Advertisement

ರಾಜ್ಯ ರಾಜಕಾರಣದಲ್ಲಿ ಸಪ್ಪಳ ಮಾಡುವ ಕೊಪ್ಪಳ 5 ಕ್ಷೇತ್ರಗಳು

12:43 AM Feb 15, 2023 | Team Udayavani |

1952ರಿಂದ ಈವರೆಗೂ 2018ರವರೆಗೂ 17 ವಿಧಾನಸಭಾ ಚುನಾವಣೆ ಹಾಗೂ ಉಪ ಚುನಾವಣೆಗಳನ್ನು ಕಂಡಿರುವ ಬಿಸಿಲ ನಾಡು, ಖನಿಜ ನಗರಿ ಕೊಪ್ಪಳ ಜಿಲ್ಲೆಯ ರಾಜಕೀಯ ರಾಜ್ಯ ರಾಜಕಾರಣದಲ್ಲಿ ಹಲವು ಬಾರಿ ಸಪ್ಪಳ ಮಾಡಿ ತಿರುಗಿ ನೋಡುವಂತೆ ಮಾಡಿದೆ. ಮೂರು ದಶಕಗಳ ಕಾಲ ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದರೂ ಇತ್ತೀಚೆಗಿನ ವರ್ಷಗಳಲ್ಲಿ ಆಪರೇಷನ್‌ ಕಮಲದ ಆಟವೂ ನಡೆದು ಕಮಲಕ್ಕೆ ಶಕ್ತಿ ಬಂದಿದೆ. ಆರಂಭಿಕ ದಿನದಲ್ಲಿ ಲೋಕ ಸೇವಾ ಸಂಘ ಖಾತೆ ತೆರೆದಿದ್ದು, ಅನಂತರದಲ್ಲಿ ಜೆಎನ್‌ಪಿ ಕಾಣಸಿಕೊಂಡು ಮರೆಯಾಗಿ, ಜನತಾದಳ, ಜೆಡಿಯು, ಪಕ್ಷೇತರರು ಗೆದ್ದು ಬೀಗಿದ್ದಾರೆ. ಈ ಮಧ್ಯೆ ಮತ್ತೆ ಕಾಂಗ್ರೆಸ್‌-ಕಮಲ ಕಾಳಗಕ್ಕೆ ಶುರುವಾಗಿವೆ.

Advertisement

ಕೊಪ್ಪಳ: ಆಂಜನೇಯ ಜನಿಸಿದ ನಾಡು, ಬಿಸಿಲ ನಾಡು, ಖನಿಜ ನಗರಿ ಎಂದೆಲ್ಲಾ ಹೆಸರು ಪಡೆದಿರುವ ಕೊಪ್ಪಳ ಜಿಲ್ಲೆ ಹತ್ತಾರು ರಾಜಕೀಯ ಮಜಲುಗಳನ್ನು ಕಂಡಿದೆ. ಆರಂಭಿಕ ನಾಲ್ಕು ವಿಧಾನಸಭಾ ಕ್ಷೇತ್ರವನ್ನು ಹೊಂದಿದ್ದ ಜಿಲ್ಲೆ 1978ರ ಹೊಸ್ತಿಲಲ್ಲಿ ಕನಕಗಿರಿ ಕ್ಷೇತ್ರ ಹೊಸದಾಗಿ ಉದಯವಾಗಿ ಐದು ಕ್ಷೇತ್ರದಲ್ಲಿ ಚುನಾವಣ ರಣಕಣ ಎದುರಿಸುತ್ತಿದೆ. 1952ರ ಆರಂಭಿಕ ಚುನಾವಣೆಯಲ್ಲಿ ಲೋಕ ಸೇವಾ ಸಂಘದ ಪ್ರತಿನಿ ಧಿಗಳು ಆಯ್ಕೆಯಾಗಿದ್ದರೆ, ಅನಂತರದ ಅವಧಿಯಲ್ಲಿ ಮೂರು ದಶಕಗಳ ಕಾಲ ನಾಲ್ಕು ಕ್ಷೇತ್ರದಲ್ಲಿ ಸತತ ಕಾಂಗ್ರೆಸ್‌ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಜಿಲ್ಲೆಯಲ್ಲಿ ಆರಂಭಿಕ ನಾಲ್ಕು ಕ್ಷೇತ್ರಗಳಲ್ಲಿ 1957ರಿಂದ ಕಾಂಗ್ರೆಸ್‌ ಅಗ್ರಗಣ್ಯ ಸ್ಥಾನದಲ್ಲಿ ಗೆಲುವು ಕಂಡಿದ್ದರೆ, 1978ರಲ್ಲಿ ಅಖಂಡ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕನಕಗಿರಿ ಹೊಸ ಕ್ಷೇತ್ರ ಉದಯವಾಗಿ ಮೊದಲ ಚುನಾವಣೆ ಎದುರಿಸಿ ಕಾಂಗ್ರೆಸ್‌ ಗೆದ್ದಿತ್ತು. 1985ರಲ್ಲಿ ನಾಲ್ಕು ಕ್ಷೇತ್ರದಲ್ಲಿ ಜನತಾ ಪಾರ್ಟಿ ಗೆಲುವು ಸಾಧಿ ಸಿತ್ತು. ಅನಂತರ ಜೆಡಿಎಸ್‌, ಕಮಲ ಅರಳಲು ಶುರವಾಯಿತು. 2008ರಲ್ಲಿ ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಾಡಾಗಿದೆ. ಅಲ್ಲಿಯೂ ಸಹ ಪಕ್ಷೇತರರು ಗೆದ್ದು ಬೀಗಿದ ಇತಿಹಾಸವಿದೆ. ಇತ್ತೀಚೆಗಿನ ವರ್ಷಗಳಲ್ಲಿ ಕಮಲ ಹಾಗೂ ಕಾಂಗ್ರೆಸ್‌ನ ರಣಕಣವೇ ಹೆಚ್ಚಾಗಿದೆ.

ಕೊಪ್ಪಳ
ಕೊಪ್ಪಳ ಕ್ಷೇತ್ರದ ರಾಜಕೀಯವೇ ಒಂದು ರೀತಿ ವಿಚಿತ್ರ. ಕಾಂಗ್ರೆಸ್‌ 9 ಬಾರಿ ಗೆದ್ದಿದ್ದರೆ, ಕಮಲ 1 ಬಾರಿ ಗೆದ್ದಿದೆ. ಜನತಾ ದಳ 1, ಜೆಡಿಯು 1, ಪಕ್ಷೇತರರು ಎರಡು ಬಾರಿ ಗೆದ್ದಿರುವ ಇತಿಹಾಸವಿದೆ. 1957, 1962ರಲ್ಲಿ ಮಲ್ಲಿಕಾರ್ಜುನ ಗೌಡರು, 1967, 1972ರಲ್ಲಿ ವಿರುಪಾಕ್ಷ ಗೌಡರು, 1978ರಲ್ಲಿ ವೀರಣ್ಣ ಪಂಪಣ್ಣ, 1983ರಲ್ಲಿ ಮಲ್ಲಿಕಾರ್ಜುನ ದಿವಟರ್‌ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. 1985ರಲ್ಲಿ ಜೆಎನ್‌ಪಿಯಿಂದ ಅಗಡಿ ವಿರುಪಾಕ್ಷಪ್ಪ ಮೊದಲ ಬಾರಿ ಗೆದ್ದರೆ, ಮತ್ತೆ 1989ರಲ್ಲಿ ಮಲ್ಲಿಕಾರ್ಜುನ ದಿವಟರ್‌ ಪಕ್ಷೇತರರಾಗಿ ಗೆದ್ದಿರುವ ಇತಿಹಾಸವಿದೆ. ಅಂದರೆ ಮೂರು ದಶಕಗಳ ಕಾಲ ಕಾಂಗ್ರೆಸ್‌ ಗೆಲ್ಲುತ್ತಲೇ ಬಂದಿತ್ತು. 1994ರಲ್ಲಿ ರಾಜಕೀಯ ಎಂಟ್ರಿ ಪಡೆದ ಸಂಗಣ್ಣ ಕರಡಿ ಪಕ್ಷೇತರರಾಗಿ ಆಯ್ಕೆಯಾಗಿ, 1999ರಲ್ಲಿ ಜೆಡಿಯುನಿಂದ ಮತ್ತೆ ಗೆದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿ ಕೆ.ಬಸವರಾಜ ಹಿಟ್ನಾಳ ಗೆದ್ದಿದ್ದರು. 2008ರಲ್ಲಿ ಮತ್ತೆ ಜೆಡಿಎಸ್‌ನಿಂದ ಗೆದ್ದ ಸಂಗಣ್ಣ ಕರಡಿ, 2011ರ ವೇಳೆಗೆ ಆಪರೇಷನ್‌ ಕಮಲಕ್ಕೆ ಒಳಗಾಗಿ ಉಪ ಚುನಾವಣೆಯಲ್ಲಿ ಕಮಲದಿಂದ ಮೊದಲ ಬಾರಿಗೆ ಗೆದ್ದು ಬೀಗಿದ್ದರು. 2013ರಿಂದ 2018ರವರಗೂ ಕಾಂಗ್ರೆಸ್‌ನಿಂದ ರಾಘವೇಂದ್ರ ಹಿಟ್ನಾಳ ಸತತ ಗೆಲುವು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಸಂಗಣ್ಣ ಕರಡಿ ನಾಲ್ಕು ಬಾರಿ ಶಾಸಕರಾಗಿದ್ದರೂ ಒಂದೊಂದು ಬಾರಿ ಒಂದೊಂದು ಪಕ್ಷದಿಂದ ಗೆಲುವು ಸಾಧಿ ಸಿದ್ದು ಗಮನಾರ್ಹ ಸಂಗತಿ. 2004ರಲ್ಲಿ ಕೈನಿಂದ ಬಸವರಾಜ ಹಿಟ್ನಾಳ ಗೆದ್ದಿದ್ದರೆ, 2013 ಮತ್ತು 2018ರಲ್ಲಿ ಅವರ ಪುತ್ರ ರಾಘವೇಂದ್ರ ಹಿಟ್ನಾಳ ಕ್ಷೇತ್ರದಲ್ಲಿ ಕೈ ಬಾವುಟ ಹಾರಿಸಿದ್ದಾರೆ.

ಕುಷ್ಟಗಿ
ಕುಷ್ಟಗಿ ಕ್ಷೇತ್ರದಲ್ಲಿ 1957ರಿಂದ 9 ಬಾರಿ ಕಾಂಗ್ರೆಸ್‌, ಎರಡು ಬಾರಿ ಬಾರಿ ಲೋಕ ಸೇವಾ ಸಂಘ ಗೆಲುವು ಕಂಡಿದೆ. ಜೆಡಿಎಸ್‌ ಒಂದು ಬಾರಿ ಗೆಲುವಿನ ನಗೆ ಬೀರಿದ್ದರೆ, ಜೆಎನ್‌ಪಿ 1, ಬಿಜೆಪಿ 2 ಬಾರಿ ಗೆಲುವು ಸಾಧಿಸಿವೆ. ವಿಶೇಷವೆಂಬಂತೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೂ ಯಾವುದೇ ಒಂದು ರಾಷ್ಟ್ರೀಯ ಪಕ್ಷವು ಸತತ ಎರಡನೇ ಬಾರಿ ಗೆಲುವು ಕಂಡಿಲ್ಲ. ಅನ್ಯ ಕ್ಷೇತ್ರದಿಂದ ವಲಸೆ ಬಂದ ಕಾಂಗ್ರೆಸ್‌ನ ಅಮರೇಗೌಡ ಬಯ್ನಾಪೂರ 2008 ಹಾಗೂ 2018ರಲ್ಲಿ 2 ಬಾರಿ ಗೆದ್ದಿದ್ದರೆ, ಕಮಲದಿಂದ 2004, 2013ರಲ್ಲಿ ದೊಡ್ಡನಗೌಡ ಪಾಟೀಲ್‌ ಬಿಜೆಪಿ ಖಾತೆ ತೆರೆದು ಗೆಲುವು ಕಂಡಿದ್ದಾರೆ. ಇವರ ತಂದೆ ಹನುಮಗೌಡರ ಸಹ 1983 ಹಾಗೂ 1989ರಲ್ಲಿ ಈ ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ.

ಕನಕಗಿರಿ
1952ರಿಂದ 1978ರವರೆಗೂ ಗಂಗಾವತಿ ಕ್ಷೇತ್ರದಲ್ಲಿದ್ದ ಕನಕಗಿರಿ 1978ರಲ್ಲಿ ಅಖಂಡ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಮರುವಿಂಗಡಣೆಯಾಗಿ ಹೊಸ ಕ್ಷೇತ್ರ ರಚನೆಯಾಗಿದೆ. 1989ರವರೆಗೂ ಸತತ ಕಾಂಗ್ರೆಸ್‌ ಗೆಲುವು ಕಂಡಿದೆ. 1978ರಲ್ಲಿ ಎಂ. ನಾಗಪ್ಪ ಮುಕ್ಕಪ್ಪ ಗೆದ್ದರೆ, 1983, 1985ರಲ್ಲಿ ಆನೆಗೊಂದಿ ರಾಜವಂಶಸ್ಥ ಶ್ರೀರಂಗದೇವರಾಯಲು ಕಾಂಗ್ರೆಸ್‌ನಿಂದ ಗೆದ್ದಿದ್ದರು. 1989, 1999ರಲ್ಲಿ ಮಲ್ಲಿಕಾರ್ಜುನ ನಾಗಪ್ಪ ಜೆಡಿಎಸ್‌, ಕಾಂಗ್ರೆಸ್‌ನಿಂದ ಗೆಲುವು ಕಂಡಿದ್ದಾರೆ. 2004ರಲ್ಲಿ ಜಿ.ವೀರಪ್ಪ ಬಿಜೆಪಿ ಖಾತೆ ತೆರೆದರೆ, 2008ರಲ್ಲಿ ಕನಕಗಿರಿ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ಈ ವೇಳೆ ಅನ್ಯ ಜಿಲ್ಲೆಯಿಂದ ವಲಸೆ ಬಂದಿದ್ದ ತಂಗಡಗಿ ಪಕ್ಷೇತರರಾಗಿ ಗೆದ್ದು ರಾಜ್ಯದ ಗಮನ ಸೆಳೆದು ಆಪರೇಷನ್‌ ಕಮಲಕ್ಕೆ ಒಳಗಾಗಿದ್ದರು. ಕಮಲದಲ್ಲಿ ಅನರ್ಹರಾಗಿ 2013ರಲ್ಲಿ ಕಾಂಗ್ರೆಸ್‌ ಸೇರಿ ಮತ್ತೆ ಗೆದ್ದರು. ಅನಂತರ 2018ರಲ್ಲಿ ಬಿಜೆಪಿಯಿಂದ ಬಸವರಾಜ ದಡೆಸೂಗೂರು ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಈವರೆಗೂ 3 ಬಾರಿ ಗೆದ್ದವರು ಯಾರೂ ಇಲ್ಲ. ಶ್ರೀರಂಗದೇವರಾಯಲು ಹೆಚ್ಚು ಬಾರಿ ಗೆದ್ದಿದ್ದರೂ ಸಹಿತ ಅವರು ಗಂಗಾವತಿ, ಕನಕಗಿರಿ ಕ್ಷೇತ್ರದಲ್ಲಿ ಬೇರೆ ಬೇರೆ ವರ್ಷ ಸ್ಪರ್ಧಿಸಿ ಗೆದ್ದಿರುವ ಇತಿಹಾಸವಿದೆ.

Advertisement

ಯಲಬುರ್ಗಾ
ಬಯಲು ಸೀಮೆ ಯಲಬುರ್ಗಾ ಕ್ಷೇತ್ರ ರಾಜಕೀಯ ಇತಿಹಾಸ ರೋಚಕವಿದೆ. 1962ರಲ್ಲಿ ಒಂದು ಬಾರಿ ಲೋಕ ಸೇವಾ ಸಂಘದಿಂದ ವೀರಭದ್ರಪ್ಪ ಒಂದು ಬಾರಿ ಗೆದ್ದಿದ್ದು ಬಿಟ್ಟರೆ 1983ರವರೆಗೂ ಸತತ ಕಾಂಗ್ರೆಸ್‌ ಗೆಲುವು ಕಂಡಿದೆ. ಆದರೆ ಬೇರೆ ಬೇರೆ ವ್ಯಕ್ತಿಗಳು ಶಾಸಕರಾಗಿದ್ದಾರೆ. 1957ರಲ್ಲಿ ಶಂಕರಗೌಡ್ರ ಕೈನಿಂದ ಗೆದ್ದರೆ, 1967ರಲ್ಲಿ ಚನ್ನಬಸವನಗೌಡ, 1972ರಲ್ಲಿ ಪ್ರಭುರಾಜ ಲಿಂಗನಗೌಡ, 1978, 1983ರಲ್ಲಿ ಎರಡು ಬಾರಿ ಲಿಂಗರಾಜ ದೇಸಾಯಿ ಕೈನಿಂದಲೇ ಗೆದ್ದಿದ್ದಾರೆ. ಆದರೆ 1983ರಲ್ಲಿ ಲಿಂಗರಾಜ ದೇಸಾಯಿ ನಿಧನರಾದ ಹಿನ್ನೆಲೆಯಲ್ಲಿ ಸುಭಾಶ್ಚಂದ್ರಗೌಡ ಅವರು ಕಾಂಗ್ರೆಸ್‌ನಿಂದ ಗೆದ್ದು ಕ್ಷೇತ್ರ ಗಟ್ಟಿಗೊಳಿಸಿದ್ದರು. 27ನೇ ವಯಸ್ಸಿಗೆ ರಾಜಕೀಯಕ್ಕೆ ಧುಮುಖೀದ ಬಸವರಾಜ ರಾಯರಡ್ಡಿ 1985ರಲ್ಲಿ ಜೆಎನ್‌ಪಿಯಿಂದ ಶಾಸಕರಾದರು. 1989 ಮತ್ತು 1994ರಲ್ಲಿಯೂ ಬಸವರಾಜ ರಾಯರಡ್ಡಿ ಜನತಾ ದಳದಿಂದ ಆಯ್ಕೆಯಾಗಿದ್ದರು. 1996ರಲ್ಲಿ ರಾಯರಡ್ಡಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದರಿಂದ ಆ ಕ್ಷೇತ್ರ ತೆರವಾಗಿ ರುದ್ರಗೌಡ ನಾಯಕ್‌ ದಳದಿಂದ ಆಯ್ಕೆಯಾದರು. 1999ರಲ್ಲಿ ಕೈನಿಂದ ಶಿವಶರಣಗೌಡ ಪಾಟೀಲ್‌ ಆಯ್ಕೆಯಾದರೆ, 2004ರಲ್ಲಿ ಮತ್ತೆ ಕೈನಿಂದ ಬಸವರಾಜ ರಾಯರಡ್ಡಿ, 2008ರಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಈಶಣ್ಣ ಗುಳಗಣ್ಣನವರ್‌ ಆಯ್ಕೆಯಾಗಿ ಕಮಲದ ಖಾತೆ ತೆರೆದರು. 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಬಸವರಾಜ ರಾಯರಡ್ಡಿ ಗೆದ್ದರೆ, 2018ರಲ್ಲಿ ಕಮಲದಿಂದ ಹಾಲಪ್ಪ ಆಚಾರ್‌ ಗೆದ್ದಿದ್ದಾರೆ. ಒಟ್ಟಾರೆ ಬಸವರಾಜ ರಾಯರಡ್ಡಿ ಈ ಕ್ಷೇತ್ರದಿಂದ ಐದು ಬಾರಿ ಬೇರೆ ಬೇರೆ ಪಕ್ಷಗಳಿಂದ ಶಾಸಕರಾಗಿ, ಅತೀಹೆಚ್ಚು ಶಾಸಕರಾದ ಹಿರಿಮೆಯೂ ಇವರಿಗಿದೆ.

ಗಂಗಾವತಿ
ಭತ್ತದ ನಾಡು ಗಂಗಾವತಿಯು ಎಚ್‌.ಜಿ.ರಾಮುಲು ಕುಟುಂಬದ ಕಾಲಘಟ್ಟದಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿತ್ತು. ಇಂದಿರಾ ಗಾಂ ಧಿ ಅತ್ಯಾಪ್ತರಾಗಿದ್ದ ಕುಟುಂಬವಿದು. ಉ.ಕ. ಭಾಗದಲ್ಲಿ ಏನೇ ರಾಜಕೀಯ ಬೆಳವಣಿಗೆ ನಡೆದರೂ ಇವರಿಂದಲೇ ಸಂದೇಶ ಹೊರ ಬೀಳುತ್ತಿದ್ದ ಕಾಲವದು. 1957ರಲ್ಲಿ ಕೈನಿಂದ ದೇಸಾಯಿ ಭೀಮಸೇನರಾವ್‌ ಗೆದ್ದಿದ್ದರೆ, 1962, 1967ರಲ್ಲಿ ತಿರುಮಲರಾವ್‌ ದೇವರಾಯಲು, 1972ರಲ್ಲಿ ಎಚ್‌.ಆರ್‌.ರಾಮುಲು ಕಾಂಗ್ರೆಸ್‌ನಿಂದಲೇ ಶಾಸಕರಾಗಿದ್ದರು. ಇವರು ನಿಧನರಾದ ಪ್ರಯುಕ್ತ 1974ರಲ್ಲಿ ಎಚ್‌.ಜಿ. ರಾಮುಲು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1983ರಲ್ಲಿ ಕೈ ವಿರುದ್ಧ ಸಿಡಿದ ಎಚ್‌.ಎಸ್‌.ಮುರಳೀಧರ ಪಕ್ಷೇತರರಾಗಿ ಗೆದ್ದು ಬೀಗಿದ್ದರು. 1985ರಲ್ಲಿ ಗೌಳಿ ಮಹದೇವಪ್ಪ ಜನತಾ ಪಾರ್ಟಿಯಿಂದ ಗೆದ್ದರೆ, 1989, 1994, 1999 ಸತತ ಮೂರು ಬಾರಿ ಶ್ರೀರಂಗದೇವರಾಯಲು ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. 1983ರಲ್ಲಿ ಕನಕಗಿರಿ ಕ್ಷೇತ್ರದಿಂದಲೂ ಒಂದು ಬಾರಿ ಗೆದ್ದಿದ್ದರು. ಕ್ಷೇತ್ರ ಬದಲಾಗಿದ್ದರಿಂದ ಗಂಗಾವತಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ಸತತ ಗೆಲುವಿನ ನಗೆ ಬೀರಿದವರು. 2004ರಲ್ಲಿ ಇಕ್ಬಾಲ್‌ ಅನ್ಸಾರಿ ಜೆಡಿಎಸ್‌ನಿಂದ ಗೆದ್ದರೆ, 2008ರಲ್ಲಿ ಪರಣ್ಣ ಮುನವಳ್ಳಿ ಬಿಜೆಪಿ ಖಾತೆ ತೆಗೆದಿದ್ದರು. ಮತ್ತೆ 2013ರಲ್ಲಿ ಜೆಡಿಎಸ್‌ನಿಂದ ಇಕ್ಬಾಲ್‌ ಅನ್ಸಾರಿ ಗೆದ್ದಿದ್ದಾರೆ. 2018ರಲ್ಲಿ ಪರಣ್ಣ ಮುನವಳ್ಳಿ ಮತ್ತೆ ಬಿಜೆಪಿಯಿಂದ ಬಾವುಟ ಹಾರಿಸಿದ್ದಾರೆ. ಅನ್ಸಾರಿ ಅವರು ಪûಾಂತರ ಕೈ, ದಳದತ್ತ ಓಡಾಟ ನಡೆಸಿದ್ದರು. 2018ರ ತರುವಾಯ ಕಾಂಗ್ರೆಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದಾರೆ.

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next