ಕೊರಟಗೆರೆ: ಗಡ್ಡದಾರಿ ಮತ್ತು ಕೊಳಕು ಹರಿದ ಬಟ್ಟೆಯಲ್ಲಿದ್ದ ವೃದ್ದನ ಮೇಲೆ ಸ್ಥಳೀಯರಿಂದ ಅನುಮಾನ ವ್ಯಕ್ತವಾಗಿದ್ದು, ಈತ ಗಾಂಜಾ ಸೊಪ್ಪು ಮಾರಾಟ ಮಾಡುವ ಅನಾಮಿಕ ಎಂದು ಸ್ಥಳೀಯರಿಂದ 112ಗೆ ದೂರು ದಾಖಲಾಗಿದೆ.
ಸಾರ್ವಜನಿಕರ ದೂರು ಆಧರಿಸಿ ಸ್ಥಳಕ್ಕೆ ದೌಡಾಯಿಸಿ ಅನಾಮಿಕ ವ್ಯಕ್ತಿಯ ಗಂಟು-ಮೂಟೆ ಪರಿಶೀಲನೆ ನಡೆಸಿದ ಪೊಲೀಸ್ ಸಿಬ್ಬಂದಿಗಳಿಗೆ ಶಾಕ್ ಎದುರಾಗಿದೆ. ಈ ವೃದ್ಧ ಬಿಕ್ಷುಕನ ಮೂಟೆಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಚಿಲ್ಲರೆ ಹಣ ನೋಡಿದ ಸ್ಥಳೀಯರಿಗೆ ಅಚ್ಚರಿಯೋ ಅಚ್ಚರಿ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ ಮರೇನಾಯಕನಹಳ್ಳಿ ಗ್ರಾಮದ ತಂಗುದಾಣದ ಬಳಿ ಈ ಘಟನೆ ನಡೆದಿದೆ.
ತಂಗುದಾಣದ ಬಳಿ ವೃದ್ಧ, ಗುರುಸಿದ್ದಪ್ಪ ಎಂಬವನ ವರ್ತನೆ ಮತ್ತು ಹಳೆಯ ಚೀಲದಲ್ಲಿ ಗಾಂಜಾ ಸೊಪ್ಪು ಇರುವುದಾಗಿ ಶಂಕಿಸಿ ಎ.ಎಸ್.ಐ. ಹನುಮಂತರಾಯಪ್ಪ ಮತ್ತು ಮುಖ್ಯ ಪೇದೆ ರಾಮಕೃಷ್ಣಯ್ಯ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೂಟೆಯಲ್ಲಿ ಗಾಂಜಾ ಸೊಪ್ಪಿನ ಶಂಕೆ
ಸಿದ್ದರಬೆಟ್ಟದ ತಪ್ಪಲಿನಲ್ಲೇ ಇರುವ ತಂಗುದಾಣ ಮತ್ತು ರಸ್ತೆ ಬದಿಯ ಮರದ ಕೆಳಗಡೆ ಕಳೆದ ವಾರದಿಂದ ಕೊಳಕು ಹರಿದ ಬಟ್ಟೆಯಲ್ಲಿಯೇ ಗುರುಸಿದ್ದಪ್ಪ ತನ್ನ ಚೀಲದೊಂದಿಗೆ ವಾಸವಿದ್ದ. ಈತ ಎಲ್ಲಿಗೆ ಹೋದರೂ ಹಳೆಯ ಚೀಲವನ್ನು ಜೊತೆಯಲ್ಲೇ ಕೊಂಡೊಯ್ಯುತ್ತಿದ್ದ. ಸ್ಥಳೀಯರಿಗೆ ಬಿಕ್ಷುಕನ ಮೇಲೆ ಅನುಮಾನ ಬಂದು ಚೀಲದಲ್ಲಿ ಗಾಂಜಾದ ಸೊಪ್ಪು ಇರಬಹುದು ಎಂದು ಶಂಕಿಸಿ 112ಗೆ ಕರೆ ಮಾಡಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ಲಭ್ಯವಾಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ತಿಳಿದು ಬಂದಿದೆ.
10 ವರ್ಷ ಹಿಂದೆ ಕಾಣೆಯಾಗಿದ್ದ ವೃದ್ದ
ಗುಬ್ಬಿ ತಾಲೂಕು ಚೇಳೂರು ಹೋಬಳಿ ಎಂ.ಹೆಚ್.ಪಟ್ನಾ ಗ್ರಾಪಂ ವ್ಯಾಪ್ತಿಯ ಮಾದಾಪುರ ಗ್ರಾಮದ ಗುರುಸಿದ್ದಪ್ಪ ತನ್ನ ಮಡದಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಕಳೆದ 10 ವರ್ಷದ ಹಿಂದೆ ಮನೆಬಿಟ್ಟಿದ್ದ. ತುಮಕೂರು, ಗುಬ್ಬಿ, ದೇವರಾಯನದುರ್ಗ, ಮಧುಗಿರಿ, ಪಾವಗಡ, ಕೊರಟಗೆರೆ, ಸಿದ್ದರಬೆಟ್ಟ ಸೇರಿದಂತೆ ಹತ್ತಾರು ಪುಣ್ಯ ಕ್ಷೇತ್ರಗಳಲ್ಲಿ ಬಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಗುರುಸಿದ್ದಪ್ಪ ಪೊಲೀಸರ ಕರ್ತವ್ಯ ನಿಷ್ಠೆಯಿಂದ ಮತ್ತೆ ಮರಳಿ ಗೂಡಿಗೆ ಸೇರಿಕೊಂಡಿದ್ದಾನೆ.
ಚೀಲದಲ್ಲಿ 50ಸಾವಿರ ಚಿಲ್ಲರೆ ಹಣ ಪತ್ತೆ
ಗುರುಸಿದ್ದಪ್ಪನ ಬಳಿಯಿದ್ದ ಹಳೆಯ ಚೀಲ ಪೊಲೀಸರು ಪರಿಶೀಲಿಸಿದಾಗ 20 ಸಾವಿರಕ್ಕೂ ಅಧಿಕ ಚಿಲ್ಲರೆ ನಾಣ್ಯ ಮತ್ತು 30 ಸಾವಿರಕ್ಕೂ ಅಧಿಕ 50, 20 ಮತ್ತು 10 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.
ಪೊಲೀಸರು ಸ್ಥಳೀಯರ ಸಹಾಯದಿಂದ ಚೀಲವನ್ನು ತೆರೆದು ಹರಿದು ಹೋಗಿದ್ದ ಹಳೆಯ ನೋಟುಗಳನೆಲ್ಲಾ ಜೋಡಿಸಿ ಚಿಲ್ಲರೆ ಕೂಡಿಟ್ಟು ಯಾರೂ ನಂಬದಿರುವ ಭಿಕ್ಷುಕನಿಗೆ ಸಮಾಧಾನಪಡಿಸಿ, ಕುಟುಂಬದವರನ್ನು ಸಂಪರ್ಕಿಸಿ ಆತನಿಗೆ ಪೊಲೀಸರು ಸಹಾಯಹಸ್ತ ಚಾಚಿದ್ದಾರೆ.
ಮಾನವೀಯತೆ ಮೆರೆದ ಕೊರಟಗೆರೆ ಪೋಲಿಸ್
10 ವರ್ಷದಿಂದ ಮನೆಬಿಟ್ಟು ಊಟ -ಬಟ್ಟೆ ಇಲ್ಲದೇ ಬಿಕ್ಷೆ ಬೇಡುತ್ತಾ ಗಡ್ಡದಾರಿಯಾಗಿದ್ದ ಭಿಕ್ಷುಕನ ಪರಿಸ್ಥಿತಿ ಅರಿತ 112 ವಾಹನದ ಎಎಸೈ ಹನುಮಂತರಾಯಪ್ಪ ಮತ್ತು ಮುಖ್ಯ ಪೇದೆ ರಾಮಕೃಷ್ಣಯ್ಯ ಕೊರಟಗೆರೆ ಪಿಎಸೈ ಚೇತನ್‍ಗೆ ಮಾಹಿತಿ ನೀಡಿದ್ದಾರೆ.
ಪಿಎಸೈ ಸೂಚನೆಯ ಮೇರೆಗೆ ಬಿಕ್ಷುಕನ ವಿಳಾಸ ಪತ್ತೆ ಹಚ್ಚಿದ ಪೊಲೀಸರ ತಂಡ ಗುರುಸಿದ್ದಪ್ಪನ ಮಡದಿ ಮಂಗಳಮ್ಮ ಮತ್ತು ಮಗ ಪ್ರವೀಣ್‍ರನ್ನು ಸ್ಥಳಕ್ಕೆ ಕರೆಸಿಕೊಂಡು 50 ಸಾವಿರಕ್ಕೂ ಅಧಿಕ ಚಿಲ್ಲರೆ ಹಣದ ಚೀಲವನ್ನು ಹಸ್ತಾಂತರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ನನ್ನ ಗಂಡ ಮನೆ ಬಿಟ್ಟು 10ವರ್ಷ ಆಗಿತ್ತು. ಕೊರಟಗೆರೆ ಪೊಲೀಸರ ಸಹಾಯದಿಂದ ಮತ್ತೆ ಅವರು ನಮಗೆ ಸಿಕ್ಕಿದ್ದಾರೆ. ಗುರುಸಿದ್ದಪ್ಪನ ಬಳಿಯಿದ್ದ ಚಿಲ್ಲರೆ ಹಣವನ್ನು ಪೊಲೀಸರು ನಮಗೆ ನೀಡಿದ್ದಾರೆ. ಮಾನವೀಯ ಮೌಲ್ಯ ಕಾಪಾಡಿ ಸಹಾಯಹಸ್ತ ನೀಡಿದ ಪೊಲೀಸರಿಗೆ ತುಂಬು ಹೃದಯದ ಧನ್ಯವಾದ. –
ಮಂಗಳಮ್ಮ. ವೃದ್ದನ ಮಡದಿ. ಮಾದಾಪುರ.
ಸಿದ್ದರಬೆಟ್ಟದ ಸ್ಥಳೀಯರು 112ಗೆ ನೀಡಿದ ದೂರಿನನ್ವಯ ಪೊಲೀಸರು ವೃದ್ದನ ಹಳೆಯ ಚೀಲ ಪರಿಶೀಲಿಸಿದಾಗ ಚಿಲ್ಲರೆ ಹಣ ಮತ್ತು ಹಳೆಯ ನೋಟುಗಳು ಕಂಡುಬಂದಿವೆ. ಪೊಲೀಸರು ಸ್ಥಳೀಯರ ಸಹಾಯದಿಂದ ವೃದ್ದನ ಮಡದಿ ಮತ್ತು ಮಗನನ್ನು ಪತ್ತೇ ಹಚ್ಚಿ ಹಣ ಸಮೇತ ಹಸ್ತಾಂತರ ಮಾಡಿದ್ದಾರೆ. ಜನಸ್ನೇಹಿ ಆಡಳಿತ ಸೇವೆ ನೀಡುವುದು ನಮ್ಮೇಲ್ಲರ ಪ್ರಮುಖ ಕರ್ತವ್ಯ.
– ಚೇತನ್‍ಕುಮಾರ್. ಪಿಎಸೈ. ಕೊರಟಗೆರೆ
ಸಿದ್ದರಾಜು.ಕೆ ಕೊರಟಗೆರೆ.