ಮುಂಬಯಿ: ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿನ ಪೇಜಾವರ ಮಠ ಮುಂಬಯಿ ಶಾಖೆಯ ಸಭಾಗೃಹದಲ್ಲಿ ಶನಿವಾರ ಪೂರ್ವಾಹ್ನ ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಮುಂಬಯಿ ಅಂಗ ಸಂಸ್ಥೆಯು ಒಂಬತ್ತನೇ ವಾರ್ಷಿಕ ಗುರುನರಸಿಂಹ ಜಯಂತಿಯನ್ನು ನರಸಿಂಹ ಹೋಮ ಮತ್ತು ಗಣಹೋಮ ಪೂಜಾ ಕಾರ್ಯಕ್ರಮಗಳೊಂದಿಗೆ ಸಂಪ್ರದಾಯಿಕ ಮತ್ತು ವಿಜೃಂಭಣೆಯಿಂದ ಆಚರಿಸಿತು.
ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆಯೊಂದಿಗೆ ಬೆಳಗ್ಗೆ ಜಯಂತ್ಯೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಠದ ಸಭಾಗೃಹದಲ್ಲಿ ರಚಿಸಲ್ಪಟ್ಟ ಮನಾಕರ್ಷಕ ರಂಗೋಲಿ ಮಂಡಲದಲ್ಲಿ ವೈಧಿಕವಾಗಿ ನರಸಿಂಹ ಹೋಮ ನೆರವೇರಿಸಲಾಯಿತು. ಉಡುಪಿ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಹಿರಿಯ ಪುರೋಹಿತ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ ಕಲಶಪೂಜೆ ನಡೆಸಿ ನರಸಿಂಹ ಹೋಮವನ್ನು ಹಾಗೂ ವಿದ್ವಾನ್ ಕೆರ್ವಾಶೆ ಹರಿ ಭಟ್ ಗಣಹೋಮ ನೆರವೇರಿಸಿದರು. ಕೇಶವ ಉಪಾಧ್ಯಾಯ ಮತ್ತು ಮೋಹಿನಿ ಕೆ.ಉಪಾಧ್ಯಾಯ ಪೂಜಾವಿಧಿಗಳ ಯಜಮಾನತ್ವ ವಹಿಸಿದ್ದರು. ವಿಷ್ಣುಮೂರ್ತಿ ಭಟ್, ಗುಂಡು ಭಟ್ (ಜೋಶಿ ಗುಲ್ಬರ್ಗ), ಸುದರ್ಶನ ಭಟ್ ದಹಿಸರ್ ಪೂಜೆಗೆ ಸಹಯೋಗವನ್ನಿತ್ತು ಪ್ರಸಾದವನ್ನಿತ್ತು ಅನುಗ್ರಹಿಸಿದರು.
ನಾವು ದೇವರಲ್ಲಿ ನಿಷ್ಕಳಂಕ ಮನಸ್ಸಿನಿಂದ ಪ್ರಾರ್ಥಿಸಬೇಕು. ಆಗ ಮಾತ್ರ ನಮಗೆ ಅದರ ಫಲ ಸಿಗುತ್ತದೆ. ಸೂರ್ಯನು ಹೇಗೆ ಪ್ರಪಂಚಕ್ಕೆ ಕತ್ತಲೆಯಿಂದ ಬೆಳಕು ನೀಡುತ್ತಾನೆ ಹಾಗೆಯೇ ನರಸಿಂಹ ಕೂಡ ಮನಷ್ಯನಿಗೆ ಕತ್ತಲಿನಿಂದ ಬೆಳಕಿನಡೆ ಕೊಂಡು ಹೋಗುವನು. ಕೂಟ ಮಹಾಜಗತ್ತು ಸಮಗ್ರ ಬಾಂಧವರಿಗೆ ಒಳಿತನ್ನು ಪ್ರಾಪ್ತಿಸಲಿ ಎಂದು ಕೂಟದ ಮುಂಬಯಿ ಅಂಗ ಸಂಸ್ಥೆಯ ಅಧ್ಯಕ್ಷ ಯು.ಎನ್ ಐತಾಳ್ ಆಶಯ ವ್ಯಕ್ತಪಡಿಸಿದರು.
ಎಲ್ಲಿ ಹೋಮ ಇದೆಯೋ ಅಲ್ಲಿ ಕಷ್ಟ ಇರುವುದಿಲ್ಲ. ನಮ್ಮ ಪರಂಪರೆಯಲ್ಲಿ,ನಮ್ಮ ಮನೆಗಳಲ್ಲಿ ವರ್ಷಕ್ಕೆ ಒಂದು ಸಲ ಹೋಮ ನಡೆಸುವ ಪದ್ಧತಿಯಿದೆ. ನಾವು ಹೋಮ ಮಾಡುವುದು ಭಗವಂತನಿಗೆ ಕಡಿಮೆಯಾಗಿದೆ ಎಂಬುವುದರ ದೃಷ್ಟಿಯಿಂದ ಅಲ್ಲ. ನಮಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ. ಇವೆಲ್ಲಾ ನರಸಿಂಹ ದೇವರ ಉಪಾಸಣೆ ಮಾಡುವ ಒಂದು ವಿಧವಾಗಿದೆ. ನಿಮ್ಮದು ಸಜ್ಜನ ಬಂಧುಗಳ ಜಗತ್ತು ಮತ್ತು ಕೂಟ. ಆದುದರಿಂದ ಎಲ್ಲರಲ್ಲೂ ಪ್ರಾರ್ಥನೆ ಎಂದರೆ ಪ್ರತಿದಿನ ನಿಮ್ಮ ನಮ್ಮೆಲ್ಲರ ಮಧ್ಯೆ ನರಸಿಂಹನ ಅವತಾರವಾಗಲಿ. ನಮ್ಮಲ್ಲಿ ಒಂದು ಆಧ್ಯಾತ್ಮಿಕ ಮನಸ್ಸು ಇರಲಿ. ಕಾಮ, ಮತ್ಸರ, ಕ್ರೋಧ, ಮೋಹ, ಮಧ, ಲೋಭ ಈ ಆರೂ ವಿಷಯಗಳು ನಮ್ಮೊಳಗಿನಿಂದ ಮುಕ್ತವಾಗಲಿ. ಇವೆಲ್ಲವೂ ಬೇಕು ಎನ್ನುವುದು ನಮ್ಮಲ್ಲಿದೆ. ನನಗೆ ಮಾತ್ರ ಒಳ್ಳೆಯದಾಗಬೇಕು ಎನ್ನುವುದಕ್ಕೆ ಕಡಿವಾಣ ಹಾಕಿ ಎಲ್ಲರೂ, ಎಲ್ಲವೂ ನೆಮ್ಮದಿಯಿಂದ ಕೂಡಿ ಬಾಳುವಂತಾಗಲಿ ಎಂದು ಈ ಶುಭಾವಸರದಲ್ಲಿ ಪ್ರಾರ್ಥಿಸೋಣ ಎಂದು ವಿದ್ವಾನ್ ಉಪಾಧ್ಯಾಯ ತಿಳಿಸಿದರು.
ಜಯಂತ್ಯೋತ್ಸವ ಸಂಭ್ರಮದಲ್ಲಿ ಕೂಟದ ಅಧ್ಯಕ್ಷ ಯು.ಎನ್ ಐತಾಳ್, ಉಪಾಧ್ಯಕ್ಷ ಪಿ.ವಿ ಐತಾಳ, ಕಾರ್ಯದರ್ಶಿ ಹಾಗೂ ಕೂಟ ಬ್ರಾಹ್ಮಣರ ತ್ತೈಮಾಸಿಕದ ಮುಖವಾಣಿ ಗುರು ನರಸಿಂಹವಾಣಿ ಸಂಪಾದಕ ಪಿ.ಸಿ ಎನ್ ರಾವ್, ಕೋಶಾಧಿಕಾರಿ ದೀಪಕ್ ಕಾರಂತ್, ಜೊತೆ ಕಾರ್ಯದರ್ಶಿ ನಾಗರತ್ನ ಡಿ.ಹೊಳ್ಳಾ, ಜೊತೆ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಎಚ್.ಕೆ ಕಾರಂತ್, ರಮೇಶ್ ಎಂ.ರಾವ್, ಕೆ. ನಾರಾಯಣ ರಾವ್, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕದ ನಿಕಟಪೂರ್ವ ಅಧ್ಯಕ್ಷ ಹೆಚ್.ಬಿ.ಎಲ್ ರಾವ್, ಬಿಎಸ್‌ಕೆಬಿ ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭನ್ ಕೆ. ಪೋತಿ, ಡಾ| ಎ. ಎಸ್.ರಾವ್, ವೈ.ಗುರುರಾಜ್ ಭಟ್, ಚಂದ್ರಶೇಖರ ಭಟ್, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಡಾ| ಸಹನಾ ಎ. ಪೋತಿ, ಶ್ರೀನಿವಾಸ ಭಟ್ ಪರೇಲ್, ನ್ಯಾ| ಗೀತಾ ಆರ್.ಎಲ್.ಭಟ್, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಹರಿ ಭಟ್, ನಿರಂಜನ್ ಗೋಗೆr, ಪವನ್ ಕುಮಾರ್ ಸೇರಿದಂತೆ ಹಲವು ಗಣ್ಯರು, ಕೂಟದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ನೆರೆದ ಭಕ್ತರು, ಕೂಟದ ಬಂಧುಗಳು ಫಲಪುಷ್ಪ, ಸಂಕಲ್ಪಗಳಲ್ಲಿ ಭಾಗಿಯಾಗಿ ವಿಷ್ಣುಶಾಸ್ತ್ರನಾಮಗೈದು ಜಯಂತ್ಯೋತ್ಸವಕ್ಕೆ ಕಳೆಯನ್ನಿತ್ತರು. ಮಹಾ ಮಂಗಳಾರತಿ, ತೀರ್ಥ ಪ್ರಸಾದದೊಂದಿಗೆ ಜಯಂತ್ಯೋತ್ಸವ ಅದ್ದೂರಿಯಾಗಿ ಸಮಾಪ್ತಿ ಕಂಡಿತು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್