Advertisement

ಕೊಲ್ಲೂರು: ಅಭಿವೃದ್ಧಿಗಾಗಿ ಕಾಯುತ್ತಿರುವ ವಾಟೆಗುಂಡಿ ನಿವಾಸಿಗಳು

06:27 PM Jan 06, 2023 | Team Udayavani |

ಕೊಲ್ಲೂರು: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಮುದೂರು ಸನಿಹದ ಹಿಂದುಗಾಣ ಮಾರ್ಗವಾಗಿ ಸಾಗುವ ಶೇಡಿಗುಂಡಿ-ವಾಟೆಗುಂಡಿ ನಿವಾಸಿಗರು ಮೂಲ ಸೌಕರ್ಯ ಕೊರತೆಯಿಂದ ಅಭಿವೃದ್ಧಿಗೆ ಹಾತೊರೆಯುತ್ತಿದ್ದಾರೆ. ಶೇಡಿಗುಂಡಿ- ವಾಟೆಗುಂಡಿ ಬೆಳ್ಕಲ್‌ ಗೋವಿಂದತೀರ್ಥಕ್ಕೆ ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗವಾಗಿ ವಾಹನಗಳಲ್ಲಿ ಹರಸಾಹಸ ಪಟ್ಟು ಸಾಗಬೇಕಾದ ಪರಿಸ್ಥಿತಿ ಇದೆ. ಸಳ್ಕೊಡಿನಲ್ಲಿ ಹಿಂದೂ ರುದ್ರಭೂಮಿ ಇಲ್ಲದಿರುವುದು ಜಡ್ಕಲ್‌ ಗ್ರಾ.ಪಂ. ಆಡಳಿತ
ವ್ಯವಸ್ಥೆಯ ಲೋಪ ಎತ್ತಿತೋರಿಸುತ್ತಿದೆ.

Advertisement

ಪ. ಜಾತಿ, ಪಂಗಡದವರ ವಾಸ್ತವ್ಯ
ಪ.ಜಾತಿ ಹಾಗೂ ಪಂಗಡಕ್ಕೆ ಸೇರಿದ 60 ಮನೆಗಳು ಇಲ್ಲಿದ್ದು, ಸುಮಾರು 350ಕ್ಕೂ ಮಿಕ್ಕಿ ಮಂದಿ ಇಲ್ಲಿ ವಾಸ್ತವ್ಯ ಹೂಡಿದ್ದಾರೆ. ದೈನಂದಿನ ಕಾರ್ಯಕ್ಕೆ ಮುದೂರಿಗೆ ಸಾಗಲು ಹೊಂಡಮಯ ರಸ್ತೆಯಲ್ಲಿ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಾಗುವುದು ಪ್ರಯಾಸಕರವಾಗಿದೆ.

ಜನಪ್ರತಿನಿಧಿಗಳಿಗೆ ಮನವಿ
2 ಕಿ.ಮೀ. ದೂರ ವ್ಯಾಪ್ತಿಯ ಇಲ್ಲಿನ ರಸ್ತೆ ಡಾಮರಿಗೆ ಮೂಲ ಸೌಕರ್ಯಕ್ಕಾಗಿ ಜನಪ್ರತಿನಿಧಿ ಗಳಿಗೆ ಮನವಿ ಸಲ್ಲಿಸಲಾಗಿ ದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಭಿಸದ ಹಕ್ಕುಪತ್ರ
ವಾಟೆಗುಂಡಿಯಲ್ಲಿ ವಾಸವಾಗಿರುವ 10 ಮನೆಯವರ ಹಕ್ಕುಪತ್ರ ಬೇಡಿಕೆ ಈವರೆಗೆ ಈಡೇರಲಿಲ್ಲ. ಕಳೆದ 40 ವರ್ಷ ಗಳಿಂದ ಅವರಿಗೆ ಹಕ್ಕುಪತ್ರ ಲಭಿಸಿಲ್ಲ. ಡೀಮ್ಡ್ ಫಾರೆಸ್ಟ್‌ನ ಕಾನೂನಿನ ತೊಡಕಿನಿಂದಾಗಿ ಬವಣಿಸುತ್ತಿರುವ ಇಲ್ಲಿನ ನಿವಾಸಿ ಗಳು ಸರಕಾರದ ಸೂಕ್ತ ಸವಲತ್ತಿನಿಂದ ವಂಚಿತರಾಗಿದ್ದಾರೆ. ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ, ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ. ಅದರೂ ಜಿಲ್ಲಾಡಳಿತ ಸ್ಪಂದಿಸದಿರುವುದು ಇಲ್ಲಿನ ನಿವಾಸಿಗಳಿಗೆ ನುಂಗಲಾರದ ತುತ್ತಾಗಿದೆ.

ಸಾರ್ವಜನಿಕ ರುದ್ರಭೂಮಿಯ ಕೊರತೆ
ಜಡ್ಕಲ್‌ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಎದುರಾದ ಸಾರ್ವಜನಿಕ ಹಿಂದೂ ರುದ್ರಭೂಮಿ ಕೊರತೆ ಚರ್ಚೆಗೆ ಗ್ರಾಸವಾಗಿದ್ದು, ಇಂದಿಗೂ ಪರಿಹಾರ ಸಿಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ವೇ ನಂಬರ್‌ 108ರ ಗಡಿಗುರುತು ಸಳ್ಕೊಡಿನಲ್ಲಿ ಜ್ವಲಂತ ಸಮಸ್ಯೆಯಾಗಿ ಕಂಡುಬಂದಿದ್ದು, ಕಂದಾಯ ಇಲಾಖೆ ಹೆಜ್ಜೆ-ಹೆಜ್ಜೆಗೂ ಎಡವುತ್ತಿರುವುದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ.

Advertisement

108 ಸರ್ವೇ ಸಂಖ್ಯೆಯಲ್ಲಿ 1 ಎಕರೆ ಜಾಗವನ್ನು ಹಿಂದೂ ರುದ್ರಭೂಮಿಗಾಗಿ ಕಾದಿರಿಸಲಾಗಿತ್ತು. ಆದರೆ ಅಲ್ಲಿ ಬಹುತೇಕ ಜಾಗ ಒತ್ತುವರಿಯಾಗಿದೆ. ಐ ಸ್ಕೆಚ್‌ ಮೂಲಕ ಜಾಗ ನಿಗದಿಪಡಿಸಲು ಹೊರಟ ಇಲಾಖೆ ಕ್ರಮವನ್ನು ಗ್ರಾಮಸ್ಥರು ಪ್ರಶ್ನಿಸುವ ಮೂಲಕ ಮತ್ತೆ ಗೊಂದಲ ಎದುರಾಯಿತು. ಸಾರ್ವಜನಿಕ ಶ್ಮಶಾನವಿಲ್ಲದೇ ಅಲ್ಲಿನ ನಿವಾಸಿಯೋರ್ವರು ಮನೆಯ ಅಂಗಳದಲ್ಲಿ ಹೆಣವಿಟ್ಟು ದಹನ ಮಾಡುವ ಪ್ರಕ್ರಿಯೆ ನಡೆದಿರುವುದು ರಾಜ್ಯ ವ್ಯಾಪ್ತಿಯಾಗಿ ಪ್ರಚಾರ ಪಡೆದಿತ್ತು. ಮನೆಯಂಗಳದಲ್ಲಿ ಹೆಣ ಕಾಷ್ಟ ಮಾಡಿರುವ ಬಗ್ಗೆ ಟೀಕೆ ಟಿಪ್ಪಣಿಗಳಿಗೆ ಗುರಿಯಾಗಿತ್ತು. ಜಾಗದ ಗುರುತಿಸುವಿಕೆಯ ಗೊಂದಲದ ನಡುವೆ
ಜಡ್ಕಲ್‌ ಗ್ರಾ.ಪಂ.ವ್ಯಾಪ್ತಿಯ ಮುದೂರು ಹಾಗೂ ಸಳ್ಕೊಡಿನಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಇಲ್ಲದಿರುವುದು ಆಡಳಿತ ವ್ಯವಸ್ಥೆಯಲ್ಲಿನ ಲೋಪವನ್ನು ಎತ್ತಿಹಿಡಿದಿದೆ.

ಬೇಡಿಕೆ ಈಡೇರಿಲ್ಲ
ರೇಶನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ವಿದ್ಯುತ್‌ ಸಂಪರ್ಕ ದಾಖಲಾತಿ ಇದ್ದರೂ ವಾಟೆಗುಂಡಿ ನಿವಾಸಿಗಳ ಹಕ್ಕುಪತ್ರ ಬೇಡಿಕೆ ಈವರೆಗೆ ಈಡೇರಲಿಲ್ಲ. ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕಿದೆ.
-ವಾಸುದೇವ ಮುದೂರು,
ಸಂಘಟನ ಸಂಚಾಲಕ, ಜಿಲ್ಲಾ ದಲಿತ
ಸಂಘರ್ಷ ಸಮಿತಿ

ಶೀಘ್ರ ಸಮಸ್ಯೆ ಪರಿಹರಿಸಿ
ಹಿಂದೂ ರುದ್ರಭೂಮಿಗೆಂದು ಸ್ಥಳ ನಿಗದಿ ಆಗಿದ್ದರೂ ಕಂದಾಯ ಇಲಾಖೆಯ ನಿರ್ಲಕ್ಷ್ಯತನದಿಂದ ಈವರೆಗೆ ಸೂಕ್ತ ಜಾಗ ಗುರುತಿಸಲಾಗಿಲ್ಲ. ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕಾಗಿದೆ.
-ವನಜಾಕ್ಷಿ ಶೆಟ್ಟಿ,,
ಅಧ್ಯಕ್ಷರು, ಗ್ರಾ.ಪಂ. ಜಡ್ಕಲ್‌

*ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next