ಮುಂಬಯಿ: ಕೊಂಕಣ ರೈಲುಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಮಹಾರಾಷ್ಟ್ರ ದಿನದಂದು (ಮೇ 1) ಮೊದಲ ಹಂತದಲ್ಲಿ ಹತ್ತು ರೈಲುಗಳನ್ನು ವಿದ್ಯುತ್ ಮೂಲಕ ಓಡಿಸಲು ಕೊಂಕಣ ರೈಲ್ವೇ ನಿಗಮ ನಿರ್ಧರಿಸಿದೆ.
ಮಾಂಡವಿ ಎಕ್ಸ್‌ಪ್ರೆಸ್, ಜನಶತಾಬ್ದಿ, ಕೊಂಕಣ ಕನ್ಯಾ, ಮತ್ಸ್ಯಗಂಧ, ನೇತ್ರಾವತಿ, ಮಂಗಳಾ ಎಕ್ಸ್‌ಪ್ರೆಸ್ ಸಹಿತ 10 ರೈಲುಗಳು ಚಲಿಸಲಿವೆ.
ರೋಹಾದಿಂದ ತೋಕೂರು ವರೆಗಿನ 700 ಕಿ.ಮೀ. ಉದ್ದದ ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿಯನ್ನು 2015ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆರು ಹಂತದ ಯೋಜನೆಗೆ ಸುಮಾರು 1,100 ಕೋಟಿ ರೂ. ವೆಚ್ಚವಾಗಿದೆ. ರೋಹಾ-ರತ್ನಗಿರಿ, ರತ್ನಗಿರಿ-ಥಿವಿಮ, ಥಿವಿಮ-ವೆರ್ನಾ, ವೆರ್ನಾ-ಕಾರವಾರ, ಕಾರವಾರ-ಬಿಜೂರು, ಬಿಜೂರು-ತೋಕೂರುವರೆಗೆ ಆರು ಹಂತಗಳ ಕಾಮಗಾರಿ ಪೂರ್ಣಗೊಳಿಸಿದ್ದು, ರೈಲ್ವೇ ಭದ್ರತಾ ಆಯುಕ್ತ ಮನೋಜ್ ಅರೋರಾ ನೇತೃತ್ವದ ತಂಡ ಮಾರ್ಚ್‌ನಲ್ಲಿ ಕಾಮಗಾರಿಯನ್ನು ಪರಿಶೀಲಿಸಿದೆ.
ಲೋಕೋ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚಿನ ವಿದ್ಯುದೀಕರಣವಿಲ್ಲದ ಕಾರಣ, ಡೀಸೆಲ್‌ನಲ್ಲಿ ಮೇಲ್ ಮತ್ತು ಎಕ್ಸ್‌ಪ್ರೆಸ್ ಅನ್ನು ಚಲಾಯಿಸುವುದನ್ನು ಹೊರತುಪಡಿಸಿ ಯಾವುದೇ ಆಯ್ಕೆ ಇರಲಿಲ್ಲ. ಅನಂತರ ರೈಲ್ವೇ ಇಲಾಖೆ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಿದೆ. ಇದರಿಂದ ರೈಲ್ವೇ ಮಾರ್ಗದಲ್ಲಿ ಉಂಟಾಗುತ್ತಿದ್ದ ಸಮಸ್ಯೆ ನಿವಾರಣೆ ಆಗಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ
ಯಾವುದೆಲ್ಲ ರೈಲಿಗೆ ವಿದ್ಯುತ್ ಎಂಜಿನ್: ಮಂಗಳೂರು-ಮಡಗಾಂವ್ ಪ್ಯಾಸೆಂಜರ್, ತಿರುವನಂತಪುರದಿಂದ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್, ಮಡಗಾಂವ್‌ನಿಂದ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್, ಮಂಗಳಾ ಎಕ್ಸ್‌ಪ್ರೆಸ್, ಮಾಂಡವಿ, ಜನಶತಾಬ್ದಿ, ಕೊಂಕಣಕನ್ಯಾ, ಮತ್ಸ್ಯಗಂಧ, ನೇತ್ರಾವತಿ ಎಕ್ಸ್‌ಪ್ರೆಸ್‌ಗಳು ಎಲೆಕ್ಟ್ರಿಕ್ ಎಂಜಿನ್‌ಗಳಲ್ಲಿ ಚಲಿಸಲಿವೆ. ಇದರಿಂದ ಸಮಯದ ಉಳಿತಾಯ ಮತ್ತು ಮಾಲಿನ್ಯ ಕಡಿಮೆಮಾಗಲಿದೆ.