ಮಂಗಳೂರು: ಕೊಂಕಣ ರೈಲ್ವೇ ನಿಗಮದ ಜತೆಗೇ ನೆನೆಪಾಗುವುದು ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್. ಮುಂಬಯಿ ಮಹಾ ನಗರದೊಂದಿಗೆ ಕರ್ನಾಟಕದ ಕರಾವಳಿ ಭಾಗವನ್ನು ರೈಲು ಮಾರ್ಗದ ಮೂಲಕ ಜೋಡಿಸುವ ಕೊಂಕಣ ರೈಲ್ವೇ ಯೋಜನೆಯನ್ನು ಕಾರ್ಯರೂಪಕ್ಕೆ ತಂದವರಲ್ಲಿ ಜಾರ್ಜ್ ಪ್ರಮುಖರು.
ಅತ್ಯಂತ ಕ್ಲಿಷ್ಟಕರ ಮತ್ತು ಬೃಹತ್ ಯೋಜನೆಯಾದ ಕೊಂಕಣ ರೈಲ್ವೇ ಅನುಷ್ಠಾನ ಸಾಧ್ಯವಿಲ್ಲ ಎಂದು ಎಲ್ಲರೂ ಭಾವಿಸಿದಾಗ ಇಚ್ಛಾಶಕ್ತಿಯ ಮುಂದೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿದವರು ಜಾರ್ಜ್. ಕರ್ನಾಟಕದ ಕರಾವಳಿ ಭಾಗವನ್ನು ರೈಲ್ವೇ ಭೂಪಟದಲ್ಲಿ ಬೆಸೆದು ಹುಟ್ಟೂರಿನ ಬಗ್ಗೆ ಇದ್ದ ಪ್ರೀತಿಯನ್ನು ಕಾರ್ಯರೂಪದಲ್ಲಿ ತಂದವರು. ಇದು ಇಡೀ ಕರಾವಳಿ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಹೊಸ ಆಯಾಮ ಕೊಟ್ಟಿದೆ.
ಜಾರ್ಜ್ 1989ರಲ್ಲಿ ರೈಲ್ವೇ ಸಚಿವರಾಗಿದ್ದ ವೇಳೆ ಪ್ರಸ್ತಾವ ರೂಪದಲ್ಲೇ ಉಳಿದುಕೊಂಡಿದ್ದ ಕೊಂಕಣ ರೈಲ್ವೇ ಯೋಜನೆಯನ್ನು ಅನುಷ್ಠಾನಗೊಳಿಸಲು ದೃಢ ನಿಶ್ಚಯ ಮಾಡಿದರು. ಸುಮಾರು 2,000 ಸೇತುವೆಗಳು, 91 ಸುರಂಗಗಳು, ಕಡಿದಾದ ಬೆಟ್ಟಗುಡ್ಡಗಳು, ಇತ್ಯಾದಿ ಸವಾಲುಗಳನ್ನು ಮೆಟ್ಟಿ ನಿಂತು ಹೊಸ ಇತಿಹಾಸ ಬರೆದರು.
ಇದಕ್ಕಾಗಿ ಕೊಂಕಣ ರೈಲ್ವೇ ನಿಗಮ ಲಿ. ಎಂಬ ಸ್ವತಂತ್ರ ಸಂಸ್ಥೆಯನ್ನು 1989ರಲ್ಲಿ ಸ್ಥಾಪಿಸಿದ್ದರು. ನಿಗಮದ ಮೂಲಕ ಬಾಂಡ್‌ಗಳನ್ನು ಮಾಡಿ ಸಾರ್ವಜನಿಕವಾಗಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿದರು. ಆಗ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ರಾಮಕೃಷ್ಣ ಹೆಗಡೆ ಹಾಗೂ ಕೇಂದ್ರ ಸಚಿವ ಮಧು ದಂಡವತೆ ಅವರ ಸಹಕಾರ ಪಡೆದರು. ಕೇವಲ 8 ವರ್ಷಗಳಲ್ಲಿ ಅತ್ಯಂತ ಕ್ಲಿಷ್ಟಕರವಾದ ಕೊಂಕಣ ರೈಲು ಯೋಜನೆ ಪೂರ್ಣಗೊಂಡಿತು. ಕೊಂಕಣ ರೈಲು ಮಾರ್ಗ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸಹಿತ ಕರಾವಳಿ ಕರ್ನಾಟಕದ ಚಿತ್ರಣವೇ ಬದಲಾಗಲು ಜಾರ್ಜ್ ಕಾರಣರಾದರು. ಈ ರೈಲು ಯೋಜನೆ ಮೂಲಕ ದೇಶದ ಮತ್ತು ಕರಾವಳಿ ಕರ್ನಾಟಕದ ಭಾಗದಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ಚಿರಸ್ಥಾಯಿಗೊಳಿಸಿರುವುದು ಗಮನಾರ್ಹ.
ರಾತೋರಾತ್ರಿ ಡಿಸಿ ಬಳಿ ಫೋನು ಮಾಡಿಸಿದ್ದರು
ಕುಂದಾಪುರ: ಉಡುಪಿಯಲ್ಲಿ ಕೊಂಕಣ ರೈಲು ಯೋಜನೆಗೆ ಶಿಲಾನ್ಯಾಸ ಸಮಾರಂಭ. 1990ರಲ್ಲಿ. ರೈಲ್ವೇ ಸಚಿವ ಜಾರ್ಜ್ ಆಗಮಿಸುವವರಿದ್ದರು. ಕೇಂದ್ರದಲ್ಲಿ ಎನ್‌ಡಿಎ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದವು. ನಾನು ಜನತಾಪಕ್ಷದ ಅವಿಭಜಿತ ದ.ಕ. ಜಿಲ್ಲಾಧ್ಯಕ್ಷನಾಗಿದ್ದೆ. ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ. ಇದು ಜಾರ್ಜ್ ಅವರಿಗೆ ತಿಳಿದು ನನ್ನ ಪಕ್ಷದ ಅಧ್ಯಕ್ಷರು ಪಾಲ್ಗೊಳ್ಳದೆ ನಾನು ಶಿಲಾನ್ಯಾಸ ನಡೆಸುವುದಿಲ್ಲ ಎಂದು ಹೇಳಿದರು. ಆಗ ದ.ಕ. ಡಿಸಿ ಕರೆ ಮೂಲಕ ಆಹ್ವಾನ ನೀಡಿ ಭಾಗವಹಿಸಲು ವಿನಂತಿಸಿದರು. ಹಾಗಾಗಿ ನಾನು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಹೀಗಂತ ಉದಯವಾಣಿ ಜತೆಗೆ ನೆನಪಿನ ಸುರುಳಿಗಳನ್ನು ಬಿಚ್ಚಿಕೊಂಡವರು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಬಸೂÅರು.