Advertisement

ಕೊಂಕಣ ರೈಲ್ವೆ ನಿರ್ಲಕ್ಷ್ಯ : ಜನರಿಗೆ ಜಲವಾಸ : ಮನೆ-ದೇವಾಲಯಗಳಿಗೆ ಹೊಕ್ಕ ನೀರು

10:44 AM Aug 13, 2020 | sudhir |

ಹೊನ್ನಾವರ: ದಕ್ಷಿಣೋತ್ತರವಾಗಿ ಮೈಚಾಚಿದ ಕೊಂಕಣ ರೈಲ್ವೆ ಮಾರ್ಗ ಪೂರ್ವದ ಸಹ್ಯಾದ್ರಿಯಿಂದ ಇಳಿದು ಬಂದು ಪಶ್ಚಿಮ ಸಮುದ್ರ ಸೇರುವ ಪರಂಪರೆಯ ಕಾಲುವೆಗೆ ಅಡ್ಡಲಾಗಿ ಮೈಚಾಚಿದೆ. ಇದನ್ನು ಅಧ್ಯಯನ ಮಾಡಿದ ಕೊಂಕಣ ರೈಲ್ವೆ ತನ್ನ ಮಾರ್ಗದ ಎಡಬಲದಲ್ಲಿ ರಾಜಾಕಾಲುವೆ ನಿರ್ಮಿಸಿ ನೀರು ಹರಿಯಲು ಅವಕಾಶ ಮಾಡಿಕೊಟ್ಟಿತ್ತು. ಈ ಕಾಲುವೆಗಳೆಲ್ಲ
ಮುಚ್ಚಿಹೋದ ಕಾರಣ ಅಕ್ಕಪಕ್ಕದ ಮನೆ, ದೇವಾಲಯ, ಕಟ್ಟಡ ಹಾಗೂ ಕೃಷಿ ಭೂಮಿಗಳು ಜಲಾವಾಸ
ಅನುಭವಿಸುವಂತಾಗಿದೆ.

Advertisement

ಕರ್ಕಿ ಗ್ರಾಮದೇವರಾದ ಮೂಡಗಣಪತಿ ನೀರಲ್ಲಿ ಮುಳುಗಿದ್ದು,  ಸರ್ಪಕರ್ಣೇಶ್ವರ ದೇವಾಲಯದ ದಾರಿಯಲ್ಲಿ ನೀರು ತುಂಬಿಕೊಂಡು ನೀರು ಮೆಟ್ಟಿಲನ್ನು ಏರಿದೆ. ಇದು ಮಾನಸಿಕ ಕಿರಿಕಿರಿಯಾದರೆ ಕರ್ಕಿಯಿಂದ ಹಳದೀಪುರ, ಧಾರೇಶ್ವರದ ತನಕ ನೀರು ಹರಿಯುವಲ್ಲಿ ತೊಂದರೆಯಾದ ಕಾರಣ ಬೆಳೆಯುತ್ತಿರುವ ಭತ್ತದ ಗದ್ದೆಗಳು ಜಲಾ ವಾಸ ಅನುಭವಿಸುತ್ತಿದ್ದು, ಹೀಗೆ ಮುಂದುವರಿದರೆ ಸಸಿಗಳು ಕೊಳೆತುಹೋಗಲಿವೆ. ವರ್ಷವರ್ಷವೂ ಸ್ವತ್ಛಗೊಳಿಸದ ಕಾರಣ ರೈಲ್ವೆ ಎಡಬಲಮಾರ್ಗದ
ರಾಜಾಕಾಲುವೆಯಲ್ಲಿ ಹೂಳು ತುಂಬಿದೆ, ಗಿಡಮರಗಳು ಬೆಳೆದಿವೆ.

ಕೊಂಕಣ ರೈಲು ಮಾರ್ಗ ಗದ್ದೆಯಿಂದ 10-15 ಅಡಿ ಎತ್ತರ ಇದ್ದ ಕಾರಣ ರೈಲ್ವೆ ಮಾರ್ಗ ಮುಳುಗುವುದಿಲ್ಲವಾದರೂ
ಬಡಹಾಲಕ್ಕಿ ರೈತರ ಮನೆಗಳಿಗೆ ನೀರು ನುಗ್ಗಿದೆ. ಇವರಿಗೆ ಉಳಿಯಲು ಸರಿಯಾದ ಸ್ಥಳವಿಲ್ಲ. ಇವರ ಮನೆ ಮುಳುಗಿದ್ದನ್ನು ನೋಡಲೂ ಯಾರು ಹೋಗುವುದಿಲ್ಲ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ಪ್ರತಿವರ್ಷ ಗದ್ದೆಯಲ್ಲಿ ನೀರು ನಿಂತು ಎರಡುಮೂರು ಬಾರಿ ನಾಟಿ ಮಾಡಿದರೂ ಬೆಳೆಹಾಳಾದ ಕಾರಣ ಕಡಿಮೆಬೆಲೆಯಲ್ಲಿ ರೈತರು ಭೂಮಿಯನ್ನು ಮಾರಿ ಮನೆಯಲ್ಲಿ
ಉಳಿದುಕೊಂಡಿದ್ದರು. ಭೂಮಿ ಕೊಂಡವರು ಇವುಗಳನ್ನು ಸೈಟ್‌ ಗಳಾಗಿ ಪರಿವರ್ತಿಸಿ ದುಬಾರಿ ಬೆಲೆಗೆ ಮಾರಿಕೊಂಡಿದ್ದು ಹಲವು
ಕಟ್ಟಡಗಳು ತಲೆ ಎತ್ತಿವೆ. ಸಾವಿರಾರು ಎಕರೆಗಳು ಇದರ ಅವಲಂಬಿತರು ಅಸಹಾಯ ಸ್ಥಿತಿಯಲ್ಲಿದ್ದಾರೆ. ಇವರ ಕಣ್ಣೀರು ಮಳೆಗಾಲದ ನೀರಿನಲ್ಲಿ ಸೇರಿ ಹೋಗುತ್ತದೆ. ದೇವರಿಗೂ ಕಷ್ಟ, ದೇವರನ್ನು ನಂಬಿದ ಬಡರೈತರಿಗೂ ಕಷ್ಟ. ಕೊಂಕಣ ರೈಲು ಮಾತ್ರ ಓಡುತ್ತಿದೆ. ಅಕ್ಕಪಕ್ಕದವರ ಬದುಕು ಮೂರಾಬಟ್ಟೆಯಾಗಿದೆ.

– ಜೀಯು ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next