Advertisement

ಕೊಪ್ಪಳ: ತೋಟಗಾರಿಕೆ ಪಾರ್ಕ್‌ ಆರಂಭ ಪ್ರಕ್ರಿಯೆ ನನೆಗುದಿಗೆ

05:54 PM Jan 02, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪಳ: ಜಿಲ್ಲೆಯಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿರುವ ತೋಟಗಾರಿಕೆಯ ಪಾರ್ಕ್‌ಗೆ ಶಕ್ತಿಯೇ ಸಿಗುತ್ತಿಲ್ಲ. ಇದರಿಂದ ವರ್ಷಗಳಿಂದ ಪಾರ್ಕ್‌ ಆರಂಭಿಸುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಯೋಜನೆಗೆ ಇತ್ತ ಜಮೀನು ಇಲ್ಲ, ಅತ್ತ ಅನುದಾನವೂ ಇಲ್ಲದಾಗಿ ಮಧ್ಯಂತರ ಸ್ಥಿತಿಯಲ್ಲಿದೆ. ಇದು ಜಿಲ್ಲೆ ಜನರಲ್ಲಿ ನಿರಾಸೆ ತರಿಸುತ್ತಿದೆ.

Advertisement

ಕೊಪ್ಪಳ ಕ್ಷೇತ್ರ ಏಳೆಂಟು ವರ್ಷಗಳಿಂದ ತೋಟಗಾರಿಕೆ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆ ಕಂಡಿದೆ. ಕೃಷಿಯ ಜೀವನ ಕ್ರಮೇಣ
ತೋಟಗಾರಿಕೆಯತ್ತ ಸಾಗುತ್ತಿದ್ದು, ರೈತಾಪಿ ವಲಯವೂ ಹೆಚ್ಚಿನ ಆಸಕ್ತಿ ತೋರುತ್ತಿದೆ. ಈ ಭಾಗದಲ್ಲಿ ಜನರಿಗೆ ತೋಟಗಾರಿಕೆಯ
ಉತ್ಪನ್ನದ, ವಿವಿಧ ತರಬೇತಿ, ಕಾರ್ಯಾಗಾರ, ಸಂಶೋಧನೆಗಳು, ವಿವಿಧ ಮಾರುಕಟ್ಟೆ ಸೌಲಭ್ಯ ಸೇರಿದಂತೆ ಸಮಗ್ರತೆ ಒಳಗೊಂಡ ತೋಟಗಾರಿಕೆ ಪಾರ್ಕ್‌ನ ಸೌಲಭ್ಯ ದೊರೆಯಲಿ ಎಂಬ ಕಾರಣಕ್ಕಾಗಿ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ ನಲ್ಲಿ ಕನಕಗಿರಿ ತಾಲೂಕಿನ ಸಿರವಾರ ಬಳಿ ತೋಟಗಾರಿಕೆ ಪಾರ್ಕ್‌ ಮಾಡುವುದಾಗಿ ಘೋಷಣೆ ಮಾಡಿದ್ದರು.

ಪಿಪಿಪಿ ಮಾದರಿ ಯೋಜನೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ತೋಟಗಾರಿಕೆ ಟೆಕ್ನಾಲಾಜಿ ಪಾರ್ಕ್‌ಗೆ ಇಲ್ಲಿವರೆಗೂ ಆಸಕ್ತಿ ದೊರೆತಂತೆ ಕಾಣುತ್ತಿಲ್ಲ. ನಂತರ ಬಂದ ಸರ್ಕಾರಗಳು ಈ ಪಾರ್ಕ್‌ ಯೋಜನೆಗೆ ಯಾವ ಹಣವೂ ಮೀಸಲಿಟ್ಟಿಲ್ಲ. ಇದೊಂದು ಪಿಪಿಪಿ ಮಾದರಿಯ ಯೋಜನೆಯಾಗಿದೆ. ಪಬ್ಲಿಕ್‌, ಪ್ರೈವೇಟ್‌ ಪಾರ್ಟ್‌ ನರ್ ಶಿಪ್‌ ಯೋಜನೆಯಡಿ ಇದನ್ನು‌ ಆರಂಭಿಸಬೇಕೆನ್ನುವ ಉತ್ಸಾಹ ಸರ್ಕಾರದಲ್ಲಿದೆ ಆದರೂ ನಂತರದ ಬೆಳವಣಿಗೆ ವೇಗವಾಗಿಲ್ಲ. ಪಾರ್ಕ್‌ ನಲ್ಲಿ ಏನೆಲ್ಲಾ ಇರಬೇಕೆನ್ನುವ ಕುರಿತು ಖಾಸಗಿ ಏಜೆನ್ಸಿಗೆ ಡಿಪಿಆರ್‌ ಮಾಡಲು ಸೂಚಿಸಲಾಗಿದೆ. ಆದರೆ ಮುಂದೆ ಯಾವ ಪ್ರಗತಿಯೂ ಕಾಣದ ಕಾರಣ ಯೋಜನೆಗೆ ಬಲ ಬರುತ್ತಿಲ್ಲ ಎನ್ನುವ ಆಪಾದನೆಯೂ ಇದ್ದೇ ಇದೆ.

200 ಎಕರೆ ಜಮೀನು ಅವಶ್ಯ: ಕನಕಗಿರಿ ತಾಲೂಕಿನ ಶಿರವಾರ ಬಳಿ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್‌ ಆರಂಭಿಸುವುದಾಗಿ ಹೇಳಿದ್ದು, ಜಾಗದ ಹೆಸರು ಮಾತ್ರ ಪ್ರಸ್ತಾಪವಾಗಿದೆ. ಆದರೆ ಇಲ್ಲಿಯವರೆಗೂ ಇದಕ್ಕೆ ಜಮೀನು ಮೀಸಲಿಡುವ ಕಾರ್ಯ
ಸರ್ಕಾರದಿಂದ ನಡೆದಿಲ್ಲ. ಈ ಯೋಜನೆಗೆ ಕನಿಷ್ಟ 150ರಿಂದ 200 ಎಕರೆ ಜಮೀನು ಬೇಕಾಗುತ್ತದೆ. ಇದಕ್ಕೆ ಸರ್ಕಾರದಿಂದ ಯಾವುದೇ ಭೂ ಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಈ ಪಾರ್ಕ್‌ ಗಗನ ಕುಸುಮ ಎನ್ನುವಂತಾಗುತ್ತಿದೆ.

ಪ್ರಸ್ತುತ ಕಾಂಗ್ರೆಸ್‌ ಸರ್ಕಾರ ಇದ್ದು, ಗ್ಯಾರಂಟಿ ಯೋಜನೆಗಳಿಗೆ ಮಹತ್ವ ನೀಡುತ್ತಿದೆ. ಇತರೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಆವಕ ನಿಧಾನಗತಿಯಿದೆ ಎನ್ನುವ ಆರೋಪ ಸಚಿವದ್ವಯರಿಂದಲೇ ಕೇಳಿ ಬರುತ್ತಿದೆ. ಇನ್ನು ದೊಡ್ಡ ಯೋಜನೆಗಳಿಗೆ ಅನುದಾನ ಕೊರತೆ ಎದ್ದು ಕಾಣುತ್ತಿದೆ. ನೀರಾವರಿ ಯೋಜನೆಗಳಿಗೂ ಈಗ ಅನುದಾನ ಇಲ್ಲದಾಗಿದ್ದು,
ಈ ಪಾರ್ಕ್‌ಗೆ ಅನುದಾನ ಸಿಗುವುದೇ ಅನುಮಾನ ಎಂದು ಜನತೆಯೂ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

Advertisement

ಒಟ್ಟಿನಲ್ಲಿ ಸರ್ಕಾರವೇ ಘೋಷಣೆ ಮಾಡಿರುವ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್‌ಗೆ ಶಕ್ತಿಯೇ ಇಲ್ಲದಾಗಿದೆ. ಹೀಗಾಗಿ ಮುಂದೆಯೂ ಹೋಗದೆ, ಹಿಂದೆಯೂ ಬೀಳದೇ ಮಧ್ಯಂತರ ಸ್ಥಿತಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಸ್ವಕ್ಷೇತ್ರದಲ್ಲಿಯೇ ಈ ಪಾರ್ಕ್‌ ಘೋಷಣೆಯಾಗಿದ್ದು, ಇದಕ್ಕೆ ಆಸಕ್ತಿ ವಹಿಸಬೇಕಿದೆ.

ಜಿಲ್ಲೆಯ ಕನಕಗಿರಿ ತಾಲೂಕಿನ ಸಿರವಾರ ಬಳಿ ತೋಟಗಾರಿಕೆ ಪಾರ್ಕ್‌ ಘೋಷಣೆ ಮಾಡಲಾಗಿದೆ. ಆದರೆ ಈವರೆಗೂ ಅದು ಏನೂ
ಪ್ರಗತಿ ಕಂಡಿಲ್ಲ. ಒಂದು ಸರ್ಕಾರವು ಘೋಷಣೆ ಮಾಡಿದ ಮೇಲೆ ಇನ್ನೊಂದು ಸರ್ಕಾರ ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಪಾರ್ಕ್‌ ಬಂದಿದೆ. ಸರ್ಕಾರವು ಅದಕ್ಕೆ ಒತ್ತು ಕೊಡಲಿ.
ಎಸ್‌.ಎ.ಗಫಾರ, ಹೋರಾಟಗಾರರು

*ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next