ನವಲಗುಂದ: ರಾಜ್ಯ ಬಿಜೆಪಿ ನಾಯಕರು ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಮನವೊಲಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಆ ನಿಟ್ಟಿನಲ್ಲಿ ಯಾರೊಬ್ಬರೂ ಕಾರ್ಯಪ್ರವೃತ್ತರಾಗಿಲ್ಲ. ಅವರಿಗೆ ಸಮಸ್ಯೆ ಬಗೆಹರಿಸಲು ಆಸಕ್ತಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಬಳ್ಳೂರ ಗ್ರಾಮದಲ್ಲಿ ಸೋಮವಾರ ಸಂಜೆ ತಮ್ಮ 9ನೇ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಪರಿಹಾರ ಇನ್ನೂ ಹಂಚಿಕೆಯಾಗದೆ ಹಾಗೆಯೇ ಉಳಿದಿದೆ. ಹತ್ತಿ ಹಾಗೂ ಮೆಣಸಿನಕಾಯಿ ಬೆಳೆದ ರೈತರಿಗೆ ಒಂದು ತಿಂಗಳ ಒಳಗೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿತ್ತು.
ಈವರೆಗೂ ರೈತರ ಖಾತೆಗೆ ಪರಿಹಾರದ ಹಣ ಜಮಾ ಆಗಿಲ್ಲ. ಕೂಡಲೇ ಅವರಿಗೆ ಬೆಳೆವಿಮೆ ಪರಿಹಾರ ಒದಗಿಸಲು ಮುಂದಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಳೆ ವಿಮಾ ಕಂಪನಿ ಎದುರು ಅಸಹಾಯಕರಂತೆ ವರ್ತಿಸುತ್ತಿರುವುದನ್ನು ಖಂಡಿಸಿ ಶೀಘ್ರದಲ್ಲಿಯೇ ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ಬಳ್ಳೂರ ಕ್ರಾಸ್ ಬಳಿ ನೂರಾರು ಮಹಿಳೆಯರು ಕೋನರಡ್ಡಿ ಅವರನ್ನು ಆರತಿ ಎತ್ತಿ ಬರ ಮಾಡಿಕೊಂಡರು. ಚಕ್ಕಡಿ ಮೇಲೆ ಮೆರವಣಿಗೆಯಲ್ಲಿ ಶಾಸಕರನ್ನು ಕರೆದೊಯ್ಯಲಾಯಿತು. ಗ್ರಾಮಸ್ಥರ ಅಹವಾಲು ಆಲಿಸಿದ ಶಾಸಕರು ಗ್ರಾಮಸ್ಥರೊಂದಿಗೆ ಒಂದು ಗಂಟೆಗೂ ಅ ಧಿಕ ಕಾಲ ಸಂವಾದ ನಡೆಸಿದರು. ಬಳ್ಳೂರ ಅಭಿವೃದ್ಧಿಗೆ ನೀಡಿದ ಅನುದಾನದ ವಿವರ ತೆರೆದಿಟ್ಟರು.
ಹುಬ್ಬಳ್ಳಿ ಬಸವೇಶ್ವರ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬಳ್ಳೂರ ಗ್ರಾಮದ ಗಂಗನಗೌಡ ಪಾಟೀಲ ಬಳ್ಳೂರ ಅವರನ್ನು ಕೋನರಡ್ಡಿ ಸನ್ಮಾನಿಸಿದರು. ಶಿವಯ್ಯ ಹಿರೇಮಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಳಿಕ ಗ್ರಾಮದ ರೈತ ನಾರಾಯಣ ದೌಲತಪ್ಪ ಮಾನೆ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದರು.
ತಾಪಂ ಸದಸ್ಯೆ ಮಲ್ಲಮ್ಮ ಉಗರಗೋಳ, ಹನುಮಂತಗೌಡ ಪಾಟೀಲ, ಜೆಡಿಎಸ್ ಅಧ್ಯಕ್ಷ ವೀರಣ್ಣ ನೀರಲಗಿ, ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಗದಿಗೆಪ್ಪ ಅಕ್ಕಿ, ರಾಮಣ್ಣ ಖರಕಪ್ಪನವರ, ಎಂ.ವಿ. ಪಾಟೀಲ, ಶಿವಪ್ಪ ಮಾಸ್ತರ, ಕಲ್ಲಪ್ಪ ಗಡಾದ, ತೋಪಣ್ಣ ಅಕ್ಕಿ, ಈರಣ್ಣ ರಾಯಗೊಣ್ಣವರ, ನಿಂಗಯ್ಯ ಪೂಜಾರ, ಮಲ್ಲಿಕಾರ್ಜುನ ಅವರಾದಿ, ಹನಮಂತಗೌಡ ಎಸ್. ಪಾಟೀಲ, ಎಂ.ಎಸ್. ರೋಣದ, ಸಿದ್ಧಲಿಂಗಪ್ಪ ಮದೂರ,
ಎಸ್.ವಿ. ಬಳಿಗೇರ, ಚನ್ನಬಸಯ್ಯ ಹಿರೇಮಠ, ಚನ್ನಪ್ಪ ಗಾಣಗೇರ, ಮಾರುತಿ ಮೂಶಣ್ಣವರ, ಮುಕುಬ ಬೀಬಣ್ಣವರ, ಮಲ್ಲಿಕಾಜಿಗೌಡ ಕಾಲವಾಡ, ಈರಯ್ಯ ಮಠಪತಿ, ಕಾಳಪ್ಪ ಬಡಿಗೇರ, ಹನುಮಂತ ಮಡಿವಾಳವರ, ಸಿದ್ದಪ್ಪ ಖಂಡೆಪ್ಪನವರ, ಮಲ್ಲಿಕಾರ್ಜುನ ರೇಣಕಿಗೌಡರ, ಫಕ್ರುಸಾಬ ಬೀಬಣ್ಣವರ, ಬಸಪ್ಪಾ ಹೂಗಾರ, ತಹಶೀಲ್ದಾರ್ ನವೀನ ಹುಲ್ಲೂರು, ತಾಪಂ ಇಒ ಜಿ.ಡಿ. ಜೋಶಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಎಂ.ಎಲ್. ಪಾಟೀಲ ಇತರರಿದ್ದರು.