Advertisement

ಮಾದರಿ ಸರಕಾರಿ ಶಾಲೆಯಾಗುವತ್ತ ಕೂಕ್ರಬೆಟ್ಟು ಶಾಲೆ

03:43 PM Jul 05, 2023 | Team Udayavani |

ಬೆಳ್ತಂಗಡಿ: ಸವಲತ್ತಿನ ಆರೈಕೆಯಿಲ್ಲದೆ ಸೊರಗಿದ ಸರಕಾರಿ ಶಾಲೆಗಳನ್ನು ಮತ್ತೆ ನಳನಳಿಸುವ ಸಂಕಲ್ಪವೊಂದು° ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯೊಂದು ಕೈಗೆತ್ತಿಕೊಂಡಿದೆ. ಈ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಸೇರ್ಪಡೆಗೊಂಡಿದೆ.

Advertisement

ನಾಲ್ಕು ವರ್ಷದ ಹಿಂದೆ 16 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು ಮುಚ್ಚುವ ಸ್ಥಿತಿಗೆ ತಲುಪಿದ್ದ ಶಾಲೆಗೆ ಭೇಟಿ ನೀಡಿದ್ದ ಸರಕಾರಿ ಶಾಲೆ ಉಳಿಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್‌ ಅಂಚನ್‌ ಅವರು ರಾತ್ರಿ ಅಲ್ಲೇ ವಸತಿ ಹೂಡಿ ಊರೆಲ್ಲ ಪ್ರವಾಸ ಕೈಗೊಂಡು ಹಳೆ ವಿದ್ಯಾರ್ಥಿಗಳು, ಊರವರು, ಶಾಲಾಭಿವೃದ್ಧಿ ಸಮಿತಿ, ಊರಿನ ಶಿಕ್ಷಣ ಪ್ರೇಮಿಗಳನ್ನು ಸೇರಿಸಿ ಶಾಲೆ ಉಳಿವಿಗೆ ಸಂಕಲ್ಪ ತೊಟ್ಟದ್ದಲ್ಲದೆ ಶಾಲೆಯನ್ನು ದತ್ತು ಪಡೆದರು.
1 ಕೋ.ರೂ.

ವೆಚ್ಚದಲ್ಲಿ 8 ಕೊಠಡಿ
ಅದರಂತೆ ಪ್ರಥಮ ವರ್ಷದಲ್ಲೇ ಎಲ್‌.ಕೆ.ಜಿ., ಯು.ಕೆ.ಜಿ. ಆರಂಭಿಸಿ ಒಟ್ಟು 7ನೇ ತರಗತಿವರೆಗೆ ನೂತನ ಕಟ್ಟಡ ರಚನೆಗೆ ಮುಂದಾದರು. ಒಟ್ಟು 8 ಕೊಠಡಿಯ ಕಟ್ಟಡ ನಿರ್ಮಾಣಕ್ಕೆ ಅಂದಾಜು 1 ಕೋ.ರೂ. ಕ್ರಿಯಾಯೋಜನೆ ರೂಪಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಶಾಸಕ ಹರೀಶ್‌ ಪೂಂಜ ಅವರು ಆರಂಭದಲ್ಲಿ 45 ಲಕ್ಷ ರೂ. ಅನುದಾನ ಸಹಿತ ಗ್ರಂಥಾಲಯ ನಿಮಾರ್ಣಕ್ಕೆ ವಿಶೇಷ ಅನುದಾನದಡಿ 10 ಲಕ್ಷ ರೂ., ಸಂಸದರ ನಿಧಿಯಿಂದ 10 ಲಕ್ಷ ರೂ. ಸೇರಿ 65 ಲಕ್ಷ ರೂ. ಕೊಡಿಸಿದ್ದರು. ಉಳಿದಂತೆ ದಾನಿಗಳ ಸಹಕಾರದಲ್ಲಿ ಈಗಾಗಲೇ ಕಟ್ಟಡ ರಚನೆಯಾಗಿದ್ದು ಉಳಿದಂತೆ ಹೆಚ್ಚುವರಿ ಅನುದಾನದ ಭರವಸೆ ನೀಡಿದ್ದಾರೆ ಎಂದು ಪ್ರಕಾಶ್‌ ಅಂಚನ್‌ ತಿಳಿಸಿದ್ದಾರೆ.

ನೃತ್ಯ, ಕರಾಟೆ ತರಬೇತಿ
ಈಗಾಗಲೆ 4 ಖಾಯಂ ಶಿಕ್ಷಕರು ಹಾಗೂ 2 ಅತಿಥಿ ಶಿಕ್ಷಕರಿದ್ದು ಪ್ರಸಕ್ತ 180 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ 300 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಗುರಿ ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯದ್ದಾಗಿದೆ. ಇವರ ಸರಕಾರಿ ಶಾಲೆಯ ಉಳಿಸುವ ಯತ್ನಕ್ಕೆ ಶಿಕ್ಷಣ ಪ್ರೇಮಿಗಳಿಂದ ಮೆಚ್ಚುಗೆ ಪಾತ್ರವಾಗಿದೆ.

16 ರಿಂದ 180ಕ್ಕೇರಿದ ಮಕ್ಕಳ ಸಂಖ್ಯೆ
ಎಂ.ಆರ್‌.ಪಿ.ಎಲ್‌. ಸಿಎಸ್‌ಆರ್‌ ಫಂಡ್‌ನಿಂದ ಶೌಚಾಲಯ ನಿರ್ಮಾಣವಾಗಿದ್ದು, ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ, ಶ್ರೀ ದುರ್ಗಾ ಚಾರಿಟೆಬಲ್‌ ಟ್ರಸ್ಟ್‌ ನ ವತಿಯಿಂದ ಈಗಾಗಲೇ ಶಾಲೆಗೆ ನೂತನ ಬಸ್‌ ನೀಡಲಾಗಿದೆ. ಎರಡು ಎಕ್ರೆ ಸ್ಥಳವಕಾಶವಿರುವ ಶಾಲೆಯಲ್ಲಿ ಸುಸಜ್ಜಿತ ಆಟದ ಮೈದಾನ ರಚಿಸಲಾಗಿದೆ. ಶಾಲೆಯಲ್ಲಿದ್ದ ಮಕ್ಕಳ ಸಂಖ್ಯೆ 16 ರಿಂದ ಈಗ 180ಕ್ಕೇರಿದೆ.

Advertisement

ಬಂಟ್ವಾಳ ದಡ್ಡಲಕಾಡು ಸರಕಾರಿ ಶಾಲೆಯನ್ನು ದತ್ತು ಪಡೆದು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದೇವೆ. ಇದೀಗ ಬೆಳ್ತಂಗಡಿ ತಾಲೂಕಿನ ಮರೋಡಿ ಕೂಕ್ರಬೆಟ್ಟು ಶಾಲೆಯನ್ನು ರಾಜ್ಯದಲ್ಲಿ ಎರಡನೇ ಮಾದರಿ ಸರಕಾರಿ ಶಾಲೆಯಾಗಿ ಗುರುತಿಸುವ ಕಾರ್ಯಯೋಜನೆ ನಮ್ಮದು. ಎಲ್ಲರ ಸಹಕಾರ ಸಿಕ್ಕಿದರೆ ಅದ್ಭುತ ರೀತಿಯಲ್ಲಿ ಶಾಲೆಯನ್ನು ರಚಿಸುವೆವು.
-ಪ್ರಕಾಶ್‌ ಅಂಚನ್‌,
ರಾಜ್ಯಾಧ್ಯಕ್ಷ, ಸರಕಾರಿ ಶಾಲೆ ಉಳಿಸಿ ಸಮಿತಿ

ಶಾಸಕ ಹರೀಶ್‌ ಪೂಂಜ ನೇತೃತ್ವದಲ್ಲಿ ಅಗಸ್ಟ್‌ ತಿಂಗಳಿನಲ್ಲಿ ನೂತನ ಕಟ್ಟಡದ ಉದ್ಘಾಟನೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶಾಲೆಯ ಸಂಪೂರ್ಣ ಅಭಿವೃದ್ಧಿ ದೃಷ್ಟಿಯಿಂದ ಜತೆಯಾಗಿ ಕೆಲಸ ಮಾಡಬೇಕಿದೆ.
-ಜಯಂತ್‌ ಕೋಟ್ಯಾನ್‌,
ಅಧ್ಯಕ್ಷ, ಕೂಕ್ರಬೆಟ್ಟು ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next