Advertisement

ನವರಾತ್ರಿ ಉತ್ಸವಕ್ಕೆ ಕೇತ್ರ ಸಜ್ಜು; ರಸ್ತೆಗಳೂ ದುರಸ್ತಿಯಾಗಲಿ

10:53 AM Sep 25, 2022 | Team Udayavani |

ಕೊಲ್ಲೂರು: ರಾಷ್ಟ್ರೀಯ ಹೆದ್ದಾರಿಯ ಸುಪರ್ದಿಯಲ್ಲಿರುವ ಕೊಲ್ಲೂರು ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟು 2 ತಿಂಗಳು ಕಳೆದರೂ ರಸ್ತೆ ದುರಸ್ತಿ ಕಾರ್ಯ ಇನ್ನೂ ನಡೆಯದಿರುವುದು ನವರಾತ್ರಿ ಉತ್ಸವಕ್ಕೆ ಕ್ಷೇತ್ರಕ್ಕೆ ಆಗಮಿಸಲಿರುವ ಭಕ್ತರಿಗೆ ಸುಗಮ ವಾಹನ ಸಂಚಾರಕ್ಕೆ ತೊಡಕಾಗಲಿದೆ.

Advertisement

ಹೊಂಡಮಯವಾದ ಕೊಲ್ಲೂರು ಮುಖ್ಯ ರಸ್ತೆ:- ಮಾಸ್ತಿಕಟ್ಟೆಯಿಂದ ಕೊಲ್ಲೂರಿನ ಗಡಿಭಾಗದ ದಳಿವರೆಗಿನ ರಸ್ತೆಯು ಬಹುತೇಕ ಕಡೆ ಹೊಂಡಗಳಿಂದ ಕೂಡಿದ್ದು, ತೇಪೆ ಕಾರ್ಯ ನಡೆದಿದ್ದರೂ ಅದೂ ಕೂಡ ಕಿತ್ತು ಹೋಗಿದ್ದು, ರಸ್ತೆ ಸ್ಥಿತಿ ಅಧೋಗತಿಯಾಗಿದೆ. ನಿತ್ಯ ಪ್ರಯಾಣಿಕರು ಹರಸಾಹಸ ಪಟ್ಟು ಸಾಗಬೇಕಾಗಿದೆ.

ಯಾತ್ರಾರ್ಥಿಗಳಿಗೆ ಸಮಸ್ಯೆ

ಸೆ.26 ರಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದ್ದು, ಈಗಾಗಲೇ ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ದೇಗುಲದ ಪರಿಸರದ ವಸತಿಗೃಹಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ರಸ್ತೆಯ ದುಃಸ್ಥಿತಿಯಿಂದಾಗಿ ಪಾದಚಾರಿಗಳು ಸಹಿತ ದ್ವಿಚಕ್ರ ವಾಹನ ಸಂಚಾರಕ್ಕೂ ಕಷ್ಟಕರವಾಗಿ ಪರಿಣಮಿಸಿದೆ.

ಕೊಲ್ಲೂರು ಗ್ರಾ.ಪಂ., ಲೋಕೋಪಯೋಗಿ ಇಲಾಖೆ ಅಧಿಧೀನದಿಂದ ಬೇರ್ಪಟ್ಟಿರುವ ಕೊಲ್ಲೂರು ಪೇಟೆ ಮುಖ್ಯ ರಸ್ತೆಯ ನಿರ್ವಹಣೆಯ ಜವಾಬ್ದಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರಿದೆ.

Advertisement

ಈ ಬಗ್ಗೆ ಸಂಸದರು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು. ಸಂಸದರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕೂಡ ತಾತ್ಕಾಲಿಕ ನೆಲೆಯಲ್ಲಿ ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾಗದ ಇಲಾಖೆಯ ವರ್ತನೆಯಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಲಾಗುತ್ತಿರುವ ಯುಜಿಡಿ ನೀರು

ಯುಜಿಡಿಯಿಂದ ಕಾರ್ಯಾರಂಭಗೊಂಡ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಕೆಲವೆಡೆ ಚೇಂಬರ್‌ ನಿಂದ ನೀರು ಹೊರಹರಿಯುತ್ತಿದ್ದು, ಆ ಭಾಗದಲ್ಲಿ ನಿಂತ ನೀರಿನಿಂದಾಗಿ ಸಾಂಕ್ರಾಮಿಕ ರೋಗ ಭೀತಿ ಎದುರಾಗುತ್ತಿದೆ. ಗ್ರಾ.ಪಂ. ಹಾಗೂ ಕೊಲ್ಲೂರು ದೇಗುಲ ಇಲಾಖೆಯ ಗಮನಕ್ಕೆ ತಂದಿದ್ದರೂ ಈವರೆಗೆ ಎದುರಾದ ಸಮಸ್ಯೆ ನಿವಾರಣೆಯಾಗಿಲ್ಲವೆನ್ನುವುದು ಗ್ರಾಮಸ್ಥರ ಅಭಿಮತ.

ತುರ್ತು ಕ್ರಮ ಅಗತ್ಯ: ಚಿತ್ತೂರಿನಿಂದ ಕೊಲ್ಲೂರುವರೆಗಿನ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ.ಕೊಲ್ಲೂರು ಪೇಟೆಯ ರಸ್ತೆಯ ಸ್ಥಿತಿಗತಿ ಹೇಳತೀರದು.ದೇಗುಲದ ಮುಂಭಾಗದ ಮುಖ್ಯ ರಸ್ತೆಯು ಹೊಂಡಮಯ ವಾಗಿದ್ದು, ಯಾತ್ರಾರ್ಥಿಗಳ ಗೋಳು ಹೇಳತೀರದು. ನವರಾತ್ರಿಯ ಈ ಸಂದರ್ಭದಲ್ಲಿ ಇಲಾಖೆ ತತ್‌ಕ್ಷಣ ಕ್ರಮಕೈಗೊಳ್ಳಬೇಕು.-ಕೆರಾಡಿ ಚಂದ್ರಶೇಖರ ಶೆಟ್ಟಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಶ್ರೀ ಮೂಕಾಂಬಿಕಾ ದೇಗುಲ ಕೊಲ್ಲೂರು

ಸಂಚಾರಕ್ಕೆ ಅಡ್ಡಿ: ರಾಷ್ಟ್ರೀಯ ಹೆದ್ದಾರಿಯ ಮೇಲುಸ್ತುವಾರಿ ಯಲ್ಲಿರುವ ಕೊಲ್ಲೂರು ಮುಖ್ಯ ರಸ್ತೆಯ ಸ್ಥಿತಿಗತಿ ಬಗ್ಗೆ ಇಲಾಖೆಯ ಗಮನ ಸೆಳೆಯಲಾಗಿದೆ. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಾಹನ ಸಂಚಾರಕ್ಕೆ ತೊಡಕಾಗಿದೆ.- ಶಿವರಾಮಕೃಷ್ಣ ಭಟ್‌, ಅಧ್ಯಕ್ಷರು, ಗ್ರಾ.ಪಂ. ಕೊಲ್ಲೂರು  

-ಡಾ| ಸುಧಾಕರ ನಂಬಿಯಾರ್‌

 

Advertisement

Udayavani is now on Telegram. Click here to join our channel and stay updated with the latest news.

Next