Advertisement

Koni: ಬ್ಯಾಂಕ್‌ನಲ್ಲಿ ಕಳ್ಳತನಕ್ಕೆ ಯತ್ನ- ಹೈದರಾಬಾದ್‌ನಿಂದ ಎಚ್ಚರಿಸಿದ ಸೆಕ್ಯುರಿಟಿ ಸಂಸ್ಥೆ

08:47 PM Oct 16, 2024 | Team Udayavani |

ಕುಂದಾಪುರ: ಕೋಣಿ ಸಮೀಪದ ಬ್ಯಾಂಕ್‌ ಒಂದರಲ್ಲಿ ಮಂಗಳವಾರ ತಡರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದೆ. ಎಟಿಎಂಗೆ ನುಗ್ಗಿ ಯಂತ್ರ ತೆರೆಯಲು ನೋಡಿದಾಗ ಹೈದರಾಬಾದ್‌ನಿಂದ ಸೆಕ್ಯುರಿಟಿ ಸಂಸ್ಥೆಯವರು ಎಚ್ಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಕಳ್ಳರು ಬರಿಗೈಯಲ್ಲಿ ಪರಾರಿಯಾಗಿದ್ದಾರೆ.

Advertisement

ರಾತ್ರಿ 1.30ರ ಸುಮಾರಿಗೆ ಕೋಣಿ ಸಮೀಪದ ಬ್ಯಾಂಕ್‌ನ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಇಬ್ಬರು ವ್ಯಕ್ತಿಗಳು ಬ್ಯಾಂಕಿನ ಒಳಗೆ ಪೂರ್ತಿ ಜಾಲಾಡಿದ್ದಾರೆ. ಲಾಕರ್‌ ತೆರೆಯುವ ಯತ್ನ ಫಲ ನೀಡಲಿಲ್ಲ. ಕೊನೆಗೆ ಅದಕ್ಕೆ ಅಂಟಿಕೊಂಡಂತಿದ್ದ ಎಟಿಎಂಗೆ ಪ್ರವೇಶಿಸಿದ್ದಾರೆ. ಎಟಿಎಂ ಯಂತ್ರವನ್ನು ತೆರೆಯಲು ಯತ್ನಿಸಿದಾಗ ಸೈರನ್‌ ಮೊಳಗಿದೆ.

ಎಟಿಎಂಗಳನ್ನು ನಿರ್ವಹಿಸುವ ಸಂಸ್ಥೆಯ ಭದ್ರತೆ ನಿಗಾ ವಹಿಸುವವರು ಹೈದರಾಬಾದ್‌ನಲ್ಲಿ ಸಿಸಿ ಟಿವಿ ಮಾನಿಟರಿಂಗ್‌ ಮಾಡುತ್ತಿದ್ದು, ಅವರ ಗಮನಕ್ಕೆ ಬಂದು ತತ್‌ಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಎಸ್‌ಐ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಸೈರನ್‌ ಆದ ಕಾರಣ ಕಳ್ಳರು ಪರಾರಿಯಾಗಿದ್ದಾರೆ.

ಸಕಾಲದ ಮಾನಿಟರಿಂಗ್‌
ಡಿವೈಎಸ್‌ಪಿ ಬೆಳ್ಳಿಯಪ್ಪ, ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೆಲವು ಸಮಯದ ಹಿಂದೆ ಮುಳ್ಳಿಕಟ್ಟೆಯಲ್ಲಿ ಸೊಸೈಟಿಯೊಂದಕ್ಕೆ ಕಳ್ಳನೊಬ್ಬ ನುಗ್ಗಿದಾಗ ಸಿಸಿ ಟಿವಿ ಮಾನಿಟರಿಂಗ್‌ ಮಾಡುವ ಸೈನ್‌ ಇನ್‌ ಸಂಸ್ಥೆ ಸಕಾಲದಲ್ಲಿ ಪೊಲೀಸರನ್ನು ಎಚ್ಚರಿಸಿ ಪಕ್ಕದಲ್ಲೇ ಗಸ್ತಿನಲ್ಲಿದ್ದ ಪೊಲೀಸರು ತತ್‌ಕ್ಷಣ ಸ್ಥಳಕ್ಕೆ ತಲುಪಿದ ಕಾರಣ ಕಳ್ಳನನ್ನು ಸೆರೆಹಿಡಿಯಲು ಸಾಧ್ಯವಾಗಿತ್ತು. ಅದಾದ ಬಳಿಕ ತೆಕ್ಕಟ್ಟೆ ಸಮೀಪ ತಂಡವೊಂದು ದರೋಡೆಗೆ ಬಂದಾಗಲೂ ಎಚ್ಚರ ವಹಿಸಿ ಅನಂತರ ತಂಡವನ್ನು ಪೊಲೀಸರು ಬಂಧಿಸಿದ್ದರು. ಇದೇ ರೀತಿ ಕಮಲಶಿಲೆ ದೇವಾಲಯ ಸಹಿತ ವಿವಿಧೆಡೆಯ ಗೋಕಳ್ಳತನ ಪ್ರಕರಣಗಳ ಆರೋಪಿಗಳನ್ನೂ ಬಂಧಿಸಲಾಗಿತ್ತು.

ರೈನ್‌ಕೋಟ್‌ ಧರಿಸಿದ್ದರು
ರೈನ್‌ಕೋಟ್‌ ಧರಿಸಿದ್ದ ಇಬ್ಬರ ಚಹರೆ ಪೂರ್ತಿಯಾಗಿ ಸಿಸಿ ಟಿವಿಯಲ್ಲಿ ಸೆರೆಯಾಗಿಲ್ಲ. ಬೈಕ್‌ನಲ್ಲಿ ಬಂದಿರುವ ಸಾಧ್ಯತೆಯಿದೆ. ಶ್ವಾನದಳ, ಬೆರಳಚ್ಚು ಪರಿಶೀಲನೆ ತಂಡ ಹಾಗೂ ಸೊಕೊ (ಸೀನ್‌ ಆಫ್‌ ಕ್ರೈಂ) ತಂಡ ಉಡುಪಿಯಿಂದ ಬುಧವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next