Advertisement

Kolluru: ವಂಡ್ಸೆ-ಹಾಲ್ಕಲ್‌ ರಸ್ತೆ ಹೊಂಡಕ್ಕೆ ಮುಕ್ತಿ ಎಂದು?

05:43 PM Oct 22, 2024 | Team Udayavani |

ಕೊಲ್ಲೂರು: ಕೊಲ್ಲೂರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ವಂಡ್ಸೆಯಿಂದ ಹಾಲ್ಕಲ್‌ವರೆಗೆ ಹೊಂಡಗುಂಡಿಗಳೇ ತುಂಬಿದೆ. ಈ ಹೊಂಡಮಯ ರಸ್ತೆಯ ದುರಸ್ತಿಗೆ ಇನ್ನೂ ಆರಂಭ ಮಾಡದಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ 20 ದಿನಗಳ ಒಳಗೆ ಕನಿಷ್ಠ ತೇಪೆ ಕಾರ್ಯ ನಡೆಸದೆ ಇದ್ದಲ್ಲಿ ರಸ್ತೆ ತಡೆ ನಡೆಸಲು ಗ್ರಾಮಸ್ಥರು ಮುಂದಾಗಿದ್ದಾರೆ.

Advertisement

ಸಂಪೂರ್ಣ ಡಾಮರೀಕರಣಕ್ಕೆ ಅನುದಾನದ ಕೊರತೆ ಎದುರಿಸುತ್ತಿರುವ ಇಲಾಖೆ ಕನಿಷ್ಠ ಹೊಂಡ ಮುಚ್ಚುವ ಕಾರ್ಯಕ್ಕೂ ವಿಳಂಬ ನೀತಿ ಅನುಸರಿಸುತ್ತಿರುವುದು ವಾಹನ ಚಾಲಕರಿಗೆ ತೊಂದರೆ ಉಂಟುಮಾಡಿದೆ. ದ್ವಿಚಕ್ರ ವಾಹನ ಚಾಲಕರ ಸ್ಥಿತಿಯಂತೂ ಹೇಳತೀರದು.

ಕೊಲ್ಲೂರು ಕ್ಷೇತ್ರದ ನವರಾತ್ರಿ ಉತ್ಸವಕ್ಕೆ ಸಾವಿರಾರು ಭಕ್ತರು ಬರುವುದರಿಂದ ಅದಕ್ಕೆ ಮುನ್ನ ರಿಪೇರಿ ನಡೆಯಬಹುದು ಎಂಬ ಸಾರ್ವಜನಿಕರ ನಿರೀಕ್ಷೆ ಹುಸಿಯಾಗಿದೆ. ಈಗ ದೀಪಾವಳಿ ಹೊತ್ತಿಗಾದರೂ ನಡೆಯಬಹುದೇ ಎಂಬ ಕಾಯುವಿಕೆ ಶುರುವಾಗಿದೆ.

ಸರಕಾರಕ್ಕೆ ಮನವಿ
ವಂಡ್ಸೆಯಿಂದ ಹಾಲ್ಕಲ್‌ ತನಕ ಮುಖ್ಯ ರಸ್ತೆಯ ಡಾಮರು ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ರಸ್ತೆಯ ದುಸ್ಥಿತಿಗೆ ಕಾರಣವಾಗಿದೆ.
– ಗುರುರಾಜ ಗಂಟಿಹೊಳೆ, ಶಾಸಕರು

ಯಾರಿಗೂ ಇದರ ಗೊಡವೆ ಇಲ್ಲ!
ಕರ್ನಾಟಕ, ಕೇರಳ, ತಮಿಳುನಾಡು ಅಲ್ಲದೇ ಆಂಧ್ರಪ್ರದೇಶದಿಂದ ಕೊಲ್ಲೂರು ಕ್ಷೇತ್ರಕ್ಕೆ ಸಾವಿರಾರು ಭಕ್ತರು ನಿತ್ಯ ನಿರಂತರ ಆಗಮಿಸುತ್ತಾರೆ. ಹದಗೆಟ್ಟ ಮುಖ್ಯ ರಸ್ತೆಯ ದುಸ್ಥಿತಿಯಿಂದಾಗಿ ಭಯದ ವಾತಾವರಣದಲ್ಲೇ ಸಂಚರಿಸಬೇಕಾಗಿದೆ.

Advertisement

ಇಡೂರು, ಜಡ್ಕಲ್‌ ಮುಂತಾದೆಡೆ ಭಾರೀ ಹೊಂಡಗಳಿಂದ ಕೂಡಿದ್ದು, ಅಮಿತ ವೇಗದಲ್ಲಿ ಸಾಗಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಕೊಲ್ಲೂರು ಕ್ಷೇತ್ರಕ್ಕೆ ಕೇಂದ್ರ ರಾಜ್ಯ ಸಚಿವರು ಸಹಿತ ಅನೇಕ ರಾಜಕೀಯ ಮುಂದಾಳುಗಳು ಈ ಮಾರ್ಗವಾಗಿ ಆಗಮಿಸುತ್ತಾರೆ. ಆದರೆ ರಸ್ತೆಯ ದುಸ್ಥಿತಿಯ ಬಗ್ಗೆ ಯಾರೊಬ್ಬರು ಸರಕಾರದ ಗಮನ ಸೆಳೆದು ಕ್ರಮ ಕೈಗೊಳ್ಳುವ ಬಗ್ಗೆ ಒತ್ತಾಯಿಸುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next