Advertisement

ಕೊಪ್ಪಳ: ಅಳವಂಡಿ-ಬಹದ್ದೂರಬಂಡಿ ನೀರಾವರಿ ಸವಾಲ್‌

05:43 PM May 17, 2023 | Team Udayavani |

ಕೊಪ್ಪಳ: ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿ ಗೆಲುವು ಕಂಡಿರುವ ರಾಘವೇಂದ್ರ ಹಿಟ್ನಾಳ ಅವರಿಗೆ
ಅಳವಂಡಿ -ಬೆಟಗೇರಿ ಏತ ನೀರಾವರಿ ಹಾಗೂ ಬಹದ್ದೂರಬಂಡಿ-ನವಲಕಲ್‌ ಏತ ನೀರಾವರಿಯ ಯೋಜನೆಗಳು ಸವಾಲ್‌ ಆಗಿವೆ. ಈ ಯೋಜನೆಗಳು ಕಳೆದ ಐದು ವರ್ಷದಿಂದ ಆಮೆಗತಿಯಲ್ಲಿಯೇ ತೆವಳುತ್ತಿದ್ದು, ಅವುಗಳನ್ನು ಪೂರ್ಣಗೊಳಿಸುವ ಅಗತ್ಯವಿದೆ.

Advertisement

ಕೊಪ್ಪಳ ತಾಲೂಕು ತುಂಗಭದ್ರಾ ಜಲಾಶಯ ಪಕ್ಕದಲ್ಲಿಯೇ ಇದ್ದರೂ ಬರದ ನಾಡು ಎಂದು ಹೆಸರು ಪಡೆದಿದೆ. ಇಲ್ಲಿ ನೀರಾವರಿ
ಯೋಜನೆಗಳು ಯಾವುದೂ ಇಲ್ಲ. ತುಂಗಭದ್ರೆ ಹರಿದರೂ ನೀರಾವರಿ ಭಾಗ್ಯವೇ ಇಲ್ಲಿ ಇಲ್ಲದಂತ ಸ್ಥಿತಿಯಿದೆ.

ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎನ್ನುವ ಕೂಗು ಬಹು ವರ್ಷದಿಂದಲೂ ಇದ್ದರೂ ನಾನಾ
ರಾಜಕೀಯ ಇಚ್ಛಾಶಕ್ತಿಯಿಂದಾಗಿ ಯೋಜನೆಗಳು ಜಾರಿಯಾಗಿರಲಿಲ್ಲ. ಹಿಂದೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಎರಡು ಯೋಜನೆಗಳನ್ನು ಮಂಜೂರು ಮಾಡಿಸಿ ಅದಕ್ಕೆ ಅನುದಾನ ಮೀಸಲಿಡಿಸುವ
ಕಸರತ್ತು ಮಾಡಿದ್ದರು.

ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆಗೆ 88 ಕೋಟಿ ರೂ. ಮೀಸಲಿಟ್ಟು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ. ಪಾಟೀಲ್‌ ಅವರೇ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ನಾನಾ ಕಾರಣಗಳಿಂದ ಅದು ಆಮೆಗತಿಯಲ್ಲಿ ನಡೆದು ಈಗ ವಿದ್ಯುತ್‌ ಸಂಪರ್ಕ ಕಲ್ಪಿಸುವ ಹಂತದಲ್ಲಿದೆ. ಯೋಜನೆಗೆ ಚಾಲನೆ ನೀಡುವುದು ಬಾಕಿಯಿದೆ. ಇದರಿಂದ ಸುತ್ತಲಿನ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಭಾಗ್ಯ ದೊರೆಯಲಿದೆ.

ಇನ್ನು ಬಹದ್ದೂರು ಬಂಡಿ-ನವಲಕಲ್‌ ಏತ ನೀರಾವರಿ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದ ಅವ ಯ ಕೊನೆ ಘಳಿಗೆಯಲ್ಲಿ
188 ಕೋಟಿ ರೂ. ಅನುದಾನ ಮೀಸಲಿಟ್ಟು ಕೊಪ್ಪಳದಲ್ಲಿ ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ಕೊಡಿಸಲಾಯಿತು. ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಸ್ವಲ್ಪ ಕಾಮಗಾರಿ ನಡೆದಿದೆ.

Advertisement

ಪೈಪ್‌ಲೈನ್‌ ಕಾಮಗಾರಿ ನಡೆದಿದೆ. ಒಂದು ಪ್ರದೇಶದಲ್ಲಿ ಚೇಂಬರ್‌ ನಿರ್ಮಿಸುವ ಕಾರ್ಯ ನಡೆದಿದ್ದು ಬಿಟ್ಟರೆ ಇನ್ನುಳಿದಂತೆ ಏಲ್ಲಿಯೂ ಕಾಮಗಾರಿ ನಡೆದಿಲ್ಲ. ಕಾರಣ ಅನುದಾನವಿಲ್ಲ ಎನ್ನುವ ನೆಪದ ಮಾತು ಹಾಗೂ ನಾನಾ ಕಾರಣಗಳು ಇದಕ್ಕೆ ಸಾಕ್ಷಿಯಾಗಿವೆ. ಇದರಿಂದ ಸುತ್ತಲು 12-14 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಭಾಗ್ಯದಿಂದ ವಂಚಿತವಾಗಿವೆ.

ಕ್ಷೇತ್ರದಲ್ಲಿ ಈ ಎರಡು ನೀರಾವರಿ ಯೋಜನೆಗಳು ಪ್ರಮುಖವಾಗಿ ಜಾರಿಯಾಗಲೇಬೇಕಿವೆ. ಶಾಸಕರೇ ಆಸಕ್ತಿ ತೋರಿ ಕಾಮಗಾರಿಗೆ ಚಾಲನೆ ಕೊಡಿಸಿದ್ದು, ಈಗ ಅವರದ್ದೇ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇಷ್ಟು ದಿನ ಬಿಜೆಪಿ ಸರ್ಕಾರ ಅನುದಾನ ಕೊಟ್ಟಿಲ್ಲ ಎಂದು ಆಪಾದನೆ ಮಾಡುತ್ತಿದ್ದ ರಾಘವೇಂದ್ರ ಹಿಟ್ನಾಳ ಅವರು, ಈಗ ತಮ್ಮದೇ ಸರ್ಕಾರ ಬಂದಿದೆ. ಈ ಯೋಜನೆ
ಬಗ್ಗೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ. ಅಲ್ಲದೇ ಇತ್ತೀಚೆಗೆ ಚುನಾವಣೆಯ ಪ್ರಚಾರದಲ್ಲಿ ನನಗೆ ಮೂರನೇ ಬಾರಿ ಆಯ್ಕೆ ಮಾಡಿದರೆ ಐದು ವರ್ಷದಲ್ಲಿ ಈ ಎರಡೂ ಯೋಜನೆಗಳನ್ನು ಜಾರಿಗೊಳಿಸುವೆ ಎಂದು ಕ್ಷೇತ್ರದ ಜನರ ಮುಂದೆ
ಬಹಿರಂಗವಾಗಿಯೇ ವಾಗ್ಧಾನ ಮಾಡಿದ್ದಾರೆ. ವಾಗ್ಧಾನದಂತೆ ಶಾಸಕರು ನಡೆದುಕೊಳ್ಳುವರೇ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.

ಈ ಎರಡು ಯೋಜನೆಗಳ ಜೊತೆ ಜೊತೆಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯು ಕೊಪ್ಪಳ ತಾಲೂಕು ವರೆಗೂ ವಿಸ್ತಾರ ಪಡೆದಿದೆ. ಈ ಯೋಜನೆಯಂತೂ ದಶಕದಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ಅಳವಂಡಿ ಭಾಗದ ಜನರು ನೀರು ಬರುತ್ತೆ ಎಂದು ಇಂದಿಗೂ ಚಾತಕ ಪಕ್ಷಿಯಂತೆ ನೀರಾವರಿಗಾಗಿ ಬಾಯ್ದೆರೆದು ಕನಸು ಕಾಣುತ್ತಲೇ ಇದ್ದಾರೆ. ಮಧ್ಯಪ್ರದೇಶ ಮಾದರಿ ಚೇಂಬರ್‌ ಮಾದರಿ ನೀರಾವರಿ ಮಾಡುವೆವು ಎಂದು ಬಿಜೆಪಿ ಸರ್ಕಾರ ನಿರ್ಧಾರ ಮಾಡಿತ್ತು.ಈಗ ಸರ್ಕಾರ ಬದಲಾಗಿದ್ದು, ಯಾವ
ಹಂತದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

*ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next