ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಗಳು ಆರಂಭವಾಗಿದ್ದು, ರೈತಾಪಿ ವಲಯವೂ ಮಳೆಯ ನಿರೀಕ್ಷೆಯಲ್ಲಿದೆ. ಆದರೆ ಮಳೆಯ ಅವಾಂತರದ ಬಗ್ಗೆ ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ. ಈಗಾಗಲೇ ನೆರೆಪೀಡಿತ ಹಳ್ಳಿಗಳನ್ನು ಗುರುತು ಮಾಡಿದ್ದು, ಅವುಗಳ ಮೇಲೆ ನಿಗಾ ಇರಿಸಿ ಜನ ಜಾಗೃತಿ ಮೂಡಿಸುವ ಕಾರ್ಯವೂ ವೇಗವಾಗಿ ನಡೆಸಬೇಕಿದೆ.
ಜಿಲ್ಲೆಯಲ್ಲಿ ಪ್ರತಿ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆಯ ಅಬ್ಬರಕ್ಕೆ ನಗರ ಸೇರಿ ಗ್ರಾಮೀಣ ಭಾಗದ ಜನ ಜೀವನ ಅಸ್ತವ್ಯಸ್ತವಾಗಿ ಪ್ರಯಾಸ ಪಡುವಂತಾಗುತ್ತಿದೆ. ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿಯ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿ ಜನರು ತುಂಬಾ ತೊಂದರೆ ಎದುರಿಸಿದರೆ, ಗ್ರಾಮೀಣ ಭಾಗದಲ್ಲಿನ ಹಳ್ಳದ ಹಾಗೂ ನದಿಯ ಪಾತ್ರದ ಹಿನ್ನೀರು ಪ್ರದೇಶದ
ಜನರ ಮನೆಗಳಿಗೆ ನೀರು ನುಗ್ಗಿ ಜೀವನ ನಡೆಸುವುದು ಕಷ್ಟಕರವಾಗುತ್ತಿದೆ.
ಕಳೆದ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಳೆಯ ಅವಾಂತರಕ್ಕೆ ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯ ಎರಡೂ ಬದಿಯ ಜನರು ಆತಂಕ ಎದುರಿಸಿದ್ದರು. ಇದಲ್ಲದೇ ತುಂಗಭದ್ರಾ ನದಿಪಾತ್ರದ ಹಳ್ಳಿಗಳಲ್ಲಿನ ಜನರು ಸಹಿತ ಡ್ಯಾಂನಿಂದ ನೀರು ಹರಿಬಿಟ್ಟಾಗ ಸಂಕಷ್ಟ ಎದುರಿಸಿದ್ದರು. ಮಳೆಯಿಂದಲೇ ನೆರೆ ಸೃಷ್ಟಿಯಾಗಿ ಬಡವರ ಬದುಕು ಪ್ರಯಾಸ ಪಡುವಂತಾಗಿತ್ತು.
3 ವರ್ಷದಲ್ಲಿ 4644 ಮನೆ ಹಾನಿ: ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಹಾಗೂ ನದಿಪಾತ್ರ, ಹಳ್ಳದ ಪಾತ್ರಗಳಲ್ಲಿ ನೀರಿನ ಸೆಳೆತದಿಂದಾಗಿ ಜಿಲ್ಲೆಯಲ್ಲಿ 4644 ಮನೆಗಳು ಹಾನಿಯಾಗಿವೆ. ಇದರಲ್ಲೂ ಭಾಗಶಹ ಮನೆ ಹಾನಿ, ಪೂರ್ಣ ಮನೆ ಹಾನಿ, ಸ್ವಲ್ಪ ಮನೆ ಹಾನಿಯ ಎಂಬಂತೆ ಎಬಿಸಿ ಕೆಟಗರಿ ಮಾಡಿ ಮನೆಗಳಿಗೆ ಮೂರು ವರ್ಷದಲ್ಲಿ ಬರೊಬ್ಬರಿ 25,64,62,401 ರೂ. ಪರಿಹಾರವನ್ನು ಜಿಲ್ಲಾಡಳಿತ ಸಂತ್ರಸ್ಥ ಕುಟುಂಬಗಳಿಗೆ ವಿತರಣೆ ಮಾಡಿದೆ. ಕಳೆದ ಬಾರಿ ಮನೆ ಹಾನಿಯಾದ
ಒಂದೇ ತಿಂಗಳಲ್ಲಿ ಮನೆಹಾನಿ ಮಾಲೀಕರಿಗೆ ಪರಿಹಾರ ಖಾತೆಗೆ ಜಮೆಯಾಗಿದೆ.
ನೆರೆಹಾನಿಗೆ ಬಾಧಿತ ಗ್ರಾಮಗಳು: ಜಿಲ್ಲಾಡಳಿತವು ಮಳೆ ಹಾಗೂ ನೆರೆ ಹಾನಿಯಿಂದ ಬಾ ಧಿತವಾಗುವ ಹಾಗೂ ಸ್ಥಳಾಂತರಗೊಳಿಸಬಹುದಾದ ಗ್ರಾಮಗಳ ಪಟ್ಟಿ ಮಾಡಿದ್ದು, ಈ ಪೈಕಿ ಗಂಗಾವತಿ ತಾಲೂಕಿನಲ್ಲಿ ಶಾಲಿಗನೂರು, ಕುಂಟೋಜಿ, ಕಕ್ಕರಗೋಳ, ನಂದಿಹಳ್ಳಿ, ಕರಡೋಣ, ಕುಷ್ಟಗಿ ತಾಲೂಕಿನಲ್ಲಿ ಬನ್ನಟ್ಟಿ, ಪುರ್ತಗೇರಿ, ಕಡೂರು, ವಕ್ಕಂದುರ್ಗ, ಕೊಪ್ಪಳ ತಾಲೂಕಿನಲ್ಲಿ ಹಿರೇಸಿಂದೋಗಿ, ಗುನ್ನಳ್ಳಿ, ಕಾಟ್ರಳ್ಳಿ, ಇರಕಲ್‌ಗಡಾ, ಮಾದಿನೂರು, ಕೋಳೂರು, ಕಾಟ್ರಳ್ಳಿ, ನರೇಗಲ್, ಗೊಂಡಬಾಳ ಭಾಗಶಃ ಹಾನಿಯಾಗುವ ಕುರಿತು ಪಟ್ಟಿ ಮಾಡಿದೆ. ಇವುಗಳ ಮೇಲೆ ಜಿಲ್ಲಾಡಳಿತವು ಮಳೆಯಾಗುವ ಮೊದಲೇ ನಿಗಾ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ಜಿಲ್ಲಾಡಳಿತ ಮನೆ ಹಾನಿಯಾದ ಮಾಲೀಕರಿಗೆ ಕಳೆದ ಕೆಲ ವರ್ಷಗಳಿಂದ ತೀವ್ರಗತಿಯಲ್ಲಿ ಪರಿಹಾರ ವಿತರಣೆ ಮಾಡುತ್ತಿದೆ. ಅದರಂತೆ ಈ ಬಾರಿ ಮಳೆಯಿಂದ ಮನೆ ಅಥವಾ ಆಸ್ತಿಯು ಹಾನಿಯಾದರೆ ತಕ್ಷಣ ಪರಿಹಾರ ಜನರ ಖಾತೆಗೆ ಹಾಕಿದರೆ ಮನೆ ದುರಸ್ತಿಗೂ ಕುಟುಂಬಕ್ಕೆ ಅನುಕೂಲವಾಗಲಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಹಾನಿ ಬಗ್ಗೆ ಮೊದಲೇ ನಿಗಾ ವಹಿಸಿದ್ದೇವೆ. ಮಳೆಯಿಂದ ಜಾಗೃತಿ ಕುರಿತು ಸಿಎಂ ಸಹಿತ
ಕೆಲವೊಂದು ಸೂಚನೆ ಕೊಟ್ಟಿದ್ದಾರೆ. ಮನೆ ಹಾನಿಗೆ ಶೀಘ್ರ ಪರಿಹಾರ ವಿತರಣೆ ಮಾಡುತ್ತಿದ್ದೇವೆ. ಇದಲ್ಲದೇ ಮಾನವ ಹಾನಿಗೆ 24 ಗಂಟೆಯಲ್ಲಿ ಹಾಗೂ ಪ್ರಾಣಿ ಹಾನಿಗೆ 48 ಗಂಟೆಯಲ್ಲಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತಿದೆ. ಮಳೆಯ ಬಗ್ಗೆಯೂ ಜಾಗೃತರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.
ಸುಂದರೇಶ ಬಾಬು,
ಕೊಪ್ಪಳ ಜಿಲ್ಲಾಧಿಕಾರಿ
*ದತ್ತು ಕಮ್ಮಾರ