Advertisement

ಕೋಮಲ್‌ ಭಾವುಕ ಮಾತು

11:51 AM Jun 21, 2019 | Lakshmi GovindaRaj |

“ನನಗೆ ಸುಮಾರು 17 – 18 ವರ್ಷ ಇರುವಾಗ್ಲೇ ನಾನು ಚಿತ್ರರಂಗಕ್ಕೆ ಬಂದೆ. ಆರಂಭದಲ್ಲಿ ಒಂದಷ್ಟು ಸೀರಿಯಸ್‌ ಕ್ಯಾರೆಕ್ಟರ್ ಸಿಕ್ಕಿದವು. ಆಮೇಲೆ ಸುಮಾರು ನಾಲ್ಕೈದು ಸಿನಿಮಾಗಳಲ್ಲಿ ವಿಲನ್‌ ಆಗಿ ಆ್ಯಕ್ಟಿಂಗ್‌ ಮಾಡಿದೆ. ಆಮೇಲೆ ಏನಾಯ್ತೋ… ಏನೋ, ಅವಕಾಶಗಳೆ ಇಲ್ಲದಂತಾಯ್ತು. ಅದಾದ ಸುಮಾರು 3-4 ವರ್ಷಗಳ ನಂತರ ‘ಕುರಿಗಳು ಸಾರ್‌ ಕುರಿಗಳು’ ಸಿನಿಮಾ ಶುರುವಾಯ್ತು. ಆಗ ಅದ್ರಲ್ಲಿ ನನಗೊಂದು ಕಾಮಿಡಿ ಪಾತ್ರ ಸಿಕ್ತು.

Advertisement

ಆ ಸಿನಿಮಾಕ್ಕೂ ಮುಂಚೆ ನನ್ಗೆ ಕಾಮಿಡಿ ಬಗ್ಗೆ ಏನೂ ಗೊತ್ತಿರಲಿಲ್ಲ. ಫ‌ಸ್ಟ್‌ ಡೇ ಶೂಟಿಂಗ್‌ನಲ್ಲಿ ಸಣ್ಣ ದೃಶ್ಯಕ್ಕೆ ಐದಾರು ಟೇಕ್‌ ತೆಗೆದುಕೊಂಡೆ. ಸೆಟ್‌ನಲ್ಲಿದ್ದ ಎಲ್ಲ ನಟರು, ನಟಿಯರು ಅದನ್ನ ನೋಡ್ತಿದ್ದರು. ಡೈರೆಕ್ಟರ್‌ ರಾಜೇಂದ್ರ ಸಿಂಗ್‌ ಬಾಬು ತುಂಬ ಕೋಪ ಮಾಡಿಕೊಂಡು, ಇವನಿಗೆ ಆ್ಯಕ್ಟಿಂಗ್‌ ಬರಲ್ಲ ಓಡಿಸಿ ಎಂದಿದ್ದರು. ಆ ಕ್ಷಣ ಸಿಕ್ಕಾಪಟ್ಟೆ ಬೇಸರ ಆಯ್ತು’ ಹೀಗೆ ತನ್ನ ಸಿನಿಮಾ ಎಂಟ್ರಿಯ ಆರಂಭದ ದಿನಗಳ ಫ್ಲ್ಯಾಶ್‌ ಬ್ಯಾಕ್‌ ಹೇಳುತ್ತಾ ಮಾತಿಗಿಳಿದವರು ನಟ ಕೋಮಲ್‌.

ಸದ್ಯ ಕೋಮಲ್‌ ಸಿನಿಮಾರಂಗಕ್ಕೆ ಎಂಟ್ರಿಯಾಗಿ ಸುಮಾರು ಎರಡೂವರೆ ದಶಕಗಳೇ ಆಗಿದೆ. ಖಳನಟನಾಗಿ, ಪೋಷಕ ನಟನಾಗಿ, ಹಾಸ್ಯ ನಟನಾಗಿ ಹತ್ತು ಹಲವು ರೋಲ್‌ಗ‌ಳನ್ನು ಮಾಡಿರುವ ಕೋಮಲ್‌ ಈಗ “ಕೆಂಪೇಗೌಡ-2′ ಚಿತ್ರದ ಮೂಲಕ ಆ್ಯಕ್ಷನ್‌ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗಿದ್ದಾರೆ. ಸದ್ಯ ಕೆಂಪೇಗೌಡ-2 ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಚಿತ್ರತಂಡ ಭರ್ಜರಿಯಾಗಿ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿದೆ.

ಇತ್ತೀಚೆಗೆ ಕೆಂಪೇಗೌಡ-2 ಚಿತ್ರದ ಬಗ್ಗೆ ಮಾತನಾಡಲು ಮಾಧ್ಯಮಗಳ ಮುಂದೆ ಬಂದಿದ್ದ ಕೋಮಲ್‌, ಸೀರಿಯಸ್‌ ಪಾತ್ರಗಳಿಂದ ಆ್ಯಕ್ಷನ್‌ ಪಾತ್ರಗಳವರೆಗೆ ತಮ್ಮ ಜರ್ನಿ ಹೇಗಿತ್ತು ಎನ್ನುವುದನ್ನು ವಿವರವಾಗಿ ಬಿಚ್ಚಿಟ್ಟರು. ಇನ್ನು “ಕುರಿಗಳು ಸಾರ್‌ ಕುರಿಗಳು’ ಸಿನಿಮಾದಲ್ಲಿ ಕೋಮಲ್‌ ಅವರ ಜೊತೆ ದೊಡ್ಡಣ್ಣ ಕೂಡ ಅಭಿನಯಿಸುತ್ತಿದ್ದರಂತೆ. ಈ ವಿಷಯ ತಿಳಿದ ದೊಡ್ಡಣ್ಣ, ಕೋಮಲ್‌ ಅವರನ್ನು ಕರೆದು ಕಪಾಳಕ್ಕೆ ಹೊಡೆದಿದ್ದರಂತೆ.

ಈ ಬಗ್ಗೆ ಮಾತನಾಡಿರುವ ಕೋಮಲ್‌, “ಜಗ್ಗೇಶಣ್ಣನ ಜೊತೆಗೆ ದೊಡ್ಡಣ್ಣ ಸಿನಿಮಾ ಮಾಡಿದ್ದರಿಂದ ನನಗೂ ಪರಿಚಯವಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ನನ್ನನ್ನು ಕರೆದು ಕಪಾಳಕ್ಕೆ ಹೊಡೆದು ಬುದ್ಧಿ ಹೇಳಿದರು. ನಿಮ್ಮ ಅಣ್ಣ ಅಂತಹ ದೊಡ್ಡ ಕಲಾವಿದ. ನೀನು ಕಾಮಿಡಿ ಮಾಡಲು ಬರದೆ ಇದ್ದ ಮೇಲೆ ಯಾಕೆ ಬಂದೆ ಎಂದರು. ದೊಡ್ಡಣ್ಣ ಹೇಳಿದ ಮೇಲೆ ಮನಸ್ಸು ಬಿಚ್ಚಿ ಆ್ಯಕ್ಟ್ ಮಾಡಿದೆ. ಆ ಸಿನಿಮಾ ಬಿಡುಗಡೆ ಆದ ಮೇಲೆ ನಾನು ಒಂದೇ ದಿನಕ್ಕೆ ಸ್ಟಾರ್‌ ಆದೆ.

Advertisement

ಅದಾದ ಮೇಲೆ ಕಾಮಿಡಿಯ ಮೂಲಕವೇ ಒಂದು ದಿನಕ್ಕೆ 3 ಲಕ್ಷ ಸಂಭಾವನೆ ಪಡೆಯುವ ಮಟ್ಟಿಗೆ ಬೆಳೆದೆ. ಆಗಿನ ಕಾಲಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದ ಮೊದಲ ಕಾಮಿಡಿ ನಟ ಆಗಿ¨ªೆ. ಅದಾದ ನಂತರ ಸ್ವಲ್ಪ ಅವಕಾಶಗಳು ಕಡಿಮೆ ಆದಾಗ, “ಗರಗಸ’ ಅನ್ನೋ ಸಿನಿಮಾದಲ್ಲಿ ಹೀರೋ ಆಗಿ ಆ್ಯಕ್ಟ್ ಮಾಡಿದೆ. ಆ ಸಿನಿಮಾ ಕೂಡ ಚೆನ್ನಾಗೇ ಹೋಯ್ತು. ಆದ್ರೆ ಅದಾದ ನಂತರ ಬಂದ ಸಿನಿಮಾಗಳು ಚೆನ್ನಾಗಿ ಹೋಗಲಿಲ್ಲ.

ಯಾವಾಗ ಸಿನಿಮಾಗಳು ಸೋತವೊ, ಆಗ ಅನೇಕರು ನನ್ನನ್ನು ಕೀಳಾಗಿ ನೋಡೋಕೆ ಶುರು ಮಾಡಿದ್ರು’ ಎಂದು ತಮ್ಮ ನೋವನ್ನ ಎಳೆಎಳೆಯಾಗಿ ಬಿಚ್ಚಿಟ್ಟರು ಕೋಮಲ್‌. ಇದರ ನಡುವೆಯೇ ಕೋಮಲ್‌ ಅವರನ್ನು ಹಾಕಿಕೊಂಡು ಒಂದು ತಮಿಳು ಸಿನಿಮಾ ಶುರುಮಾಡುವ ಯೋಜನೆಯಾಗಿತ್ತಂತೆ. ಅದ್ರೆ ಕೋಮಲ್‌ ಆ ಪಾತ್ರಕ್ಕೆ ಫಿಟ್‌ ಇಲ್ಲ ಎಂಬ ಕಾರಣಕ್ಕೆ ನಂತರ ಆ ಸಿನಿಮಾದಲ್ಲಿ ಕೋಮಲ್‌ ಅವರನ್ನ ರಿಜೆಕ್ಟ್ ಮಾಡಲಾಯಿತಂತೆ.

ಈ ಬಗ್ಗೆ ಮಾತನಾಡುವ ಕೋಮಲ್‌, “ಆ ತಮಿಳು ಸಿನಿಮಾ ರಿಜೆಕ್ಟ್ ಆದ ನಂತರ ನಾನು ತೂಕ ಕಡಿಮೆ ಮಾಡಬೇಕು ಎಂದು ನಿರ್ಧಾರ ಮಾಡಿದೆ. ಎರಡು ವರ್ಷ ತಯಾರಿ ಮಾಡಿಕೊಂಡೆ. ಒಮ್ಮೆ ಶಂಕರೇಗೌಡ ಅವರ ಬರ್ತ್‌ಡೇ ಪಾರ್ಟಿಗೆ ಹೋದಾಗ ಎಲ್ಲರೂ ನನ್ನನ್ನು ನೋಡಿ ಶಾಕ್‌ ಆದರು. ಅವತ್ತೇ ಇಬ್ಬರೂ ಸೇರಿ “ಕೆಂಪೇಗೌಡ-2′ ಸಿನಿಮಾ ಮಾಡುವ ನಿರ್ಧಾರ ಮಾಡಿದ್ವಿ. ಆ ನಂತರ “ಕೆಂಪೇಗೌಡ-2′ ಚಿತ್ರದ ಫ‌ಸ್ಟ್‌ ಟೀಸರ್‌ ರಿಲೀಸ್‌ ಮಾಡಿದ್ದೆವು.

ಅದು ಸುಮಾರು 2 ಮಿಲಿಯನ್‌ ವೀವ್ಸ್‌ ಆಯ್ತು. ಆದ್ರೆ, 80% ರಷ್ಟು ಜನ ಕಾಮಿಡಿ ಪೀಸ್‌ಗೆ ಇದೆಲ್ಲಾ ಬೇಕಾ ಅಂಥ ಆಡಿಕೊಂಡಿದ್ದರು. ಆದ್ರೆ ಅದನ್ನ ನಾನು ಸೀರಿಯಸ್‌ ಆಗಿ ತೆಗೆದುಕೊಂಡಿದ್ದೇನೆ. ಒಬ್ಬ ಕಲಾವಿದನಾದವನಿಗೆ ಯಾವ ಪಾತ್ರವಾದ್ರೆ ಏನು ಅವನು ಎಲ್ಲದಕ್ಕೂ ಹೊಂದಿಕೊಳ್ಳಬೇಕು. ತನ್ನ ಸಾಮರ್ಥ್ಯವನ್ನು ತೋರಿಸಬೇಕು. ಅದಕ್ಕಾಗಿ ‘ಕೆಂಪೇಗೌಡ-2′ ಚಿತ್ರವನ್ನು ಚಾಲೆಂಜ್‌ ಆಗಿ ತೆಗೆದುಕೊಂಡು ಮಾಡಿದ್ದೇನೆ’ ಎಂದಿದ್ದಾರೆ.

ಅಂದಹಾಗೆ, ಕೋಮಲ್‌ ಅವರ ಈ ಮಾತಿಗೆ ವೇದಿಕೆಯಾಗಿದ್ದು, “ಕೆಂಪೇಗೌಡ-2′ ಚಿತ್ರದ ಪತ್ರಿಕಾಗೋಷ್ಠಿ. ಪತ್ರಿಕಾಗೋಷ್ಠಿಗೆ ನಟ ಜಗ್ಗೇಶ್‌, ಪೊಲೀಸ್‌ ಅಧಿಕಾರಿ ಟಿ.ಸುನೀಲ್‌ ಕುಮಾರ್‌, ನಿರ್ದೇಶಕ ಶಂಕರೇಗೌಡ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next