ಕೊಪ್ಪಳ: ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆಗೆ ಮೂರು ಹೊಸ ತಾಲೂಕುಗಳನ್ನು ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಆದರೆ ಅಭಿವೃದ್ಧಿ ಮಾತ್ರ ನಿಧಾನಗತಿಯಲ್ಲಿ ನಡೆಯುತ್ತಿದೆ. ಹುದ್ದೆ ಮಂಜೂರಾದರೂ ಶೇ. 80 ಭರ್ತಿಯಾಗಿಲ್ಲ. ಅಚ್ಚರಿಯಂದರೆ, ಹೊಸ ತಾಲೂಕಿಗೆ ಇನ್ನೂ ಸ್ವಂತ ನೆಲೆಯೇ ಸಿಕ್ಕಿಲ್ಲ.
ಜಿಲ್ಲೆಯಲ್ಲಿನ ಕುಕನೂರು, ಕಾರಟಗಿ ಹಾಗೂ ಕನಕಗಿರಿ ಹೋಬಳಿಯ ಜನರು ನಿರಂತರ ಹೊಸ ತಾಲೂಕಿಗೆ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಈ ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿನ ಮೂರು ಹೊಸ ತಾಲೂಕುಗಳನ್ನು ಘೋಷಣೆ ಮಾಡಿತ್ತು. ಆದರೆ ಅನುಷ್ಠಾನ ಮಾಡಿರಲಿಲ್ಲ. ನಂತರ ಬಂದ ಕಾಂಗ್ರೆಸ್ ಸರ್ಕಾರದಲ್ಲೂ ಹೊಸ ತಾಲೂಕಿನ ಬಗ್ಗೆ ಭಾರಿ ಚರ್ಚೆ ನಡೆದು ಕೊನೆಗೂ ಚುನಾವಣಾ ವರ್ಷದಲ್ಲಿ ಕುಕನೂರು, ಕಾರಟಗಿ ಹಾಗೂ ಕನಕಗಿರಿ ಹೊಸ ತಾಲೂಕುಗಳೆಂದು ಘೋಷಣೆ ಮಾಡಿತು. ಅಲ್ಲದೇ, ಕಾಂಗ್ರೆಸ್ ಸರ್ಕಾರವೇ ಕೊನೆ ಗಳಿಗೆಯಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಕಚೇರಿ ಆರಂಭ ಮಾಡಿದೆ. ಆದರೆ ಈಗಿನ ಸರ್ಕಾರ ಅಲ್ಲಿನ ಕಟ್ಟಡಗಳಿಗೆ ಸರಿಯಾದ ಸೌಕರ್ಯ ಕಲ್ಲಿಸುತ್ತಿಲ್ಲ. ಹೊಸ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ.
ಅಚ್ಚರಿಯಂದರೆ ಜಿಲ್ಲಾಡಳಿತವು ಹೊಸ ತಾಲೂಕುಗಳಿಗೆ ಇನ್ನೂ ಸ್ವಂತ ಜಾಗಕ್ಕಾಗಿ ಹುಡುಕಾಟ ನಡೆಸುತ್ತಲೇ ಇದೆ. ಒಂದೆಡೆ ಜಾಗ ಸಿಕ್ಕರೂ ಕಾನೂನಿನ ತೊಡಕು ಎದುರಿಸುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ. ಪ್ರಸ್ತುತ ಕುಕನೂರು ತಾಲೂಕು ಕೇಂದ್ರಕ್ಕೆ ಗುದ್ನೆಪ್ಪ ಮಠದ ಹಿಂಬದಿಯ 25 ಎಕರೆ ಪ್ರದೇಶವನ್ನು ಗುರುತು ಮಾಡಿದೆ. ಆದರೆ ಅಂತಿಮಗೊಳಿಸಿಲ್ಲ. ಇನ್ನೂ ಕಾರಟಗಿ ಹೊಸ ತಾಲೂಕಿಗೆ ಜಮೀನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದರೆ, ಕನಕಗಿರಿ ತಾಲೂಕು ಕೇಂದ್ರಕ್ಕೆ ಗಾವಟಾಣ ಜಾಗ ಗುರುತು ಮಾಡಿದ್ದರೂ ಅಂತಿಮಗೊಳಿಸಿಲ್ಲ. ಹೀಗಾಗಿ ಮೂರು ಹೊಸ ತಾಲೂಕುಗಳು ಸ್ವಂತ ನೆಲೆ ಕಂಡಿಲ್ಲ. ಪ್ರಸ್ತುತ ಕುಕನೂರು ತಾಲೂಕು ಕೇಂದ್ರ ಕಚೇರಿ ಕುಕನೂರಿನ ಕಲ್ಯಾಣ ಮಂಟಪದಲ್ಲಿ ನಡೆದರೆ, ಕನಕಗಿರಿ ತಾಲೂಕು ಕಚೇರಿ ಯಾತ್ರಾ ನಿವಾಸದಲ್ಲಿದೆ. ಇನ್ನೂ ಕಾರಟಗಿ ತಾಲೂಕು ಕಚೇರಿ ಸರ್ಕಾರಿ ಎಪಿಎಂಸಿ ಕಟ್ಟಡದಲ್ಲಿ ನಡೆದಿದೆ.
ಅವಶ್ಯವಿರುವ ಪೀಠೊಪಕರಣ: ಜಿಲ್ಲೆಯಲ್ಲಿನ ಮೂರು ಹೊಸ ತಾಲೂಕುಗಳಿಗೆ ಸಿಬ್ಬಂದಿ ಕಾರ್ಯ ನಿರ್ವಹಿಸಲು ಕೌಂಟರ್ ವ್ಯವಸ್ಥೆ, ಟೇಬಲ್, ಕುರ್ಚಿ, ತಹಶೀಲ್ದಾರ್ ಹಾಗೂ ಗ್ರೇಡ್-2 ತಹಶೀಲ್ದಾರ್ ಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ, ಸಭಾಭವನ, ವಿದ್ಯುತ್ ವ್ಯವಸ್ಥೆ, ಐದು ಕಂಪ್ಯೂಟರ್-ಪ್ರಿಂಟರ್, ಇಂಟರನೆಟ್ ವ್ಯವಸ್ಥೆ ಸೋಲಾರ್ ಸಂಪರ್ಕ, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಸಭಾ ಭವನಕ್ಕೆ 200 ಪ್ಲಾಸ್ಟಿಕ್ ಕುರ್ಚಿ, ಸಿಬ್ಬಂದಿಗೆ ಅಲಮಾರ್, ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಇತರೆ ವ್ಯವಸ್ಥೆ ಕಲ್ಪಿಸುವ ಅವಶ್ಯಕತೆಯಿದೆ.
51 ಹುದ್ದೆಗಳಲ್ಲಿ 7 ಮಾತ್ರ ಭರ್ತಿ: ರಾಜ್ಯ ಸರ್ಕಾರ ಜಿಲ್ಲೆಯಲ್ಲಿನ ಪ್ರತಿ ಹೊಸ ತಾಲೂಕಿಗೆ 17 ಹುದ್ದೆಗಳನ್ನು ಮಂಜೂರು ಮಾಡಿದ್ದು, ಈ ಪೈಕಿ ಕುಕನೂರು ತಾಲೂಕಿನಲ್ಲಿ 3 ಹುದ್ದೆ ಭರ್ತಿ ಮಾಡಿದ್ದರೆ, 14 ಹುದ್ದೆಗಳು ಖಾಲಿಯಿವೆ. ಕನಕಗಿರಿ ತಾಲೂಕಿಗೆ 2 ಹುದ್ದೆ ಭರ್ತಿ ಮಾಡಿದ್ದು, 15 ಹುದ್ದೆಗಳು ಖಾಲಿಯಿವೆ. ಇನ್ನೂ ಕಾರಟಗಿ ತಾಲೂಕಿಗೆ 2 ಹುದ್ದೆ ಭರ್ತಿ ಮಾಡಲಾಗಿದ್ದು, ಇನ್ನೂ 15 ಹುದ್ದೆಗಳು ಖಾಲಿ ಇವೆ. ಅವಶ್ಯವಿದ್ದ ತಾಲೂಕಿಗೆ ಅನ್ಯ ಅಧಿಕಾರಿಗಳನ್ನು ನಿಯೋಜನೆ ಮಾಡಿದೆ. ಆದರೆ ಸರ್ಕಾರ ಹೊಸ ತಾಲೂಕಿಗೆ ಅಧಿಕಾರಿಗಳನ್ನು ಪರಿಪೂರ್ಣ ಭರ್ತಿ ಮಾಡುತ್ತಿಲ್ಲ.
ರಾಜ್ಯ ಸರ್ಕಾರ ಪ್ರತಿ ತಾಲೂಕಿಗೆ ಬರಿ 15 ಲಕ್ಷ ರೂ. ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ 15 ಲಕ್ಷದಲ್ಲಿ ಏನು ಮಾಡಲು ಸಾಧ್ಯ ಎಂದು ಎಲ್ಲರೂ ಲೆಕ್ಕ ಹಾಕುವಂತಾಗಿದೆ. ಘೋಷಣೆ ಮಾಡಿದ 15 ಲಕ್ಷದಲ್ಲೂ ಜಿಲ್ಲೆಯ ಮೂರು ತಾಲೂಕಿಗೆ ಖಜಾನೆಗೆ 05 ಲಕ್ಷ ರೂ. ಮಾತ್ರ ಜಮೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸರ್ಕಾರ ಹೊಸ ತಾಲೂಕುಗಳ ಬಗ್ಗೆ ಇಷ್ಟೊಂದು ನಿಧಾನಗತಿ ತೋರಿದರೆ ಅವು ಅಭಿವೃದ್ಧಿಯಾಗುವುದು ಇನ್ನೂ ನಾಲ್ಕಾರು ವರ್ಷಗಳೇ ಬೇಕಾಗುತ್ತದೆ ಎನ್ನುವ ಮಾತು ಕೇಳಿ ಬಂದಿದೆ.
ದತ್ತು ಕಮ್ಮಾರ