ಕೊರಟಗೆರೆ : ಅನಾರೋಗ್ಯಕ್ಕೆ ಗುರಿಯಾಗಿದ್ದ ವೃದ್ಧೆ ಯೊಬ್ಬರಿಗೆ ಆಸ್ಪತ್ರೆಗೆ ಕರೆದೊಯ್ಯಲು 108 ಆಂಬುಲೆನ್ಸ್ ಬರಲು ರಸ್ತೆ ಇಲ್ಲದೆ ಅರ್ಧ ಕಿಲೋಮೀಟರ್ ಗೂ ಹೆಚ್ಚು ದೂರ ಕೈಯಲ್ಲಿಎತ್ತಿಕೊಂಡೇ ಸಾಗಿಸಿದ ಘಟನೆ ನಡೆದಿದೆ.
ಕೋಳಾಲ ಹೋಬಳಿ ವಜ್ಜಿನಕುರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದುಡ್ಡನಹಳ್ಳಿಯಲ್ಲಿ ಈ ಘಟನೆ ಜರುಗಿದ್ದು, ವೃದ್ಧೆ ಸುಶೀಲಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರು.
ಕೋಳಾಲ ಹೋಬಳಿಯ ದುಡ್ಡನಹಳ್ಳಿ ಹಾಗೂ ಕೆ ಜಿ ಬೇವಿನಹಳ್ಳಿ ಮಧ್ಯ ಒಂದು ಕಿಲೋಮೀಟರ್ ದೂರದಲ್ಲಿ ಇವರ ತೋಟದ ಮನೆಯಿದ್ದು, ಈ ಮನೆಗೆ ಹಾದು ಹೋಗುವ ಕಾಲು ದಾರಿ ಪೂರ್ಣ ಸರ್ಕಾರಿ ಜಮೀನಿನಲ್ಲಿದ್ದು, ಈ ಭಾಗದಲ್ಲಿ 15 – 20ಕ್ಕೂ ಹೆಚ್ಚು ರೈತರು ಇದೇ ಮಾರ್ಗದಲ್ಲಿ ಬೇಸಾಯಕ್ಕೆ ಎತ್ತಿನ ಬಂಡಿ, ಟ್ಯಾಕ್ಟರ್ ಸೇರಿದಂತೆ ಜನ ಜಾನುವಾರುಗಳು ಓಡಾಡುತ್ತಿದ್ದು, ಬೇಸಾಯ ಸಂದರ್ಭದಲ್ಲಿ ಅಕ್ಕ ಪಕ್ಕದ ರೈತರು ದಾರಿ ಇಲ್ಲದ ಕಾರಣ ಒಬ್ಬರು ನಡೆದಾಡುವಷ್ಟು ಕಾಲು ದಾರಿ ಬಿಟ್ಟು ಉಳುಮೆ ಮಾಡಿಕೊಳ್ಳುವುದರಿಂದ ಇಲ್ಲಿನ ರೈತರು ಹಾಗೂ ಈ ತೋಟದ ಮನೆಯ ಕುಟುಂಬಕ್ಕೆ ತುಂಬಾ ಅನಾನುಕೂಲವಾಗಿದ್ದು ಹತ್ತಾರು ವರ್ಷಗಳಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಈಗಿನ ತಹಶೀಲ್ದಾರ್ ನಾಹಿದಾ ಜಮ್ ಜಮ್ ಅವರಾದರೂ ನಮಗೆ ಸಹಕಾರ ನೀಡಲಿ ಎಂದು ಈ ಕುಟುಂಬ ಹಾಗೂ ಹತ್ತಾರು ರೈತರು ಮನವಿ ಮಾಡಿಕೊಂಡಿದ್ದಾರೆ.
ವೃದ್ಧೆ ಸುಶೀಲಮ್ಮ ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬಸ್ಥರು ದ್ವಿಚಕ್ರವಾಹನದಲ್ಲಿ ಕೊರಟಗೆರೆ ಸೇರಿದಂತೆ ಇನ್ನಿತರ ಆಸ್ಪತ್ರೆಗಳಿಗೆ ತೋರಿಸಿದರೂ ವಾಸಿಯಾಗದೆ ಇದ್ದಾಗ, ವಾಹನಗಳು ತೋಟದ ಮನೆಗೆ ದಾರಿ ಇಲ್ಲದ ಕಾರಣ ಬಾರದೆ ಇರುವುದಕ್ಕೆ ಕುಟುಂಬಸ್ಥರು ಹಾಗೂ ಕೆಲವು ರೈತರು ಸೇರಿ ಆ ವೃದ್ಧೆಯನ್ನು ಒಂದಷ್ಟು ದೂರ ಹೆಗಲ ಮೇಲೆ ಹೊತ್ತು, ನಂತರ ಕೈಯಲ್ಲಿ ಹೊತ್ತು ಸಾಗಿ ಆಂಬುಲೆನ್ಸ್ ಗೆ ಕೂರಿಸಿದ್ದಾರೆ. ಸಾರ್ವಜನಿಕರು ಈ ಪರಿಸ್ಥಿತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದು, ನಮ್ಮ ಊರು ನಮ್ಮ ರಸ್ತೆ, ನಮ್ಮ ಜಮೀನು ನಮ್ಮ ರಸ್ತೆ ಸೇರಿದಂತೆ ಹಲವಾರು ಯೋಜನೆಗಳನ್ನ ಜಾರಿಗೆ ತಂದರು ಅವು ರೈತರಿಗೆ ಸಹಕಾರ ಇಲ್ಲದಿರುವುದು ಹಲವಾರು ಯೋಜನೆಗಳು ಹಳ್ಳ ಹಿಡಿದಿರುವುದಕ್ಕೆ ನೇರ ಸಾಕ್ಷಿಯಂತಾಗಿದ್ದು, ತ್ವರಿತವಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.