Advertisement

ಕಡತದಲ್ಲೇ ಉಳಿದ ಕೊರಗ, ಜೇನುಕುರುಬರ ಕನಸು

12:19 AM Feb 26, 2022 | Team Udayavani |

ಉಡುಪಿ: ಕೊರಗರು, ಜೇನು ಕುರುಬ ಸಮುದಾಯದ ಅರ್ಹ ಫ‌ಲಾನುಭವಿಗಳಿಗೆ ಸರಕಾರದಿಂದ ಮಂಜೂರಾದ ಮನೆಗಳು ಕಡತದಲ್ಲೇ ಉಳಿದುಕೊಂಡಿವೆ.

Advertisement

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 437 ಮನೆಗಳನ್ನು ಈ ಎರಡು ಸಮುದಾಯದ ಕುಟುಂಬಗಳಿಗೆ ಸರಕಾರ ಈಗಾಗಲೇ ಮಂಜೂರು ಮಾಡಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಮನೆ ನಿರ್ಮಾಣಕ್ಕೆ ಅನುದಾನವೇ ಬಿಡುಗಡೆಯಾಗಿಲ್ಲ.

ಈ ಸಮುದಾಯಗಳ ಮನೆ ನಿರ್ಮಾಣದ ಜವಾಬ್ದಾರಿಯನ್ನು ಸರಕಾರ ಈಗ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ವಹಿಸಿದೆ. ನಿಗಮದಿಂದ ಮನೆ ನಿರ್ಮಾಣಕ್ಕೆ ಜಾಗದ ದಾಖಲೆ ಪತ್ರ, ಜಿಪಿಎಸ್‌ ಮಾಡಿಸುವುದು ಇತ್ಯಾದಿ ಕಡ್ಡಾಯಗೊಳಿಸಿದೆ. ಮನೆ ನಿರ್ಮಾಣಕ್ಕೆ 3.50 ಲಕ್ಷ ರೂ. ನೀಡಲಾಗುತ್ತದೆ. ಇದರಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ 1.75 ಲ.ರೂ., ಡಾ| ಅಂಬೇಡ್ಕರ್‌ ನಿವಾಸ್‌ ಯೋಜನೆಯಡಿ 1.75 ಲಕ್ಷ ರೂ. ನೀಡಬೇಕು ಎಂಬ ಒಪ್ಪಂದವಿದೆ. ತಾಂತ್ರಿಕ ಸಮಸ್ಯೆ, ಅನುದಾನದ ಹಂಚಿಕೆಯ ವಿಳಂಬದಿಂದ ಮಂಜೂರಾದ ಮನೆಗಳು ಫ‌ಲಾನುಭವಿಗಳ ಕೈ ಸೇರುತ್ತಿಲ್ಲ.

ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್‌ ಸಂಖ್ಯೆ, ಪಡಿತರ ಚೀಟಿಯನ್ನು ನಿಗಮದ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುವುದು ಕಡ್ಡಾಯ ಮಾಡಲಾಗಿದೆ. ನಿವೇಶದ ದಾಖಲೆಗಳನ್ನು ಅಪ್‌ ಲೋಡ್‌ ಮಾಡುವುದು ಕಡ್ಡಾಯವಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ ಜಿಪಿಎಸ್‌ ಮಾಡಿಸುವುದು ಭೂ ದಾಖಲೆಗಳನ್ನು ಅಪ್‌ಲೋಡ್‌ ಮಾಡದೇ ಇದ್ದರೆ ಮನೆ ಕಟ್ಟಲು ಅನುದಾನ ಬರುತ್ತಿಲ್ಲ.

ಕೊರಗ ಸಮುದಾಯದ ಅನೇಕರಲ್ಲಿ ಸ್ವಂತ ಭೂಮಿ ಇಲ್ಲದೇ ಇರುವುದು ಸರಕಾರಕ್ಕೂ ಗೊತ್ತಿದ್ದರೂ ಕಠಿನ ನಿಯಮ ಮಾಡಿರುವುದು ಸರಿಯಲ್ಲ. ಕೊರಗ ಮತ್ತು ಜೇನು ಕುರುಬ ಸಮುದಾಯದ ಅನೇಕ ಕುಟುಂಬ
ಗಳಲ್ಲಿ ನಿವೇಶನವೇ ಇಲ್ಲ. ಬಹುತೇಕ ಕಡೆಗಳಲ್ಲಿ ಡೀಮ್ಡ್ ಫಾರೆಸ್ಟ್‌ನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಸರಕಾರ ಮೊದಲ ನಿವೇಶನ ಮಂಜೂರು ಮಾಡಿ ಆ ಮೇಲೆ ಮನೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂಬುದು ಸಮುದಾಯಗಳ ಆಗ್ರಹವಾಗಿದೆ.

Advertisement

ಇನ್ನೂ ಪರಿಶೀಲನೆಯಲ್ಲಿದೆ
ಉಭಯ ಜಿಲ್ಲೆಗೆ 437 ಮನೆ ಮಂಜೂರಾಗಿದೆ. ಮನೆ ನಿರ್ಮಾಣದ ಫ‌ಲಾನುಭವಿಗಳ ಪಟ್ಟಿ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಲಾಗಿದೆ. ಆದರೂ ಸರಕಾರದ ಹಂತದಲ್ಲಿ ಇನ್ನೂ ಪರಿಶೀಲನೆಯಲ್ಲೇ ಇದೆ. ಪ್ರತೀ ಮನೆಯ ನಿರ್ಮಾಣಕ್ಕೆ 3.50 ಲಕ್ಷ ರೂ. ನೀಡಲಾಗುತ್ತದೆ. ಅರ್ಹ ಕುಟುಂಬಕ್ಕೆ ಮನೆ ನಿರ್ಮಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳುವ ಆವಶ್ಯಕತೆಯಿದೆ.

ನಿಗಮಕ್ಕೆ ನೀಡಿರುವುದೇ ತೊಡಕು
ಈ ಹಿಂದೆ ಕೊರಗ, ಜೇನುಕುರುಬ ಸಮುದಾಯಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮನೆ ಮಂಜೂರಾತಿ ಮಾಡಲಾಗುತ್ತಿತ್ತು. ಆಗ ಯಾವುದೇ ಸಮಸ್ಯೆ ಇಲ್ಲದೇ ಮನೆ ನಿರ್ಮಾಣವೂ ನಡೆಯುತ್ತಿದ್ದವು. ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಈ ಜವಾಬ್ದಾರಿ ವಹಿಸಿರುವುದರಿಂದ ಮನೆ ನಿರ್ಮಾಣ ಕಾರ್ಯವೇ ಜಟಿಲವಾಗುತ್ತಿದೆ. ನಿಗಮದಿಂದ ಗ್ರಾ.ಪಂ. ಮೂಲಕ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೆ ನಿಗಮದಿಂದ ಕೇಳುವ ದಾಖಲೆಗಳನ್ನು ಈ ಸಮುದಾಯ ಒದಗಿಸುವುದು ಕಷ್ಟವಾಗುತ್ತಿದೆ. ಈ ಸಮಸ್ಯೆ ಬಗ್ಗೆ ಸರಕಾರದ ಗಮನಕ್ಕೂ ತಂದಿದ್ದೇವೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದರು.

ಪರಿಶಿಷ್ಟ ಪಂಗಡ ಇಲಾಖೆಯಿಂದಲೇ ಕೊರಗ ಮನೆ ಹಂಚಿಕೆ ಮಾಡುವ ವ್ಯವಸ್ಥೆ ಪುನಃ ಆಗಬೇಕು. ಇದನ್ನು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ನೀಡಿರುವುದರಿಂದ ನಿಗಮದ ನಿಯಮವು ಕೊರಗರು ವಸತಿ ಪಡೆಯಲು ಅಡ್ಡಿಯಾಗುತ್ತಿದೆ.
-ಕೆ. ರಘುಪತಿ ಭಟ್‌, ಉಡುಪಿ ಶಾಸಕ

ಕೊರಗ ಮತ್ತು ಜೇನು ಕುರುಬ ಸಮುದಾಯಕ್ಕೆ ಮಂಜೂರಾದ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎದುರಾಗಿರುವ ತಾಂತ್ರಿಕ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಿವೇಶನ ಇಲ್ಲದವರಿಗೆ ನಿವೇಶನ ನೀಡುವ ಕಾರ್ಯವೂ ಆಗುತ್ತಿದೆ.
– ಕೂರ್ಮಾ ರಾವ್‌ ಎಂ., ಜಿಲ್ಲಾಧಿಕಾರಿ, ಉಡುಪಿ

ಕೊರಗ ಸಮುದಾಯದಲ್ಲಿ ಅನೇಕರಿಗೆ ಇನ್ನೂ ನಿವೇಶನವೇ ಸಿಕ್ಕಿಲ್ಲ. ಮನೆ ನಿರ್ಮಾಣವನ್ನು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ನೀಡಿರುವುದು ಸರಿಯಲ್ಲ. ಇದರಿಂದ ಅನೇಕ ಅರ್ಹ ಫ‌ಲಾನುಭವಿಗಳಿಗೆ ಸರಕಾರದ ಅನುದಾನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
-ವಿ. ಗಣೇಶ್‌ ಕೊರಗ, ಕೊರಗ ಸಮುದಾಯದ ಮುಖಂಡ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next