Advertisement

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸರಳ ಸಂಪನ್ನ

03:19 PM Feb 12, 2021 | Team Udayavani |

ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಕೋವಿಡ್‌-19 ಹಿನ್ನೆಲೆಯಲ್ಲಿ ಸಮಾಜಮುಖೀ ಕಾರ್ಯದೊಂದಿಗೆ ಸರಳವಾಗಿ ನೆರವೇರಿತು. ಮಹಾ ದಾಸೋಹ 15 ದಿನಗಳ ಕಾಲ ಸಾಂಘವಾಗಿ ನಡೆದು ಅವರಾತ್ರಿ ಅಮವಾಸ್ಯೆಯಂದು ಸಂಪನ್ನಗೊಂಡಿತು.

Advertisement

ಈ ವರ್ಷ ಜಾತ್ರೆ ನಡೆಯುತ್ತದೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ದ ಭಕ್ತ ಸಮೂಹಕ್ಕೆ ಗವಿಮಠವು ಕೋವಿಡ್‌ನ‌ಲ್ಲೂ ಸಮಾಜಮುಖೀ ಸಂದೇಶ ನೀಡಿ, ಇತರೆ ಮಠಗಳಿಗೂ ಮಾದರಿಯಾಯಿತು. ಪ್ರತಿವರ್ಷ ಜಾತ್ರಾ ಮಹೋತ್ಸವವು 15 ದಿನಗಳ ಕಾಲ ಸಂಭ್ರಮ, ಸಡಗರದಿಂದ ನಡೆಯುತ್ತಿತ್ತು. ನಾಡಿನ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಸರಳ ಆಚರಣೆಯ ಜೊತೆಗೆ ಭಕ್ತರಿಗೂ ಯಾವುದೇ ತೊಂದರೆಯಾಗದಂತೆ ಗವಿಮಠ ಅತ್ಯಂತ ಕಾಳಜಿ ವಹಿಸಿ ಎಲ್ಲರ ಗಮನ ಸೆಳೆಯಿತು.

ಗವಿಮಠ ಮೂರು ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸರಳ ಆಚರಣೆ ಮಾಡುವ ಜೊತೆಗೆ ಮೂರು ಸಮಾಜಮುಖೀ ಕಾರ್ಯಕ್ಕೆ ಚಾಲನೆ ನೀಡಿದೆ. ಜಿಲ್ಲಾದ್ಯಂತ ಭಕ್ತ ಸಮೂಹವು ಜಾತ್ರೆಯು ಸರಳವಾಗಿ ಎಂಬುದು ಗೊತ್ತಿದ್ದರೂ ಗವಿಮಠಕ್ಕೆ ಆಗಮಿಸಿ ಕಾಯಿ, ಕರ್ಪೂರ ಅರ್ಪಿಸಿ, ಕತೃ ಗದ್ದುಗೆಯಲ್ಲಿ ಗವಿಸಿದ್ದೇಶ್ವರ ಸ್ವಾಮಿಗಳ ದರ್ಶನ ಪಡೆದರು.

ಜಾತ್ರೆ ಆವರಣದಲ್ಲಿ ಯಾವುದೇ ಅಂಗಡಿ, ಮುಂಗಟ್ಟುಗಳು ಇಲ್ಲದಿದ್ದರೂ ಮಠದ ಆವರಣ ಹೊರತುಪಡಿಸಿ ಗಡಿಯಾರ ಕಂಬದ ರಸ್ತೆ ಹಾಗೂ ಎಪಿಎಂಸಿ ರಸ್ತೆ ಯುದ್ಧಕ್ಕೂ ವಿವಿಧ ಅಂಗಡಿ ಮುಂಗಟ್ಟುಗಳನ್ನು ಹಾಕಲಾಗಿತ್ತು. 15 ದಿನವೂ ದಾಸೋಹ: ಕೋವಿಡ್‌ ಹಿನ್ನೆಲೆಯಲ್ಲಿ ಮಹಾ ದಾಸೋಹವನ್ನು ಕೇವಲ ಮೂರು ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಆದರೆ ವಿವಿಧ ಹಳ್ಳಿಗಳ ಭಕ್ತರು ಪ್ರತಿದಿನ ದಾಸೋಹಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಾಸೋಹವನ್ನು 15 ದಿನಗಳವರೆಗೂ ಮುಂದುವರಿಸಲಾಯಿತು. ಕೊನೆಯ ದಿನ ಗೋಧಿ ಪಾಯಸ, ಅನ್ನ, ಸಾಂಬಾರು ಪ್ರಸಾದ ಮಾಡಿ ಜಾತ್ರೆಗೆ ಆಗಮಿಸಿದ್ದ ಭಕ್ತ ಸಮೂಹಕ್ಕೆ ಪ್ರಸಾದ ಸೇವೆ ಅರ್ಪಿಸಿತು.

ಇದನ್ನೂ ಓದಿ :ಆಕಸ್ಮಿಕ ಬೆಂಕಿ ಅವಘಡಕ್ಕೆ ಮೂರು ಗುಡಿಸಲು ಭಸ್ಮ

Advertisement

ಒಟ್ಟಿನಲ್ಲಿ ಕೋವಿಡ್‌ ನಡುವೆಯೂ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಸರಳತೆಯಿಂದ ಆಚರಿಸಲಾಯಿತು. 15 ದಿನಗಳ ಕಾಲ ದಾಸೋಹ ಸೇವೆ ನೀಡಿ ಭಕ್ತ ಸಮೂಹಕ್ಕೆ ಯಾವ ತೊಂದರೆಯಾಗದಂತೆ ಶ್ರೀಮಠವು ನಿಗಾ ವಹಿಸಿತು. ಇನ್ನೂ ಮಠದ ಕತೃ ಗದ್ದುಗೆಯಲ್ಲಿ ಅಮವಾಸ್ಯೆ ದಿನದಂದು ಧಾರ್ಮಿಕ ಕಾರ್ಯ ನೆರವೇರಿಸಿ ಜಾತ್ರೆ ಸಂಪನ್ನಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next