆ ನೋವಾಗಿ ಪರಿಣಮಿಸಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಬ್ಬರಿಗೂ ಈ ಪರಿಸ್ಥಿತಿ ಒಂದು ರೀತಿ ದೋಲಾಯಮಾನವಾಗಿ ಇಡೀ ಶಿಕ್ಷಣ ವ್ಯವಸ್ಥೆ ಏರುಪೇರಾಗಿದೆ.

Advertisement

ಪ್ರೌಢಶಾಲೆ ಇಲ್ಲದಿದ್ದರೆ ದೇವರೇ ಗತಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಸ್ತೆ ಅಗಲೀಕರಣದಿಂದ ಶಾಲಾ ಕಾಂಪೌಂಡ್ ಹಾಗೂ ಕೊಠಡಿಗಳು ನೆಲ ಸಮವಾದ ನಂತರ ಅಲ್ಲಿನ ಸರ್ಕಾರಿ ಪ್ರೌಢಶಾಲೆ, ಆಸರೆಯಾಗಿದ್ದು ಅಲ್ಲಿನ 2 ಕೊಠಡಿಗಳನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದ್ದರಿಂದ ಶಾಲೆ ಯಥಾವತ್ತು ನಡೆಯುವಂತಾಗಿದ್ದು, ಉರ್ದು ಶಾಲೆ ಸಹ ಆಸರೆಯಾಗಿರುವುದು ಒಂದಷ್ಟು ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ನಿಟ್ಟುಸಿರು ಬಿಟ್ಟಂತಾಗಿದೆ.

ಶೌಚಾಲಯಕ್ಕೆ ಪರದಾಟ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ಜನ ಮಹಿಳಾ ಶಿಕ್ಷಕಿಯರು ಸೇರಿದಂತೆ ನೂರಾರು ಜನ ವಿದ್ಯಾರ್ಥಿನಿಯರು ಶೌಚಾಲಯಕ್ಕಾಗಿ ಪರಿತಪಿಸುತ್ತಿದ್ದು, ಶಾಲಾ ಕೊಠಡಿ ಕೊರತೆ ಒಂದೆಡೆಯಾದರೆ, ಶೌಚಾಲಯ ಕೊರತೆ ಸಹ ಈ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗಿದೆ.

ಈ ಜಾಗವನ್ನು ಸಸ್ಯ ಕಾಶಿ ಎಂದು ಸಸ್ಯ ಬೆಳಸಲು ತೆಗೆದುಕೊಳ್ಳಲಾಗಿದೆ, ಅಲ್ಲಿ ಯಾವುದೇ ಕಾರ್ಯ ನಡೆಯುತ್ತಿಲ್ಲ ಮತ್ತೆ ಸಾರ್ವಜನಿಕರಿಗೆ ಉಪಯುಕ್ತತೆಗೆ ಬಳಸಲು ಬಳಸಿಕೊಂಡು ಶಾಲಾ ಕಟ್ಟಡ ಕಟ್ಟಲು ಸಂಬಂಧಪಟ್ಟ ಇಲಾಖೆಯಿಂದ ಅನುಮೋದನೆ ಪಡೆಯಲಾಗುವುದು.
-ಲಿಂಗಪ್ಪ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ.

ಕುಟುಂಬದವರು ಹಿರಿಯರು ಈ ಜಾಗವನ್ನು ದಾನ ಕೊಟ್ಟಿದ್ದು, ರೋಡಿನ ಅಗಲೀಕರಣದಿಂದ, ಶಾಲೆ ಎರಡು ಮೂರು ಕೊಠಡಿ ಕಿತ್ತಾಕ್ಲಾಗಿದೆ, ಜರೂರಾಗಿ ಕಾಮಗಾರಿ ಪೂರ್ಣಗೊಳಿಸಿ ಶಾಲಾ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಬೇಕು.
-ರಾಜೇಂದ್ರಪ್ಪ. ಎಸ್ಡಿಎಂಸಿ ಮಾಜಿ ಸದಸ್ಯರು,

ಅರಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ರಸ್ತೆ ಅಗಲೀಕರಣದಿಂದ ಕಾಂಪೌಂಡ್ ಆಗಿ ಬಿಲ್ಡಿಂಗ್ ನೆಲ ಸಮವಾಗಿದೆ, ವಿದ್ಯಾರ್ಥಿಗಳು ರಸ್ತೆ ದಾಟಲು ತುಂಬಾ ತೊಂದರೆಯಾಗುತ್ತಿದ್ದು, ಶಾಲೆಯನ್ನು ನಿರ್ಮಿಸಿ ಕೊಡಬೇಕು, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹಿತದೃಷ್ಟಿಯಿಂದ ಜರೂರಾಗಿ ಶಾಲಾ ಕಟ್ಟಡಗಳಿಗೆ ಅನುದಾನ ನೀಡಬೇಕು.
-ದಿನೇಶ್ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ

ಅರಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತ್ತೀಚಿಗೆ ರಸ್ತೆ ಅಗಲೀಕರಣದಿಂದ ಶಾಲಾ ಕಾಂಪೌಂಡ್ ಹಾಗೂ ಶಾಲಾ ಕೊಠಡಿಗಳು ಹೊಡೆಯಲಾಗಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಲ್ಲಿಯ ಪಕ್ಕದ ಸರ್ಕಾರಿ ಪ್ರೌಢಶಾಲೆ ಹಾಗೂ ಉರ್ದು ಶಾಲೆಗೆ ಸ್ಥಳಾಂತರಿಸಿದ್ದು, ಸಣ್ಣಪುಟ್ಟ ಅಡಚಣ ಬಿಟ್ಟರೆ ಯಾವುದೇ ತೊಂದರೆ ಇರುವುದಿಲ್ಲ.
-ನಟರಾಜು ಕ್ಷೇತ್ರ ಶಿಕ್ಷಣಾಧಿಕಾರಿ ಕೊರಟಗೆರೆ

-ಸಿದ್ದರಾಜು. ಕೆ‌ ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next