Advertisement

ಕೊಪ್ಪಳ: ಕೈ ಭದ್ರಕೋಟೆಯಾಗಿತ್ತು ಭತ್ತದ ‌ನಾಡು ಗಂಗಾವತಿ

04:56 PM Apr 01, 2023 | Team Udayavani |

ಕೊಪ್ಪಳ: ಭತ್ತದ ಕಣಜ ಎಂದೆನಿಸಿದ ಗಂಗಾವತಿ ವಿಧಾನ ಸಭಾ ಕ್ಷೇತ್ರದ ರಾಜಕೀಯ ಇತಿಹಾಸವು ಇಡೀ ರಾಜ್ಯದ ಗಮನ ಸೆಳೆದಿತ್ತು. ಒಂದು ಕಾಲಘಟ್ಟದಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎಂದೆನಿಸಿದ್ದ ಈ ಕ್ಷೇತ್ರದಲ್ಲಿ ತಿರುಮಲ ದೇವರಾಯಲು, ಎಚ್‌.ಜಿ. ರಾಮುಲು, ಶ್ರೀರಂಗದೇವರಾಲು ಅವರು ರಾಜ್ಯದ ಅಗ್ರಗಣ್ಯ ನಾಯಕರಾಗಿ ಬೀಗಿದ್ದರು. ಕ್ರಮೇಣ ದಳದತ್ತ ಬಾಗಿದ್ದ ಈ ಕ್ಷೇತ್ರವು ಪ್ರಸ್ತುತ ಕಮಲಕ್ಕೆ ನೆಲೆ ನೀಡಿದೆ.

Advertisement

ಹೌದು. ಜಿಲ್ಲೆಯ ಇನ್ನುಳಿದ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಗಂಗಾವತಿ ವಿಧಾನಸಭಾ ಕ್ಷೇತ್ರದ ರಾಜಕೀಯ ಚರ್ಚೆಗಳೇ ಅತ್ಯಂತ ಬಿರುಸಿನಿಂದ ಕೂಡಿರುತ್ತವೆ. ಬಹುಪಾಲು ಈ ಭಾಗದಲ್ಲಿನ ನಾಯಕರುಗಳೇ ಹೆಚ್ಚಾಗಿ ಮಂತ್ರಿಗಿರಿ ದರ್ಬಾರ್‌ ನಡೆಸಿ ರಾಜ್ಯದ ಗಮನ ಸೆಳೆದಿದ್ದಾರೆ. 1957 ರಿಂದ 2018ರ ವರೆಗಿನ 15 ಚುನಾವಣೆಗಳಲ್ಲಿ ಈ ಕ್ಷೇತ್ರದ ವಿಧಾನಸಭಾ ಚುನಾವಣಾ ಲೆಕ್ಕಾಚಾರಗಳನ್ನು ಅವಲೋಕಿಸಿದಾಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬರೋಬ್ಬರಿ 09 ಬಾರಿ ಗೆದ್ದು ಬೀಗಿದ್ದರೆ, ಜೆಡಿಎಸ್‌ 02 ಬಾರಿ, ಬಿಜೆಪಿ 02 ಬಾರಿ ಜೆಎನ್‌ಪಿ 01, ಪಕ್ಷೇತರರು 01 ಬಾರಿ ಗೆದ್ದಿರುವಂತಹ ಇತಿಹಾಸವಿದೆ.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಕಾಲಘಟ್ಟದಲ್ಲಿ ಕಾಂಗ್ರೆಸ್‌ ಪ್ರಭಾವವೇ ಹೆಚ್ಚಿದ್ದ ವೇಳೆ ಗಂಗಾವತಿ ಕ್ಷೇತ್ರದಲ್ಲಿ 1957ರಲ್ಲಿ ದೇಸಾಯಿ ಭೀಮಸೇನ ರಾವ್‌ ಅವರು ಕಾಂಗ್ರೆಸ್‌ನಿಂದ ಸ್ಪ ರ್ಧಿಸಿ 12,862 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿ ಗೆದ್ದು ಬೀಗಿದ್ದರು. 1962 ಹಾಗೂ 1967ರಲ್ಲಿ ಕಾಂಗ್ರೆಸ್‌ನಿಂದ ತಿರುಮಲ ದೇವರಾಯಲು ಗೆಲುವು ಕಂಡಿದ್ದರು.

1972ರಲ್ಲಿ ಎಚ್‌.ಆರ್‌.ರಾಮುಲು ಕಾಂಗ್ರೆಸ್‌ನಿಂದ ಗೆಲುವು ಕಂಡರೆ, 1974ರಲ್ಲಿ ಎಚ್‌.ಆರ್‌.ರಾಮುಲು ನಿಧನರಾದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು. ಉಪ ಚುನಾವಣೆಯಲ್ಲಿ ಅವರ ಪುತ್ರ ಹೆಚ್‌.ಜಿ.ರಾಮುಲು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆದ್ದರು. 1978ರಲ್ಲಿ ಯಾದವರಾವ್‌ ಶೇಷರಾವ್‌ ಅವರು ಕಾಂಗ್ರೆಸ್‌ನಿಂದ ಗೆದ್ದರೆ, 1983ರಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದ ಗಂಗಾವತಿ ಕ್ಷೇತ್ರ ಸೋಲು ಕಂಡಿತ್ತು.

ಆಗ ಎಚ್‌.ಎಸ್‌. ಮುರಳೀಧರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡು ಕ್ಷೇತ್ರದಲ್ಲಿ ಮೊದಲ ಪಕ್ಷೇತರ ಶಾಸಕ ಎಂದೆನಿಸಿದರು. 1985ರಲ್ಲಿ ಜೆಎನ್‌ಪಿಯಿಂದ ಗೌಳಿ ಮಹಾದೇವಪ್ಪ ಗೆದ್ದಿದ್ದರು. 1989, 1994 ಹಾಗೂ 1999ರಲ್ಲಿ ಶ್ರೀರಂಗದೇವರಾಲು ಕಾಂಗ್ರೆಸ್‌ನಿಂದ ಸತತ ಗೆಲುವು ಸಾ ಧಿಸಿದ್ದಾರೆ. 2004ರಲ್ಲಿ ಜೆಡಿಎಸ್‌ ಖಾತೆ ತೆರೆದ ಇಕ್ಬಾಲ್‌ ಅನ್ಸಾರಿ ಅವರು ಗೆಲುವು ಕಂಡರೆ, 2008ರಲ್ಲಿ ಕಮಲದಿಂದ ಪರಣ್ಣ ಮುನವಳ್ಳಿ ಗೆದ್ದು ಬಿಜೆಪಿ ಖಾತೆ ತೆರೆದರು. ಮತ್ತೆ 2013ರಲ್ಲಿ ಇಕ್ಬಾಲ್‌ ಅನ್ಸಾರಿ ಗೆದ್ದರೆ, 2018ರಲ್ಲಿ ಮತ್ತೆ ಪರಣ್ಣ ಮುನವಳ್ಳಿ ಕಮಲ ಅರಳಿಸಿದ್ದಾರೆ.

Advertisement

ಪರಣ್ಣ 03, ಅನ್ಸಾರಿ 4 ಚುನಾವಣೆ: ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು 2004 ರಿಂದ ನಾಲ್ಕು ಚುನಾವಣೆಗಳನ್ನು ಎದುರಿಸಿದ್ದು, ಇವುಗಳಲ್ಲಿ ಎರಡು ಬಾರಿ ಜೆಡಿಎಸ್‌ನಿಂದ ಗೆಲುವು ಸಾ ಧಿಸಿದ್ದರೆ, ಒಂದು ಬಾರಿ ಜೆಡಿಎಸ್‌, ಮತ್ತೂಮ್ಮೆ ಕಾಂಗ್ರೆಸ್‌ನಿಂದ ಸೋಲು ಕಂಡಿದ್ದಾರೆ. ಇನ್ನು ಪರಣ್ಣ ಮುನವಳ್ಳಿ ಅವರು 2008 ರಿಂದ ಮೂರು ಚುನಾವಣೆಗಳನ್ನು ಎದುರಿಸಿ 02 ಬಾರಿ ಕಮಲದಿಂದ ಗೆಲುವು ಕಂಡು, 2013ರಲ್ಲಿ ಒಂದು ಬಾರಿ ಸೋಲು ಕಂಡಿದ್ದಾರೆ. ದಳದಲ್ಲೇ
ಅನ್ಸಾರಿ ತೇಲುತ್ತಾ ನಗೆ ಬೀರಿದ್ದರು. ಪ್ರಸ್ತುತ ಕಾಂಗ್ರೆಸ್‌ ನಲ್ಲಿದ್ದು ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ. ಪರಣ್ಣ ಮುನವಳ್ಳಿ ಮತ್ತೆ ಕಮಲ ಅರಳಿಸುವ ಸಿದ್ಧತೆಯಲ್ಲಿದ್ದಾರೆ.

ಶ್ರೀರಂಗದೇವರಾಯಲು ಹ್ಯಾಟ್ರಿಕ್‌ ಸಾಧನೆ
ಆನೆಗೊಂದಿ ಮನೆತನದ ರಾಜವಂಶಸ್ಥ ಶ್ರೀ ರಂಗದೇವರಾಯಲು ಅವರು ಗಂಗಾವತಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಏಕೈಕ ಶಾಸಕ ಎಂದೆನಿಸಿದ್ದಾರೆ. 15 ವಿಧಾನಸಭಾ ಚುನಾವಣೆ ಕಂಡಿರುವ ಗಂಗಾವತಿ ಕ್ಷೇತ್ರದಲ್ಲಿ ಇವರನ್ನು ಹೊರತು ಪಡಿಸಿ ಇನ್ನುಳಿದ ಯಾರೂ ಮೂರು ಬಾರಿ ಸತತ ಶಾಸಕರಾಗಿ ಗೆಲುವು ಕಂಡಿಲ್ಲ. ಕಾಂಗ್ರೆಸ್‌ ಪಕ್ಷ ಸತತ ಗೆಲುವು ಕಂಡಿದೆ. ಆದರೆ ಅಭ್ಯರ್ಥಿಗಳು ಬೇರೆ ಬೇರೆ ಇದ್ದಾರೆ. ಒಂದೇ ಅಭ್ಯರ್ಥಿಯಾಗಿದ್ದು ಮೂರು ಬಾರಿ ಗೆಲುವು ಕಂಡ ಏಕೈಕ ಶಾಸಕ ಎಂದೆನಿಸಿದ್ದಾರೆ. ಇದಲ್ಲದೇ ಕನಕಗಿರಿ ಕ್ಷೇತ್ರದಲ್ಲೂ ಇವರು ಕೆಲವು ಬಾರಿ ಗೆದ್ದಿದ್ದಾರೆ.

ಕೈ ಭದ್ರಕೋಟೆಗೆ ದಳ-ಕಮಲ ಲಗ್ಗೆ
ಒಂದು ಕಾಲಘಟ್ಟದಲ್ಲಿ ಗಂಗಾವತಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿತ್ತು. ಕಾಂಗ್ರೆಸ್‌ ಹೈಕಮಾಂಡ್‌ನಿಂದ ಏನೇ ಸಂದೇಶ ಬಂದರೂ ಹೆಚ್‌. ಆರ್‌.ರಾಮುಲು, ಹೆಚ್‌.ಜಿ.ರಾಮುಲು ಅವರ ಮೂಲಕವೇ ಇತರೆ ಕ್ಷೇತ್ರಗಳಿಗೆ ಸಂದೇಶ ರವಾನೆಯಾಗುತ್ತಿತ್ತು. ಕೇಂದ್ರ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದ ಹೆಚ್‌.ಜಿ. ರಾಮುಲು ಅವರು ಇಲ್ಲಿ ತಮ್ಮ ಅಧಿಪತ್ಯ ಸಾಧಿಸಿದ್ದರು. ಆದರೆ ಈಗ ಇದೇ ಕ್ಷೇತ್ರವು ದಳ, ಕಮಲದ ಪಾಲಾದ ಇತಿಹಾಸ ಮರೆಯುವಂತಿಲ್ಲ.

*ದತ್ತು ಕಮ್ಮಾರ

 

Advertisement

Udayavani is now on Telegram. Click here to join our channel and stay updated with the latest news.

Next