Advertisement

ರಂಜಿಸಿದ ಕೊಂಕಣಿ ನಾಟಕ ದೇವಾಲೇ ಖೇಳು

09:26 PM Feb 06, 2020 | mahesh |

ಕೊಂಕಣಿ ನಾಟಕಗಳ ಪ್ರಯೋಗವು ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಇತ್ತೀಚಿಗೆ ಮಂಗಳೂರಿನಲ್ಲಿ ಪ್ರದರ್ಶನಗೊಂಡ ದೇವಾಲೆ ಖೇಳು ಕಿರು ನಾಟಕ ಆ ಕೊರತೆಯನ್ನು ನೀಗಿಸಲು ಸಫ‌ಲವಾಯಿತು . ಎಂ.ಶಾಂತರಾಮ ಕುಡ್ವರು ರಚಿಸಿದ ಈ ಕಿರು ನಾಟಕವನ್ನು ಜಿ.ಎಸ್‌.ಬಿ.ಮಹಿಳಾ ವೃಂದ ಮಂಗಳೂರು ಇದರ ಸದಸ್ಯರು ಅಭಿನಯಿಸಿದರು .

Advertisement

ದೇವು ಹಾಗೂ ವಿನುತಾ ಪರಸ್ಪರ ಪ್ರೇಮಿಸುತ್ತಾರೆ . ಆದರೆ ಹೆತ್ತವರು ತಾವು ಹೇಳಿದ ನೆಂಟಸ್ತಿಕೆಯೇ ಆಗಬೇಕೆಂದು ಇವರ ಪ್ರೇಮಕ್ಕೆ ತಣ್ಣೀರೆರಚುತ್ತಾರೆ. ಯುವ ಪ್ರೇಮಿಗಳು ಆ ನೆಂಟಸ್ತಿಕೆ ತಪ್ಪಿಸಲು ಉಪಾಯ ಹೂಡುತ್ತಾರೆ. ವಿನುತಾಳು ತನ್ನನ್ನು ನೋಡಲು ಬರುವ ವರನಿಗೆ ಜ್ಯೂಸ್‌ನಲ್ಲಿ ಬೇಧಿಯ ಮಾತ್ರೆ ಹಾಕಿ ಬೇಧಿಯಾಗುವಂತೆ ಮಾಡುವುದು , ದೇವು ಹೆಣ್ಣು ನೋಡುವಾಗ ಫಿಟ್ಸ್‌ ಬಂದಂತೆ ನಟಿಸಿ ಬೀಳುವುದು , ಆ ಮೂಲಕ ವರನ ಆರೋಗ್ಯ ಸರಿಯಲ್ಲ ಎಂದು ಹೆತ್ತವರೇ ನಿರಾಕರಿಸುವಂತೆ ಮಾಡುವುದು ಎಂಬ ಉಪಾಯ ಮಾಡುತ್ತಾರೆ .

ಆದರೆ , ಇಲ್ಲೊಂದು ಅನಿರೀಕ್ಷಿತ ಸನ್ನಿವೇಶ , ನಾಟಕದ ಹೆಸರೇ ಹೇಳುವಂತೆ ದೇವರ ಆಟ ಪ್ರಾರಂಭವಾಗುತ್ತದೆ . ಇಬ್ಬರ ಹೆತ್ತವರೂ ನೋಡಿದ ನೆಂಟಸ್ಥಿಕೆ ದೇವು ವಿನುತಾರೇ ಆಗಿರುತ್ತಾರೆ . ಆದರೆ , ಈ ಸಂದರ್ಭದಲ್ಲಿ ದೇವು ವಿನುತಾರು ಪರಸ್ಪರರನ್ನು ನೋಡಿರದ ಕಾರಣ , ಅವರ ಪೂರ್ವಯೋಜಿತ ಉಪಾಯ ಪ್ರಯೋಗವಾಗುತ್ತದೆ. ದೇವು ತಲೆ ತಿರುಗಿ ಬಿದ್ದಾಗ ವಿನುತಾಳು ದೇವುನನ್ನು ನೋಡಿ , ಹೆದರಿ ತಾವು ಮಾಡಿದ ಉಪಾಯವನ್ನು ಹೇಳುತ್ತಾಳೆ .ದೇವರ ಆಟದಂತೆ ದೇವು ವಿನುತಾರ ಮದುವೆಯಾಗಿ ಸುಖಾಂತವಾಗುತ್ತದೆ .

ಉತ್ತಮ ಕಥೆಯನ್ನು ಹೊಂದಿರುವ ಕಿರು ನಾಟಕ ಸಂಪೂರ್ಣ ಹಾಸ್ಯಮಯ ವಾಗಿದ್ದು , ಪಾತ್ರಧಾರಿಗಳೂ ಚೆನ್ನಾಗಿ ನಿರ್ವಹಿಸಿದರು . ದೇವು ಪಾತ್ರದಲ್ಲಿ ರಾಧಿಕಾ ಕಾಮತ್‌ ಉತ್ತಮವಾಗಿ ಅಭಿನಯಿಸಿದರು . ಕಥಾನಾಯಕನ ಗತ್ತು , ಶೈಲಿ ಎಲ್ಲವೂ ಸಮರ್ಪಕವಾಗಿತ್ತು . ವಿನುತಾಳ ಪಾತ್ರದಲ್ಲಿ ನಯನಾ ರಾವ್‌ ನಾಯಕಿಯ ಮಾನಸಿಕ ತುಮುಲವನ್ನು ಚೆನ್ನಾಗಿ ಚಿತ್ರಿಸಿದರು . ವಿನುತಾಳ ತಂದೆ ರಾಮರಾಯನಾಗಿ ಜಯಂತಿ ನಾಯಕ್‌ , ತಾಯಿ ಸುನಂದಾಳಾಗಿ ಗೀತಾ ಕಾಮತ್‌ ಹೆತ್ತವರ ಕಾಳಜಿ ಹೇಗಿರಬೇಕು ಎಂಬುದರ ಉತ್ತಮ ಚಿತ್ರಣ ನೀಡಿದರು . ದೇವು ತಂದೆ ಶ್ರೀನಿವಾಸನಾಗಿ ಸಬಿತಾ ಕಾ ಮತ್‌ ಮರೋಳಿಯವರು ಮಿಂಚಿದರು . ತಾಯಿ ಕಿವುಡಿ ರಮಾಬಾಯಿ ಯಾಗಿ ವಿಮಲಾ ಕಾಮತ್‌ ಹಾಸ್ಯದ ಕಡಲಲ್ಲಿ ತೇಲಿಸಿದರು . ಕಿವಿ ಸರಿಯಾಗಿ ಕೇಳಿಸದೇ , ಎದುರು ಪಾತ್ರ ಧಾರಿಗಳ ಸಂಭಾಷಣೆಯ ಶಬ್ದಗಳನ್ನು ತಿರುವಿ ಹೇಳಿದ ಕ್ರಮ ನಾಟಕದ ಟ್ರಂಪ್‌ಕಾರ್ಡ್‌ ಆಯಿತು .

ಶ್ರೀನಿವಾಸ – ರಮಾ ಅವರ ಸಂಭಾಷಣೆ ನೈಜ ದಂಪತಿಗಳನ್ನು ನೆನಪಿಸಿತು ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಕಡಿಮೆ ಎಂಬ ಅಭಿಪ್ರಾಯ ಇದೆ . ಆದರೆ ಈ ನಾಟಕದಲ್ಲಿ ಬಳಸಿದ ಕೊಂಕಣಿ ಭಾಷೆಯ ಸೊಗಡು ಆಕರ್ಷಿಸಿತು . ಹಾಸ್ಯದ ಕೆಲವೊಂದು “ಪಂಚಿಂಗ್‌ ಡೈಲಾಗ್‌’ಗಳಿಗೆ ಕರತಾಡನ ಸಾಕ್ಷಿಯಾಯಿತು . ನಾಟಕದಲ್ಲಿ ಹಾಡುಗಳೇ ಇರದಿರುವುದು ಕೊರತೆಯಾಗಿ ಕಂಡಿತು.

Advertisement

ಎಂ.ಗಿರಿಧರ ಪಿ.ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next