ನವದೆಹಲಿ: ಆತ್ಮ ನಿರ್ಭರ ಭಾರತ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮುನ್ನೆಲೆಗೆ ಬಂದಿರುವ ಸ್ವದೇಶಿ ಆ್ಯಪ್ ಕೂ… ತನ್ನ ಬಳಕೆದಾರರ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದೆ ಹಾಗೂ ಈ ಆ್ಯಪ್ ಮೇಲೆ ಚೀನಾ ಹಣಕಾಸಿನ ಹೂಡಿಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕೂ.. ಆ್ಯಪ್ ಮೇಲೆ ಚೀನಾ ಮೂಲಕ ವೆಂಚರ್ ಕ್ಯಾಪಿಟಲ್ ಸಂಸ್ಥೆಯಾಗಿರುವ ಲೀ ಶುನ್ವೆ ಒಂದಷ್ಟು ಹೂಡಿಕೆಯನ್ನು ಮಾಡುವ ಮೂಲಕ ಪಾಲುದಾರಿಕೆಯನ್ನು ಹೊಂದಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಆದರೆ ಈ ಕುರಿತಾಗಿ ತಮ್ಮ ಸ್ಪಷ್ಟನೆಯನ್ನು ನೀಡಿರುವ ಕೂ ಆ್ಯಪ್ ನ CEO ಹಾಗೂ ಸಹ ಸಂಸ್ಥಾಪಕ ರಾಧಾಕೃಷ್ಣ, ಕೂ ಆ್ಯಪ್ ನಲ್ಲಿ ತನ್ನ ಪಾಲುದಾರಿಕೆಯನ್ನು ಹೊಂದಿರುವ ಶುನ್ವೆ ಕ್ಯಾಪಿಟಲ್ ಸಂಸ್ಥೆ ಕೂ… ಅನ್ನು ತೊರೆಯಲಿದೆ. ಪ್ರಸ್ತುತ ಈ ಸಂಸ್ಥೆ ಕೂ… ಆ್ಯಪ್ ನಲ್ಲಿ ಕೇವಲ ಒಂದಂಕಿ ಪಾಲುದಾರಿಕೆಯನ್ನು ಮಾತ್ರ ಹೊಂದಿದೆ ಎಂದಿದ್ದಾರೆ.
ಇನ್ನು ಪ್ಲಂಚ್ ಸೆಕ್ಯೂರಿಟಿ ಸಂಶೋಧಕ ಎಲಿಯಟ್ ಆಂಡರ್ಸನ್ ಕೂ ಆ್ಯಪ್ ನ ಮಾಹಿತಿ ಸೋರಿಕೆಯ ಕುರಿತಾಗಿ ಟ್ವೀಟ್ ಮಾಡಿದ್ದು, ನಾನು ಈ ಆ್ಯಪ್ ಅನ್ನು 30 ನಿಮಿಷ ಗಳ ಕಾಲ ಗಮನಿಸಿದ್ದೇನೆ. ಈ ಸಮಯದಲ್ಲಿ ಇದು ತನ್ನ ಬಳಕೆದಾರರ ಹೆಸರು, ಲಿಂಗ, ಜನ್ಮ ದಿನಾಂಕ, ಇ.ಮೇಲ್ ಮಾಹಿತಿಗಳನ್ನು ಒಳಗೊಂಡಂತೆ ಹಲವಾರು ವೈಯಕ್ತಿಕ ಮಾಹಿತಿಗಳನ್ನು ಸೋರಿಕೆ ಮಾಡುವ ಅಂಶ ತಿಳಿದು ಬಂದಿದೆ ಎಂದಿದ್ದಾರೆ.
ಆದರೆ ಆಂಡರ್ಸನ್ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ರಾಧಾಕೃಷ್ಣ ಅವರು ಕೂ ಆ್ಯಪ್ ನಲ್ಲಿ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಅನಗತ್ಯವಾಗಿ ಆರೋಪಿಸಲಾಗುತ್ತಿದೆ. ಇದು ಸುಳ್ಳು ಮಾಹಿತಿಯಾಗಿದೆ ಎಂದಿದ್ದು, ಕೂ… ಆ್ಯಪ್ ನಲ್ಲಿ ಬಳಕೆದಾರರು ಸ್ವಯಂ ಪ್ರೇರಿತವಾಗಿ ತಮ್ಮ ಮಾಹಿತಿಗಳನ್ನು ಕಾಣುವಂತೆ ಮಾಡಿದರೆ ಮಾತ್ರ ಅವರ ಪ್ರೋಫೈಲ್ ನಲ್ಲಿ ಮಾಹಿತಿಗಳು ಕಾಣಿಸಿಕೊಳ್ಳುತ್ತದೆಯೇ ಹೊರತು ನಾವು ಯಾವುದೇ ಮಾಹಿತಿಗಳನ್ನು ಸೋರಿಕೆ ಮಾಡುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ: ಎಚ್.ವಿಶ್ವನಾಥ್ ವಾಗ್ದಾಳಿ
ರೈತ ಚಳುವಳಿಯ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಗಳಿಗೆ ಬದ್ಧವಾಗದೆ ಆಡಳಿತದ ಕೆಂಗಣ್ಣಿಗೆ ಗುರಿಯಾಗಿರುವ ಟ್ಟೀಟರ್ ಗೆ ಪರ್ಯಾಯವಾಗಿ ಭಾರತೀಯ ಮೂಲದ ಕೂ… ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು, ಹಲವಾರು ರಾಜಕಾರಣಿಗಳು ಹಾಗೂ ಕ್ರಿಕೆಟಿಗರನ್ನು ಒಳಗೊಂಡಂತೆ 3 ಮಿಲಿಯನ್ ಗೂ ಅಧಿಕ ಜನರು ಈ ಆ್ಯಪ್ ಅನ್ನು ಬಳಸಲು ಆರಂಭಿಸಿದ್ದರು.