ಕೊಪ್ಪ: ಹರಿಹರಪುರ ಬಳಿಯ ಅಂಬಳಿಕೆ ಕೆಸರುಗದ್ದೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ ಯೋಜನಾ ಕಚೇರಿ ವತಿಯಿಂದ ‘ಆಟಿಡೊಂಜಿ ಕೂಟ’ ತುಳುನಾಡ ಜಾನಪದ ಸಂಸ್ಕೃತಿಯನ್ನು ನೆನಪು ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳ ಬಿಡುವಿಲ್ಲದ ಕೆಲಸದ ಒತ್ತಡಗಳ ನಡುವೆ ಹಮ್ಮಿಕೊಂಡಿದ್ದ ‘ಆಟಿಡೊಂಜಿ ಕೂಟ’ದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಕೆಸರು ಗದ್ದೆಯಲ್ಲಿ 100 ಮೀಟರ್ ಓಟದ ಸ್ಪರ್ಧೆ, ಫಿರಮಿಡ್ ರಚಿಸಿ ಎತ್ತರದಲ್ಲಿ ಕಟ್ಟಿದ್ದ ಮಡಕೆ ಒಡೆಯುವ ಸ್ಪರ್ಧೆ, ಮೂರು ಕಾಲಿನ ಓಟ, ಹುಡುಕಾಟ, ಕಪ್ಪೆ ಜಿಗಿತ, ಹಗ್ಗ ಜಗ್ಗಾಟ ಇನ್ನಿತರ ಹತ್ತು ಹಲವು ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ತುಳು ಭಾಷೆಯ ಗತ್ತು ಗೈರತ್ತಿನ ನಿರೂಪಣಾ ಶೈಲಿ ಕ್ರೀಡಾಪಟುಗಳಲ್ಲಿ ಹುರುಪು ಮೂಡಿಸುತ್ತಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ತುಳುನಾಡಿನ ಆಟಿ ಮಾಸದ ಸ್ವಾದಿಷ್ಟ ಖಾದ್ಯಗಳನ್ನೇ ಉಣಬಡಿಸಲಾಯಿತು. ಬೆಳಗ್ಗೆ ಅರಿಶಿನ ಕಡಬು, ಕುಂಬಳ ಕಾಯಿ ಹಲ್ವ, ಪತ್ರೋಡೆ, ಒಂದಲಗ ಚಟ್ನಿ, ಮಧ್ಯಾಹ್ನ ಉಟಕ್ಕೆ ಮಾವಿನ ಮಿಡಿ ಉಪ್ಪಿನ ಕಾಯಿ, ಕಳಲೆ ಪಲ್ಯ, ಅರಶಿನ ಎಲೆ ಕಡುಬು, ಮಾವಿನ ಹಣ್ಣಿನ ಗೊಜ್ಜು, ಬಸಲೆ ಪುಂಡಿ, ಅಣಬೆ ಸಾರು, ಕಳಲೆ ಪಲ್ಯ, ಪತ್ರೊಡೆ, ಕೆಸುವಿನ ಚಟ್ನಿ, ಹುರುಳಿ ಸಾರು, ಖರ್ಜೂರ ಪಾಯಸ, ಕೆಸುವಿನ ಬೇರಿನ ಪಲ್ಯ, ಅನ್ನ, ಮೆಳಕೆ ಕಾಲು ಸಾರು. ಎಲೆ ಅಡಿಕೆ, ಕುಡಿಯಲು ಬಿಸಿ ನೀರು, ನಡುನಡುವೆ ಕಷಾಯ, ಟೀ.. ಈ ಎಲ್ಲ ಖಾದ್ಯಗಳನ್ನು ಕಾರ್ಯಕರ್ತರೇ ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ತಂದಿದ್ದರು.
ಕೆಸರು ಗದ್ದೆಯ ತುದಿಯಲ್ಲಿ ನಿರ್ಮಿಸಿದ್ದ ಸಣ್ಣ ಚಪ್ಪರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ‘ಕೂಟ’ಕ್ಕೆ ಚಾಲನೆ ನೀಡಿದ ಯೋಜನೆಯ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಮಾತನಾಡಿ, ಆಟಿ ತಿಂಗಳಲ್ಲಿ ಎಡೆಬಿಡದೆ ಸುರಿಯುವ ಮಳೆಯೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗುವುದರಿಂದ ಥಂಡಿಯಾಗುವ ದೇಹದ ಉಷ್ಣತೆ ಹೆಚ್ಚಿಸಲು ನಿರ್ದಿಷ್ಟ ಖಾದ್ಯಗಳನ್ನು ತಿನ್ನುವ ಸಂಪ್ರದಾಯವಿದೆ. ಧರ್ಮಸ್ಥಳದಲ್ಲಿ ಆಟಿ ತಿಂಗಳಲ್ಲಿ ನಡೆಯುವ ಮಹಾಲಯದಲ್ಲಿ ಆಟಿ ಮಾಸದ ಎಲ್ಲಾ ಬಗೆಯ ಖಾದ್ಯಗಳನ್ನು ಸವಿಯಬಹುದಾಗಿದೆ. ಚರ್ಮರೋಗ ಪರಿಹಾರಕ್ಕಾಗಿ ಮಣ್ಣನ್ನು ಮೈಗೆ ಅಂಟಿಸಿಕೊಳ್ಳುವ ಚಿಕಿತ್ಸೆಯ ವಿಧಾನವೊಂದಿದೆ. ಇದು ಧಾರ್ಮಿಕ ಹಾಗೂ ವೈಜ್ಞಾನಿಕವಾಗಿಯೂ ನಂಬಿಕೆಗೆ ಪಾತ್ರವಾಗಿದೆ. ಕೆಸರುಗದ್ದೆಯ ಓಟ, ಕುಣಿತ, ಹಗ್ಗಜಗ್ಗಾಟ ಮುಂತಾದ ಕ್ರೀಡೆಗಳು ಬರೀ ಕ್ರೀಡೆಗಳಾಗಿರದೆ ದೇಹ ಮತ್ತು ಮನಸ್ಸಿನ ಚಿಕಿತ್ಸೆಯೂ ಹೌದು. ಕೆಸರಿಗೆ ಒಗ್ಗದ ಯುವ ಪೀಳೆಗೆಗೆ ಕೃಷಿ ಬದುಕಿನ ಸಾಂಸ್ಕೃತಿಕ ಹಿರಿಮೆಯನ್ನು ನೆನಪಿಸುವ ಉದ್ದೇಶದೊಂದಿಗೆ ಯೋಜನೆ ವತಿಯಿಂದ ‘ಆಟಿಡೊಂಜಿ ಕೂಟ’ ಹಮ್ಮಿ ಕೊಳ್ಳಲಾಗುತ್ತಿದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಅಪರೂಪವೆನಿಸುವ ಗ್ರಾಮೀಣ ಭಾಗದ ಕ್ರೀಡಾಕೂಟ ಗಳು ಹೆಚ್ಚು ಹೆಚ್ಚು ನಡೆಯಬೇಕು. ಇದು ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವಾಗಿದೆ. ಹಳೇ ನೆನಪುಗಳು ಮರುಕಳಿಸಲು ಕಾರಣವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಪ್ರಯತ್ನ ಪ್ರಶಂಸನಾರ್ಹ ಎಂದರು.
ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಪಾಲ್ಗೊಂಡು ಗದ್ದೆಯ ಕೆಸರಿನೊಂದಿಗೆ ಆಡಿ ನಲಿದು ಸಂಭ್ರಮಿಸಿದರು. ಕೊಪ್ಪ ಯೋಜನಾಕಾರಿ ಡಿ.ದಿನೇಶ್ ಸ್ವತಃ ಕೆಸರುಗದ್ದೆಗಿಳಿದು ಎಲ್ಲರೊಂದಿಗೆ ಬೆರೆತಿದ್ದು, ಕಾರ್ಯಕರ್ತರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ರಾಜೇಶ್ ಶೇರೆಗಾರ್ ಪಡುಬಿದ್ರೆಯವರು ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ತುಳು ಭಾಷೆಯಲ್ಲಿಯೇ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾದರು. ಕಿರುತೆರೆ ಕಲಾವಿದ ಚಂದ್ರಕಾಂತ್ ಅವರ ತುಳು, ಕನ್ನಡ ಭಾಷೆಯಲ್ಲಿ ಹಾಡುಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸ್ಥಳ ದಾನಿಗಳಾದ ಶಿವಮೂರ್ತಿ ಮತ್ತು ಪದ್ಮನಾಭ್ ಅವರನ್ನು ಸನ್ಮಾನಿಸಲಾಯಿತು. ಕೆಸರು ಗದ್ದೆಯಲ್ಲಿ ಜಾನಪದ ಶೈಲಿಯ ನೃತ್ಯಕ್ಕೆ ಕಲಾವಿದರು ಹೆಜ್ಜೆ ಹಾಕುತ್ತಾ ವಿಶಿಷ್ಟ ಶೈಲಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡರ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ಜಿ.ಪಂ ಸದಸ್ಯ ಎಸ್.ಎನ್.ರಾಮಸ್ವಾಮಿ, ಮಾಜಿ ಉಪಾಧ್ಯಕ್ಷ ಅಸಗೋಡು ನಾಗೇಶ್, ಎಲ್.ಎಂ.ಪ್ರಕಾಶ್, ಓಣಿತೋಟ ರತ್ನಾಕರ್, ಏ.ಓ.ವೆಂಕಟೇಶ್ ಮುಂತಾದವರಿದ್ದರು.