Advertisement

ರೈತರ ಧ್ವನಿಯಾಗಿದ್ದ ತೋಂಟದಾರ್ಯ ಶ್ರೀ

03:46 PM Oct 21, 2018 | Team Udayavani |

ಕೊಪ್ಪಳ: ರೈತರ ಕೃಷಿ ಭೂಮಿಯನ್ನು ಪೋಸ್ಕೋ ಕಂಪನಿಗೆ ಒಂದಿಚ್ಚು ಕೊಡುವುದಿಲ್ಲ ಎಂದು ಗದಗಿನ ತೋಂಟದಾರ್ಯ ಶ್ರೀಗಳು 2011-12ನೇ ಸಾಲಿನಲ್ಲಿ ನಡೆಸಿದ್ದ ರೈತಪರ ಹೋರಾಟವನ್ನು ಬೆಂಬಲಿಸಿ ಕೊಪ್ಪಳ ಜಿಲ್ಲೆಯಲ್ಲೂ ಹೋರಾಟಗಳು ನಡೆದವು. ಅನ್ನದಾತನ ಕೃಷಿ ಭೂಮಿ ಉಳಿಯುವಂತೆ ಮಾಡಿದ ಶ್ರೀಗಳಿಗೆ ಇಡೀ ರೈತ ಸಮೂಹವೇ ಚಿರಋಣಿಯಾಗಿದ್ದು, ಅವರ ಲಿಂಗೈಕ್ಯಕ್ಕೆ ಭಕ್ತ ಸಮೂಹ ಕಂಬನಿ ಮಿಡಿಯುತ್ತಿದೆ.

Advertisement

ವಿದೇಶದ ಪೋಸ್ಕೋ ಕಂಪನಿಯು 2011-12ನೇ ಸಾಲಿನಲ್ಲಿ ಗದಗ ಜಿಲ್ಲೆಯಲ್ಲಿ ನೆಲೆ ಕಾಣಲು ಹವಣಿಸುತ್ತಿತ್ತು. ಆ ವೇಳೆ ಗದಗ ಜಿಲ್ಲೆಯ ರೈತ ಸಮೂಹವೇ ಧ್ವನಿ ಎತ್ತಿ ದೊಡ್ಡ ಮಟ್ಟದ ಹೋರಾಟ ಮಾಡೆಸಿತ್ತು. ಈ ಹೋರಾಟಕ್ಕೆ ತೋಂಟದಾರ್ಯ ಶ್ರೀಗಳೇ ಮುಂದಾಳತ್ವ ವಹಿಸಿ ಪೋಸ್ಕೋ ಕಂಪನಿಯನ್ನೇ ಓಡಿಸಿದ್ದರು. ಅಲ್ಲಿನ ರೈತರು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಧರಣಿ ನಡೆಸಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಕೊಪ್ಪಳ-ಗದಗ ಗಡಿ ಭಾಗದಲ್ಲಿನ ಹಳ್ಳಿಗುಡಿ ಭಾಗದಲ್ಲಿ ರೈತರ ಭೂಮಿ ಸರ್ವೇ ಕಾರ್ಯ ನಡೆದ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಸ್ವಾಮೀಜಿ ಸರ್ಕಾರ ಹಾಗೂ ಕಂಪನಿ ವಿರುದ್ಧ ವಾಕ್ಸಮರ ನಡೆಸಿದ್ದರು. ಹೋರಾಟಕ್ಕೆ ಕೊಪ್ಪಳ ಜಿಲ್ಲೆಯ ರೈತ ಸಮೂಹ ಬೆಂಬಲ ಕೊಟ್ಟಿದ್ದಲ್ಲದೇ, ಇಲ್ಲಿನ ಹಲವು ಕನ್ನಡ ಪರ ಸಂಘಟನೆಗಳು ದೊಡ್ಡ ಮಟ್ಟದ ಹೋರಾಟ ನಡೆಸಿದ್ದವು.

ಗದಗ ಜಿಲ್ಲೆಯಲ್ಲಿ ನಡೆದ ರೈತ ಚಳವಳಿಗೆ ಬೆಚ್ಚಿದ ಪೋಸ್ಕೋ ಕಂಪನಿ ಕೊಪ್ಪಳ ಭಾಗದಲ್ಲಿ ನೆಲೆ ಹುಡುಕಾಟ ನಡೆಸಿತ್ತು. ಒಂದು ವೇಳೆ ಕೊಪ್ಪಳದಲ್ಲಿ ಪೋಸ್ಕೋ ಸ್ಥಾಪನೆ ಮಾಡಿದರೆ ಅಲ್ಲಿಯೂ ನಮ್ಮ ವಿರೋಧವಿದೆ. ನನಗೆ ಗದಗ ಜಿಲ್ಲೆಯ ರೈತರೂ ಒಂದೇ, ಕೊಪ್ಪಳ ಜಿಲ್ಲೆಯ ರೈತರು ಒಂದೇ ಎನ್ನುವ ಮಾತನ್ನಾಡಿದ್ದರು. ಕರ್ನಾಟಕದಲ್ಲೇ ಪೋಸ್ಕೋ ಕಂಪನಿ ನೆಲೆ ಕಾಣುವಂತಿಲ್ಲ ಎಂದು ಗುಡುಗಿ ರೈತರ ಬದುಕಿನ ಬಗ್ಗೆ ಕಳಕಳಿ ತೋರಿದ್ದರು. ಅನ್ನದಾತನ ಪರ ನಿಲವು ತಾಳಿದ್ದಕ್ಕೆ ಶ್ರೀಗಳ ಹೋರಾಟದ ಬಗ್ಗೆ ಇಡೀ ರೈತ ಸಮೂಹ ಮೆಚ್ಚಿ ಕೊಂಡಾಡಿದ್ದಲ್ಲದೇ, ಶ್ರೀಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಹೀಗಾಗಿ ಕೊಪ್ಪಳದ ಜನರೂ ಸಹಿತ ಶ್ರೀಗಳ ಪರ ಧ್ವನಿ ಎತ್ತಿದ್ದರು.

ವಚನ ಸಾಹಿತ್ಯದ ಮಹಾರತ್ನ
ತೋಂಟದಾರ್ಯ ಶ್ರೀಗಳು ಶರಣರ ನಾಡು ಕೊಪ್ಪಳ ಜಿಲ್ಲೆಯೊಂದಿಗೆ ಅವಿನಾಭಾವ ನಂಟು ಹೊಂದಿದ್ದರು. ಪ್ರತಿಯೊಂದು ವಚನ ಸಂಬಂಧಿತ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿ ಇದ್ದೇ ಇರುತ್ತಿತ್ತು. ಕೊಪ್ಪಳ-ಗದಗ ಗಡಿಯಲ್ಲಿ ಅವರ ವಚನಕ್ರಾಂತಿ ಇಂದಿಗೂ ಜನಮಾನಸದಲ್ಲಿ ಉಳಿದಿದೆ. ಪ್ರತಿ ವರ್ಷವೂ ಬಸವ ಜಯಂತಿ ಉತ್ಸವ ಸಮಿತಿ ಆಯೋಜಿಸುವ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಗಳ ಸಾನಿಧ್ಯವಿರುತ್ತಿತ್ತು. ಅಸ್ಪೃಶತೆಯ ವಿರುದ್ಧ ಶ್ರೀಗಳು ಧ್ವನಿ ಎತ್ತಿದ್ದರು. ಅಂತಹ ಮಹಾನ್‌ ರತ್ನ ಭಕ್ತ ಸಮೂಹವನ್ನು ಅಗಲಿದ್ದಕ್ಕೆ ಜಿಲ್ಲೆಯ ಜನರು ಕಂಬನಿ ಮಿಡಿದಿದ್ದಾರೆ. 

Advertisement

ಪೋಕ್ಸೋ ಕಂಪನಿ ಸ್ಥಾಪನೆಯ ವಿರುದ್ಧ ತೋಂಟದಾರ್ಯ ಶ್ರೀಗಳು ರೈತರ ಪರ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಅವರ ಹೋರಾಟಕ್ಕೆ ನಾವೂ ಬೆಂಬಲ ವ್ಯಕ್ತಪಡಿಸಿ ಕಂಪನಿ ನೆಲೆಯೂರದಂತೆ ಕೊಪ್ಪಳದಲ್ಲೂ ಹೋರಾಟ ಮಾಡಿದ್ದೆವು. ಶ್ರೀಗಳು ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಅವರು ರೈತಪರವಾಗಿರುವುದನ್ನು ನಾವು ಇಂದಿಗೂ ಸ್ಮರಿಸಬಹುದಾಗಿದೆ.
 ಡಿ.ಎಚ್‌. ಪೂಜಾರ,
 ಹೋರಾಟಗಾರ
.

„ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next