Advertisement

ವಿಮಲಾ ವಿ. ಪೈ ವಿಶ್ವ ಕೊಂಕಣಿ ಪುರಸ್ಕಾರ ಪ್ರಕಟ

12:15 AM Jan 18, 2023 | Team Udayavani |

ಮಂಗಳೂರು: ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಕೊಡಮಾಡುವ ಅಖೀಲ ಭಾರತ ಮಟ್ಟದ ಕೊಂಕಣಿ ಸಾಹಿತ್ಯ ಪ್ರಶಸ್ತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ-2021, ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ-2021 ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ-2022ಗಳನ್ನು ಪ್ರಕಟಿಸಲಾಗಿದೆ.

Advertisement

ವರ್ಷದ ಅತ್ಯುತ್ತಮ ಸಾಹಿತ್ಯ ಪುರಸ್ಕಾರ 2022ಕ್ಕೆ ಗೋವಾದ ಡಾ| ಜಯಂತಿ ನಾಯ್ಕ ರಚಿಸಿದ ಕೊಂಕಣಿ ದೀರ್ಘ‌ ಕತೆಗಳ ಸಂಕಲನ ತಿಚಿ ಕಾಣಿ (ಅವಳ ಕತೆ), ವರ್ಷದ ಅತ್ಯುತ್ತಮ ಕವಿತಾ ಕೃತಿ ಪುರಸ್ಕಾರ 2022ಕ್ಕೆ ಮುಂಬಯಿಯ ವಲ್ಲಿ ಕ್ವಾಡ್ರಸ್‌ ಅವರ ಕವಿತಾ ಸಂಕಲನ ಭಿತರಲೊ ಕವಿ (ಆಂತರ್ಯದ ಕವಿ) ಆಯ್ಕೆಯಾಗಿವೆ. ಜೀವನ ಸಿದ್ಧಿ ಸಮ್ಮಾನ 2022ಕ್ಕೆ ಹಿರಿಯ ಕೊಂಕಣಿ ಮುಂದಾಳು ಮಾಣಿಕ್‌ ರಾವ್‌ ಗವಣೇಕರ್‌ ಅವರನ್ನು ಕೊಂಕಣಿ ಭಾಷೆ, ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ. 1 ಲಕ್ಷ ರೂ. ಸಮ್ಮಾನ ಧನ ಮತ್ತು ಪ್ರಶಸ್ತಿ ಫಲಕಗಳನ್ನು ಹೊಂದಿರುವ ಈ ಪ್ರಶಸ್ತಿಗಳನ್ನು ದಾನಿ ಟಿ.ವಿ. ಮೋಹನದಾಸ ಪೈ ಅವರು ತಾಯಿ ವಿಮಲಾ ವಿ. ಪೈ ಅವರ ಹೆಸರಿನಲ್ಲಿ ಪ್ರಾಯೋಜಿಸಿದ್ದಾರೆ.

ಫೆಬ್ರವರಿ 9ರಂದು ಬೆಳಗ್ಗೆ 10 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಾರ್ಷಿಕ ವಿಶ್ವ ಕೊಂಕಣಿ ಪುರಸ್ಕಾರ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು. ಈ ಪ್ರಶಸ್ತಿಗಳನ್ನು ಎರಡು ಸ್ತರದ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲಾಗಿದ್ದು, ಪ್ರಾಥಮಿಕ ಸ್ತರದ ಆಯ್ಕೆ ಮಂಡಳಿಯ 16 ಸದಸ್ಯರ ನಾಮನಿರ್ದೇಶನದ ಆಧಾರದಲ್ಲಿ 5 ಸದಸ್ಯರ ಪರಿವೀಕ್ಷಕ ಮಂಡಳಿಯು ಅಂತಿಮ ಆಯ್ಕೆ ನಡೆಸುತ್ತದೆ.

2022ನೇ ಸಾಲಿನ ಪರಿವೀಕ್ಷಕ ಮಂಡಳಿಯಲ್ಲಿ ಉದಯ ಭೆಂಬ್ರೆ, ಡಾ| ಕಿರಣ್‌ ಬುಡುRಳೆ, ಪಯ್ಯನೂರು ರಮೇಶ ಪೈ, ಮೆಲ್ವಿನ್‌ ರಾಡ್ರಿಗಸ್‌, ಗೋಕುಲದಾಸ ಪ್ರಭು ಸದಸ್ಯರಾಗಿದ್ದಾರೆ. 1996ನೇ ಇಸವಿಯಲ್ಲಿ ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ ಅವರ ನೇತೃತ್ವದಲ್ಲಿ ಪ್ರಾರಂಭವಾದ ಕೊಂಕಣಿ ಭಾಸ್‌ ಆನಿ ಸಂಸ್ಕೃತಿ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸಿದ್ದು ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಹಾಗೂ ಕೊಂಕಣಿ ಸಮುದಾಯಗಳ ಸರ್ವಾಂಗೀಣ ಬೆಳವಣಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next