ಸಿಂದಗಿ : ಕಾಂಗ್ರೆಸ್ ಪಕ್ಷದ ಕೇಂದ್ರ ಮೇಲ್ಮನೆ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾಧ್ಯಕ್ಷ ರಾಜು ಆಲಗೂರ ಅವರ ಕೈ ಬಲ ಪಡಿಸಲು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲುಸುವಲ್ಲಿ ದಲಿತರು ಮುಖ್ಯ ಪಾತ್ರ ಹಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ, ಜಿಲ್ಲಾ ಜಾಗೃತದಳ ಮತ್ತು ಉಸ್ತುವಾರಿ ಸಮಿತಿ ಸದಸ್ಯ ರಾಜಶೇಖರ ಕೂಚಬಾಳ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಪ್ಪಿಕೊಂಡು ಅವರ ಗೆಲುವಿಗಾಗಿ ಶ್ರಮಿಸೋಣ ಎಂದು ಮಾಜಿ ಶಾಸಕರ ಸಮೇತ ಎಲ್ಲ ಟಿಕೆಟ್ ಆಕಾಂಕ್ಷಿಗಳು ಪಕ್ಷದ ರಾಜ್ಯ ಹಾಗೂ ಜಿಲ್ಲಾ ಹೈಕಮಾಂಡ್ ಮುಂದೆ ಭರವಸೆ ನೀಡಿದ್ದರು.
ಈಗ ಎಐಸಿಸಿಯು ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ. ಹೈಕಮಾಂಡ್ ಮುಂದೆ ನೀಡಿದ ಭರವಸೆಯಂತೆ ಎಲ್ಲ ಟಿಕೆಟ್ ಆಕಾಂಕ್ಷಿಗಳು ಎಐಸಿಸಿ ಸೂಚಿಸಿದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಬೇಕು ಎಂದರು. ಉಪ ಚುನಾವಣೆ ಅಭ್ಯರ್ಥಿ ನಿರ್ಣಯಿಸುವ ವಿಷಯವನ್ನು ವಿರೋ ಧಿಸುವ ರೀತಿಯಲ್ಲಿ ಮಾಜಿ ಶಾಸಕರು ತಮ್ಮ ಮನೆಯಲ್ಲಿ ಕಾರ್ಯಕರ್ತರನ್ನು ಕರೆದು ಸಭೆ ನಡೆಸಿ, ಪತ್ರಿಕಾಗೋಷ್ಠಿ ನಡೆಸುವ ಮೂಲಕ ಪಕ್ಷ ವಿರೋಧಿ ವರ್ತನೆ ಮಾಡುತ್ತಿದ್ದಾರೆ.
ಅವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಳೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿರದ ವ್ಯಕ್ತಿಯನ್ನು ಪಕ್ಷದಿಂದ ಚುನಾವಣೆ ಕಣದಲ್ಲಿ ಇಳಿಸಿದ್ದಿರಿ. ನಾಗಠಾಣ ಮತಕ್ಷೇತ್ರದ ವಿಧಾನಸಭಾ ಚುನವಣೆಯಲ್ಲಿ ರಾತ್ರೋರಾತ್ರಿ ವಿಠuಲ ಕಟಕದೊಂಡ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡಿದಾಗ ಅಲ್ಲಿ ಪಕ್ಷದ ರಾಜು ಆಲಗೂರ ಅವರಿಗೆ ಅನ್ಯಾಯವಾಯಿತು. ಆಗ ನೀವು ಏಕೆ ಧ್ವನಿ ಎತ್ತಲಿಲ್ಲ? ನೀವು ಪಕ್ಷದ ಜಿಲ್ಲಾಧ್ಯಕ್ಷರಿದ್ದಾಗ ಜೆಡಿಎಸ್ ಪಕ್ಷದಿಂದ ಬಿ.ಜಿ. ಹಲಸಂಗಿ ಪಕ್ಷ ಸೇರಿದಾಗ ಅವರಿಗೆ ಇಂಡಿ ವಿಧಾನಸಭಾ ಚುನಾವಣೆ ಕಣದಲ್ಲಿ ನಿಲ್ಲಿಸಿ ಪಕ್ಷದ ಬಿ.ಆರ್. ಪಾಟೀಲ ಅಂಜುಟಗಿ ಅವರಿಗೆ ಅನ್ಯಾಯಮಾಡಿದ್ದಿರಿ.
ಹೀಗೆ ಜಿಲ್ಲೆಯಲ್ಲಿ ಸಾಕಷ್ಟು ಉದಾಹರಣೆಗಳಿವೆ. ನಿಮ್ಮ ವಿಚಾರಕ್ಕೆ ಬಂದಾಗ ಕ್ಷೇತ್ರದಲ್ಲಿ ಅಶೋಕ ಮನಗೂಳಿ ಅವರಿಗೆ ಟಿಕೆಟ್ ನೀಡಿದಾಗ ಏಕೆ ವಿರೋ ಧಿಸುತ್ತೀರಿ. ನಿಮ್ಮ ಸ್ವಾರ್ಥಕ್ಕೆ ಪಕ್ಷ ಬಲಿಕೊಡ ಬೇಡಿ. ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ತರುವಂತ ಕಾರ್ಯ ಮಾಡಬೇಡಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮಲ್ಲಣ್ಣ ಸಾಲಿ ಅವರ ಸೋಲಿಸುವ ಮೂಲಕ ಪಕ್ಷ ವಿರೋಧ ಕೆಲಸ ಮಾಡಿರುವ ಬಗ್ಗೆ ಆತ್ಮಾವಲೋಕ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರಿಗೆ ಟಾಂಗ್ ನೀಡಿದರು. ನಮಗೆ ಯಾವ ಪಕ್ಷ ಸೂಕ್ತ, ಯಾರು ನಮಗೆ ಹಿತ ಎಂಬುದರ ಬಗ್ಗೆ ಬಿಜೆಪಿ ದಲಿತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಮಲ್ಲಿಕಾರ್ಜುನ ಖರ್ಗೆ, ರಾಜು ಆಲಗೂರ ಕೈ ಬಲ ಪಡಿಸಲು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು.
ಕ್ಷೇತ್ರದಲ್ಲಿ ದಲಿತರು ಶೇ. 30 ಇದ್ದು ನಾವೇ ನಿರ್ಣಾಯಕರು. ಎಲ್ಲ ದಲಿತ ಸಮುದಾಯದ ಮುಖಂಡರ ಸಂಪರ್ಕಿಸಿ ವಿಶ್ವಾಸಕ್ಕೆ ತೆಗೆದುಕೊಂಡು ದಲಿತ ಮಹಾ ಒಕ್ಕೂಟ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು. ದಲಿತ ಮುಖಂಡರಾದ ಹುಯೋಗಿ ತಳ್ಳೋಳ್ಳಿ, ಅಶೋಕ ಬಿಜಾಪುರ, ಲಕ್ಷ್ಮಣ ಬನ್ನೆಟ್ಟಿ, ಪರಶುರಾಮ ಕಾಂಬಳೆ, ಸಾಯಬಣ್ಣ ಪುರದಾಳ ಮಾತನಾಡಿದರು. ಬಾಬು ಪವಾರ, ಅನಿಲ ಚವ್ಹಾಣ, ತಿರುಪತಿ ಬಂಡಿವಡ್ಡರ, ಶ್ರೀಶೈಲ ಜಾಲವಾದಿ, ಮಲ್ಲು ಶಂಬೇವಾಡಿ, ರವಿ ಹೊಳಿ ಇದ್ದರು.