Advertisement

ಅತಿವೃಷ್ಟಿಗೆ ಸಿಲುಕಿದ ಕೊರಟಗೆರೆ ಕ್ಷೇತ್ರ: ತುರ್ತು ಪರಿಹಾರಕ್ಕೆ ರೈತರ ಆಗ್ರಹ

08:02 PM Aug 12, 2022 | Team Udayavani |

ಕೊರಟಗೆರೆ: ವರುಣನ ಆರ್ಭಟದಿಂದ ರೈತಾಪಿವರ್ಗ ಬಿತ್ತನೆ ಮಾಡಿದ್ದ ಸಾವಿರಾರು ಎಕರೇ ಕೃಷಿ ಬೆಳೆ ಜಲಾವೃತ.. ನೂರಾರು ಎಕರೇ ಹೂವು-ಹಣ್ಣು ಹಾಗೂ ತೋಟಗಾರಿಕೆ ಬೆಳೆಯು ಮುಳುಗಿವೆ.. ರೇಷ್ಮೆ ತೋಟದಲ್ಲಿ ಮಳೆ ನೀರು ಶೇಖರಣೆಯಾಗಿ ಹುಳುಗಳಿಗೆ ಮೇವಿಲ್ಲದೇ ಪರದಾಟವಾಗಿದೆ. ಗ್ರಾಮೀಣ ಪ್ರದೇಶದ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ.. ಹತ್ತಾರು ಸೇತುವೆ-ಕೆರೆಕಟ್ಟೆ ಶಿಥಿಲವಾಗಿ ನೂರಾರು ಸಮಸ್ಯೆ ಏಕಕಾಲದಲ್ಲಿ ಸೃಷ್ಟಿಯಾಗಿವೆ.

Advertisement

25ವರ್ಷಗಳ ಬಳಿಕ ಸುವರ್ಣಮುಖಿ, ಗರುಡಾಚಲ ಮತ್ತು ಜಯಮಂಗಳಿ ನದಿಗಳ ಸಂಗಮವಾಗಿದೆ. ನದಿಪಾತ್ರದ ಗ್ರಾಮಗಳು, ಜಮೀನು, ತೋಟವು ಜಲಾವೃತವಾಗಿ ಕೊರಟಗೆರೆಯಲ್ಲಿ ಮತ್ತೇ ಅತಿವೃಷ್ಟಿ ಸೃಷ್ಟಿಯಾಗಿದೆ. ಸೇತುವೆ-ಕೆರೆ ಕಟ್ಟೆ ಮತ್ತು ಗ್ರಾಮೀಣ ರಸ್ತೆಗಳ ಸಂಪರ್ಕ ಕಡಿತವಾಗಿ ರೈತರಲ್ಲಿ ಆತಂಕ ಮನೆಮಾಡಿದೆ. ವಿದ್ಯುತ್ ಕಂಬಗಳು ಕೆರೆಯ ನೀರಿನಲ್ಲಿ ಮುಳುಗಿ ತೋಟದ ಮನೆಗಳಿಗೆ ಸಂಪರ್ಕ ಕಡಿತವಾಗಿದೆ.

100 ಎಕರೆ ಹೂವು-ತರಕಾರಿ ಬೆಳೆನಷ್ಟ
ಗ್ರಾಮೀಣ ರೈತರ ಆರ್ಥಿಕ ಜೀವಾಳ ಆಗಿರುವ ಹೂವು ಮತ್ತು ತರಕಾರಿ ಬೆಳೆಯು ಪ್ರಸ್ತುತ ನೆಲಕಚ್ಚಿದೆ. 75ಜನ ರೈತರ 100 ಎಕರೆಗೂ ಅಧಿಕ ಜಮೀನಿನಲ್ಲಿ ಹೂವು, ಹಣ್ಣು, ತರಕಾರಿ, ಬಾಳೆ, ಅಡಿಕೆ ಮತ್ತು ತೋಟಗಾರಿಕೆ ಬೆಳೆಗಳು ಮಳೆಯ ನೀರಿನಲ್ಲಿ ಮುಳುಗಿ ರೈತರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ರೇಷ್ಮೆ ತೋಟದಲ್ಲಿ ಮಳೆನೀರು ಶೇಖರಣೆಯಾಗಿ 7ಜನ ರೈತರ 10ಎಕರೆ ಹಿಪ್ಪುನೆರಳೆ ಗಿಡಗಳು ಮುಳುಗಿ ಹುಳುವಿನ ಮೇವಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೇತುವೆ ಸಂಪರ್ಕ ಕಡಿತ-ಕೆರೆಕಟ್ಟೆ ಬಿರುಕು
ದಶಕಗಳ ನಂತರ ಕೊರಟಗೆರೆ ಕ್ಷೇತ್ರದಲ್ಲಿ 3 ನದಿಗಳು ಉಕ್ಕಿ ಹರಿದ ಪರಿಣಾಮ ಹೊಳವನಹಳ್ಳಿ, ಶಕುನಿತಿಮ್ಮನಹಳ್ಳಿ, ಲಂಕೇನಹಳ್ಳಿ, ಹನುಮಂತಪುರ ಸೇತುವೆ ಸೇರಿದಂತೆ ನೂರಾರು ಕಡೆಗಳಲ್ಲಿ ಚೆಕ್‌ ಡ್ಯಾಂ, ಕೆರೆ ಕಟ್ಟೆ, ಗೋಕಟ್ಟೆ ಮತ್ತು ಕೃಷಿಹೊಂಡ ಶಿಥಿಲವಾಗಿವೆ. ಗ್ರಾಮೀಣದಲ್ಲಿ 25ಕ್ಕೂ ಹೆಚ್ಚು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಹಾಳಾಗಿದೆ. ಸೇತುವೆಗಳ ದುರಸ್ಥಿ, ಕೆರೆಗಳ ಅಭಿವೃದ್ದಿ ಮತ್ತು ರಸ್ತೆಗಳ ದುರಸ್ಥಿಗೆ ಸರಕಾರ ಅನುಧಾನ ನೀಡಬೇಕಿದೆ.

ಕೊರಟಗೆರೆ ಕ್ಷೇತ್ರದ 6ಹೋಬಳಿಯ 36 ಗ್ರಾಪಂನಲ್ಲಿ ಅತಿವೃಷ್ಟಿಯಿಂದ 10ಕೋಟಿಗೂ ಅಧಿಕ ನಷ್ಟವಾಗಿದೆ. ಕೊರಟಗೆರೆ ಆಡಳಿತ, ತಾಪಂ, ಕೃಷಿ, ರೇಷ್ಮೆ, ತೋಟಗಾರಿಕೆ, ಜಿಪಂ, ಪಿಡ್ಲೂಡಿ, ಬೆಸ್ಕಾಂ ಇಲಾಖೆಯ ಅಧಿಕಾರಿವರ್ಗ ಈಗಾಗಲೇ ಜಂಟಿಯಾಗಿ ಕಾರ್ಯಚರಣೆ ನಡೆಸಿ ರೈತರಿಂದ ನಷ್ಟದ ವರದಿಯನ್ನು ಪಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣ ರೈತರ ನೆರವಿಗೆ ಆಗಮಿಸಿ ತುರ್ತಾಗಿ ಪರಿಹಾರವನ್ನು ನೀಡಬೇಕಾಗಿದೆ.

Advertisement

ತುಂಡು ತುಂಡಾದ 75 ವಿದ್ಯುತ್‌ ಕಂಬ

ಗ್ರಾಮೀಣ ಪ್ರದೇಶದ ನದಿ, ಕೆರೆ-ಕಟ್ಟೆ ಮತ್ತು ತೋಟದ ಮನೆಗಳಿಗೆ ಸಂಪರ್ಕ ಕಲ್ಪಿಸುವ 75ಕ್ಕೂ ಅಧಿಕ ವಿದ್ಯುತ್‌ಕಂಬ ಮಳೆ ಆರ್ಭಟಕ್ಕೆ ನೆಲಕ್ಕೆ ಬಿದ್ದು 10ಲಕ್ಷಕ್ಕೂ ಅಧಿಕ ರೂ ನಷ್ಟವಾಗಿದೆ. ಬೆಸ್ಕಾಂ ಇಲಾಖೆಯಿಂದ ಪರ್ಯಾಯ ಮಾರ್ಗದಿಂದ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೆರೆಕಟ್ಟೆ ಮತ್ತು ನದಿಯ ಪಾತ್ರದಲ್ಲಿ ಮುಳುಗಿರುವ ವಿದ್ಯುತ್ ಕಂಬಗಳ ತೆರವು ಕಾರ್ಯಚರಣೆ ನಡೆಯಬೇಕಿದೆ.

400 ಹೆಕ್ಟೇರ್ ಕೃಷಿಬೆಳೆ ಜಲಾವೃತ

ಮುಂಗಾರಿನಲ್ಲಿ ರೈತರು ಬಿತ್ತನೆ ಮಾಡಿದ್ದ 1ಸಾವಿರಕ್ಕೂ ಅಧಿಕ ಎಕರೆ ಮುಸುಕಿನ ಜೋಳ, ರಾಗಿ ಮತ್ತು ಶೇಂಗಾ ಬೆಳೆಯು ಜಲಾವೃತವಾಗಿ 750ಕ್ಕೂ ಅಧಿಕ ರೈತರಿಗೆ75 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಪಸ್ತುತ ವರ್ಷದ ಮಳೆಯ ಪ್ರಮಾಣ 319.1ಮೀಮೀ ಮಾತ್ರ. ವಾಡಿಕೆ ಮಳೆಗಿಂತ 747.4ಮೀಮೀ ಮಳೆಯಾಗಿ ಶೇ.13.4ರಷ್ಟು ಹೆಚ್ಚಾಗಿದೆ. ಕೃಷಿ ಇಲಾಖೆಯಿಂದ ಸರಕಾರಕ್ಕೆ ಬೆಳೆವಿಮೆ ಮತ್ತು ಬೆಳೆ ಪರಿಹಾರಕ್ಕೆ ವರದಿ ಸಲ್ಲಿಕೆಯಾಗಿದೆ.

95 ಮಣ್ಣಿನ ಮನೆಗಳು ನೆಲಸಮ
ಅತಿವೃಷ್ಟಿಯಿಂದ ಕೊರಟಗೆರೆ ಪಟ್ಟಣ ಮತು ಗ್ರಾಮೀಣದ 95 ರೈತರ ಮನೆಗಳಿಗೆ ಹಾನಿಯಾಗಿದೆ. 25 ರೈತರ ಮನೆಯೊಳಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ದವಸ ದಾನ್ಯ ನಾಶವಾಗಿದೆ. ಕುರುಡುಗಾನಹಳ್ಳಿಯ ಲಕ್ಷ್ಮಮ್ಮ ಮತ್ತು ಕತ್ತಿನಾಗೇನಹಳ್ಳಿ ತಿಮ್ಮಕ್ಕ ಮಳೆಯಿಂದ ಮೃತ ಪಟ್ಟಿದ್ದಾರೆ. ಕಂದಾಯ, ತಾಪಂ ಮತ್ತು ಜಿಪಂ ನಿಂದ ಜಂಟಿ ಸಮೀಕ್ಷೆ ನಡೆಸಿ ತುರ್ತು ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ.

ವರುಣನ ಆರ್ಭಟದಿಂದ ರೈತರು ಬಿತ್ತನೆ ಮಾಡಿದ್ದ ಕೃಷಿ ಬೆಳೆಯು ನಾಶವಾಗಿ ಕೊರಟಗೆರೆಯಲ್ಲಿ ಅತಿವೃಷ್ಟಿ ಸೃಷ್ಟಿಯಾಗಿದೆ. ಕೃಷಿ ಬೆಳೆ ನಾಶ, ಮನೆಗಳಿಗೆ ಹಾನಿ, ಹೂವು-ತರಕಾರಿ ಬೆಳೆ ನಷ್ಟ, ಸೇತುವೆ ಸಂಪರ್ಕ ಕಡಿತ ಮತ್ತು ಕೆರೆ ಕಟ್ಟೆಗಳು ಶಿಥಿಲವಾಗಿದೆ. ರಾಜ್ಯ ಸರಕಾರ ತುರ್ತಾಗಿ ಬೆಳೆಪರಿಹಾರ ಮತ್ತು ಬೆಳೆವಿಮೆ ಪರಿಹಾರವನ್ನು ತಕ್ಷಣ ಘೋಷಣೆ ಮಾಡಬೇಕಿದೆ.
ಸಿದ್ದರಾಜು ಅಧ್ಯಕ್ಷ, ರೈತಸಂಘ

ಅತಿವೃಷ್ಟಿಯಿಂದ ಕೊರಟಗೆರೆ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಕೃಷಿ, ರೇಷ್ಮೆ, ಜಿಪಂ, ತೋಟಗಾರಿಕೆ, ಪಿಡ್ಲೂಡಿ ಇಲಾಖೆಯಿಂದ ಬೆಳೆನಷ್ಟ ಮತ್ತು ಮನೆಗಳ ಸಮಸ್ಯೆಯ ಅಂಕಿಅಂಶದ ವರದಿ ಪಡೆಯಲಾಗಿದೆ. ಜನರಿಗೆ ಸಮಸ್ಯೆ ಆಗದಂತೆ ಈಗಾಗಲೇ ಸಾಕಷ್ಟು ಪರಿಹಾರದ ಕೆಲಸ ನಡೆದಿವೆ. ಕೃಷಿ ಬೆಳೆ ಮತ್ತು ಮನೆ ನಷ್ಟದ ಪರಿಹಾರವನ್ನು ತ್ವರಿತವಾಗಿ ರೈತರಿಗೆ ನೀಡುತ್ತೇವೆ.
ನಾಹಿದಾ ಜಮ್ ಜಮ್. ತಹಶೀಲ್ದಾರ್

ಸಿದ್ದರಾಜು. ಕೆ ಕೊರಟಗೆರೆ.

Advertisement

Udayavani is now on Telegram. Click here to join our channel and stay updated with the latest news.

Next