ಕೊಪ್ಪಳ: ಜನ್ಮ ನೀಡಿದ ತಾಯಿ ಹಾಗೂ ಜನಿಸಿದ ನೆಲವೇ ನಮಗೆ ಸ್ವರ್ಗಕ್ಕಿಂತ ಮಿಗಿಲಾಗಿದೆ. ನಮ್ಮ ತಂದೆ-ತಾಯಿಗೆ ಎಂದೂ ಮೋಸ ಮಾಡಬಾರದು. ನಾವು ರಾಷ್ಟ್ರಕ್ಕೆ ಏನನ್ನಾದರೂ ಕೊಡುಗೆ ಕೊಡಬೇಕೆಂದು ಬೆಂಗಳೂರು ಡಿಸಿಪಿ ರವಿ ಡಿ. ಚನ್ನಣ್ಣನವರ ಹೇಳಿದರು.
ತಾಲೂಕಿನ ಅಳವಂಡಿ ಗ್ರಾಮದಲ್ಲಿ ಕಾರ್ಗಿಲ್ ಮಲ್ಲಯ್ಯ ಅಭಿಮಾನಿಗಳ ಬಳಗ ಆಯೋಜಿಸಿದ್ದ ‘ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಯುವಕರ ಹಾಗೂ ವಿದ್ಯಾರ್ಥಿಗಳ ಪಾತ್ರ’ ಕುರಿತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೀರೋ ಮಾಡಿದಂತೆ ನೀವು ಅನುಕರಣೆ ಮಾಡುವುದು ಸರಿಯಲ್ಲ. ನಿಮ್ಮಷ್ಟಕ್ಕೆ ನೀವೇ ಹೀರೋ ಆಗಬೇಕು. ಅಲ್ಲದೇ, ನಿಮ್ಮ ತಂದೆ-ತಾಯಿಗೆ ನೀವೇ ನಿಜವಾದ ಹೀರೋಗಳು. ನಮ್ಮ ನೆಚ್ಚಿನ ಹೀರೋ ಸಿಗಲಿಲ್ಲ. ಆತನು ತನ್ನನ್ನು ಮಾತನಾಡಿಸಲಿಲ್ಲ ಎಂದಾಕ್ಷ‚ಣ ಇತ್ತೀಚೆಗೆ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ರೀತಿಯ ವರ್ತನೆ ಸರಿಯಲ್ಲ ಎಂದರು.
ನಾವು ಬಡವರೇ ಇರಲಿ. ನಮ್ಮದು ಹರಿದ ಬಟ್ಟೆಯೇ ಇರಲಿ. ನಮ್ಮ ನಿತ್ಯದ ಬದುಕು ಕೂಲಿ ಕೆಲಸವೇ ಆಗಿರಲಿ. ಅದನ್ನೇ ನಾವು ಹೆಮ್ಮೆಯಿಂದ ಹೇಳಿಕೊಂಡು ಮುಂದಿನ ಜೀವನದ ಯಶಸ್ಸಿನತ್ತ ಸಾಗಬೇಕು. ಗ್ರಾಮ, ರಾಜ್ಯ ರಾಷ್ಟ್ರಕ್ಕೆ ನಾನು ಏನು ಕೊಡುಗೆ ನೀಡಿದ್ದೇನೆ ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಅಲ್ಲದೇ, ಅಭಿವೃದ್ಧಿ, ಬೆಳವಣಿಗೆ, ವಿಕಸನದಡಿ ಜೀವನ ನಡೆಸಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ಹಾಲ ಹಾಲೇಶ್ವರ ಸ್ವಾಮೀಜಿ, ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿ, ವೀರಯೋಧ ಮಲ್ಲಯ್ಯ ಅವರ ತಾಯಿ ಗಂಗಮ್ಮ ಮೇಗಳಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಾಧನೆಗೆ ಪರಿಶ್ರಮ-ತಾಳ್ಮೆ ಮುಖ್ಯ: ನಗರದ ಸ್ಮಾರ್ಟ್ ಕರಿಯರ್ ಅಕಾಡೆಮಿಯಿಂದ ರವಿವಾರ ಆಯೋಜಿಸಿದ್ದ ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಬೆಂಗಳೂರು ಡಿಸಿಪಿ ರವಿ ಡಿ ಚನ್ನಣ್ಣನವರ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚಿನ ಗಮನ ನೀಡಬೇಕು. ಸಾಧಿಸುವ ಮನೋಭಾವ ಇರಬೇಕು. ಸಾಧನೆಗೆ ಪರಿಶ್ರಮ ಹಾಗೂ ತಾಳ್ಮೆ ಇರುವುದು ಅತ್ಯಂತ ಅವಶ್ಯವಾಗಿದೆ. ಹಿಂದುಳಿದ ಭಾಗದಲ್ಲಿರುವ ಈ ಕೋಚಿಂಗ್ ಸೆಂಟರ್ ಅತ್ಯುತ್ತಮವಾಗಿದ್ದು, ಇದರ ಸೌಲಭ್ಯವನ್ನು ಈ ಭಾಗದ ಸ್ಪರ್ಧಾರ್ಥಿಗಳು ಪಡೆದುಕೊಳ್ಳಬೇಕು. ಇಲ್ಲಿನ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು. ಸ್ಮಾರ್ಟ್ ಕರಿಯರ್ ಅಕಾಡೆಮಿ ನಿರ್ದೇಶಕ ಜಿ. ಯರಿಸ್ವಾಮಿ ಹಾಗೂ ಜಿ. ಸಿದ್ದು ಸೇರಿದಂತೆ ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.