Advertisement

Kollur: ಕಸ್ತೂರಿ ಭಯಕ್ಕೆ ಬಹಿಷ್ಕಾರದ ಮೊರೆಹೋದ ಜನ

05:47 PM Oct 20, 2024 | Team Udayavani |

ಕೊಲ್ಲೂರು: ಕಸ್ತೂರಿ ರಂಗನ್‌ ವರದಿಯನ್ನು ಅನುಷ್ಠಾನ ಮಾಡುವುದಿಲ್ಲ ಎಂದು ರಾಜ್ಯ ಸರಕಾರವು ಕೇಂದ್ರದ ಮುಂದೆ ಸ್ಪಷ್ಟಪಡಿಸಿದ್ದರೂ ವರದಿಯ ಆಧಾರದಲ್ಲಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿರುವ ಜನರ ಆತಂಕ ಇನ್ನೂ ತಗ್ಗಿಲ್ಲ. ಅಧಿಕಾರಿಗಳ ಕೆಲವೊಂದು ಕ್ರಮಗಳಿಂದ ಭಯ ಇನ್ನಷ್ಟು ಹೆಚ್ಚುತ್ತಿದೆ. ಹೀಗಾಗಿ ಜನರು ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯನ್ನು ಬಹಿಷ್ಕರಿಸುವ ಬೆದರಿಕೆ ಹಾಕುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅವರನ್ನು ಮನವೊಲಿಸುವ ಜವಾಬ್ದಾರಿ ಹೊತ್ತ ಅಧಿಕಾರಿಗಳಿಗೆ ಇದೊಂದು ದೊಡ್ಡ ಸವಾಲಾಗಿದೆ.

Advertisement

ರಾಜ್ಯ ಸರಕಾರ ವರದಿ ಜಾರಿ ಇಲ್ಲ ಎಂದರೂ ಈಗಾಗಲೇ ಹಂತ ಹಂತವಾಗಿ ಕೆಲವೊಂದು ನಿರ್ಬಂಧಗಳು ಅನುಷ್ಠಾನಕ್ಕೆ ಬರುತ್ತಿ ರುವುದು ಜನರ ಗಮನಕ್ಕೆ ಬರುತ್ತಿದೆ. ವನ್ಯಜೀವಿ ವಿಭಾಗ ಕೆಲವೊಂದು ಚಟುವಟಿಕೆಗಳಿಗೆ ನಿರಪೇಕ್ಷಣ ಪತ್ರಗಳಿಗೆ ಪಟ್ಟು ಹಿಡಿಯುತ್ತಿರುವುದು ಆತಂಕ ಮೂಡಿಸಿದೆ. ಹೀಗಾಗಿ ಜನರು ವಿಧಾನ ಪರಿಷತ್‌ ಚುನಾವಣೆಯನ್ನು ಮುಂದಿಟ್ಟು ಉನ್ನತ ಅಧಿಕಾರಿಗಳು, ಸರಕಾರ, ಚುನಾಯಿತ ಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

ಫ‌ಲ ನೀಡುತ್ತಿಲ್ಲ ಸಂಧಾನ ಯತ್ನಗಳು
ಗ್ರಾಮ ಪಂಚಾಯತ್‌ಗಳ ಚುನಾವಣ ಬಹಿಷ್ಕಾರ ತಂತ್ರ ರಾಜ್ಯಮಟ್ಟದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅಧಿಕಾರಿಗಳು ಪಂಚಾಯತ್‌ಗೆ ಭೇಟಿ ನೀಡಿ ಸದಸ್ಯರ ಮನವೊಲಿಸುವ ಪ್ರಯತ್ನ ಮಾಡಿದರೂ ಅದು ಫಲಪ್ರದವಾಗುತ್ತಿಲ್ಲ.

ಹಾಗಂತ ಈ ಬಹಿಷ್ಕಾರ ವಿಧಾನ ಪರಿಷತ್‌ ಚುನಾವಣೆ ಮೇಲೆ ಅಂತಹ ಗಂಭೀರ ಪರಿಣಾಮ ಬೀರಿದಂತೆ ಕಾಣುವುದಿಲ್ಲ. ಆದರೆ ಇದು ಇಲ್ಲಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಇದ್ದರೆ ಶೀಘ್ರವೇ ಎದುರಾಗಲಿರುವ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆಯಲ್ಲಿ ಗ್ರಾಮಸ್ಥರೇ ತಟಸ್ಥ ಧೋರಣೆ ತಾಳುವ ಸಂದರ್ಭವೂ ಬರಬಹುದು. ಅದರ ಮುನ್ಸೂಚನೆ ಕೂಡ ಈಗ ಕಂಡು ಬರುತ್ತಿದೆ.

ಜನರ ಆತಂಕ, ಆಕ್ರೋಶವೇನು?

  • ಕೇರಳ ಮಾದರಿಯಲ್ಲಿ ಇನ್ನೂ ಭೌತಿಕ ಸರ್ವೇ ನಡೆಸಿ ವರದಿ ಮಾಡಬೇಕು, ಈಗಾಗಲೇ ಜನವಸತಿ ಇರುವ ಪ್ರದೇಶವನ್ನು ಹೊರಗಿಡಬೇಕು ಎನ್ನುವುದು ಜನರ ಆಗ್ರಹ.
  • ಈಗಾಗಲೇ ಪ್ರತೀ ಗ್ರಾಮದಲ್ಲಿಯೂ ಕೂಡ ಸಾವಿರಾರು ನಿವೇಶನ ರಹಿತರ ಅರ್ಜಿಗಳು ಧೂಳು ಹಿಡಿಯುತ್ತಿವೆ. ಈಗ ಇನ್ನಷ್ಟು ಮಂದಿಯ ನೆಲೆ ತಪ್ಪಿಸಿದರೆ ಹೇಗೆ ಎನ್ನುವುದು ಜನರ ಪ್ರಶ್ನೆ.
  • ಕಳೆದ ಒಂದು ತಿಂಗಳಿಂದ 35 ಗ್ರಾಮಗಳಲ್ಲಿ ಆತಂಕ ಮನೆ ಮಾಡಿದರೂ ಕೂಡ ಸಂಬಂಧಪಟ್ಟ ಮೇಲಧಿಕಾರಿಗಳು ಜನರಿಗೆ ಧೈರ್ಯ ಹೇಳುವ ಮನಸ್ಸು ಮಾಡಲಿಲ್ಲ.
Advertisement

ಭೂಮಿಯ ಮೌಲ್ಯ ಕುಸಿತ
ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ಜನರು ತಮ್ಮ ಜಾಗವನ್ನು ಬಿಡಬೇಕಾಗುತ್ತದೆ ಎಂಬ ವದಂತಿಗಳಿಂದಾಗಿ, 35 ಗ್ರಾಮಗಳಲ್ಲಿ ಭೂಮಿಯ ಬೆಲೆ ಪಾತಾಳಕ್ಕೆ ಕುಸಿದಿದೆ. ತುರ್ತು ಆವಶ್ಯಕತೆಗೆ ಭೂಮಿ ಮಾರಾಟ ಮಾಡಲೇಬೇಕಾದ ಅನಿವಾರ್ಯತೆ ಇದ್ದರೂ ಖರೀದಿಗೆ ಯಾರೂ ಬರುತ್ತಿಲ್ಲ.

ಆತಂಕ ತಪ್ಪಿದ್ದಲ್ಲ
ಕಸ್ತೂರಿ ರಂಗನ್‌ ವರದಿ ಅನುಷ್ಠಾನಗೊಂಡಲ್ಲಿ ಗ್ರಾಮೀಣ ಭಾಗದ ಜನರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ. ವರದಿಯ 6ನೇ ಅಧಿಸೂಚನೆ ಹೊರಡಿಸಲಾಗಿದೆ. ಅದು ಜಾರಿಯಾಗಬಹುದು. ಅಭಯಾರಣ್ಯ ಸೂಕ್ಷ್ಮ ಪರಿಸರ ವಲಯ ಹಾಗೂ ಈಗ ಅನುಷ್ಠಾನಗೊಳ್ಳಲಿರುವ ಸೂಕ್ಷ್ಮ ಪರಿಸರ ಪ್ರದೇಶದಿಂದಾಗಿ ಈ ಭಾಗದ 30ಕ್ಕೂ ಮಿಕ್ಕಿದ ಗ್ರಾಮಗಳ ಜನರು ತೊಂದರೆಗೀಡಾಗಲಿದ್ದಾರೆ.
– ಡಾ| ಅತುಲ್‌ ಕುಮಾರ್‌ ಶೆಟ್ಟಿ ಚಿತ್ತೂರು, ಕಸ್ತೂರಿ ರಂಗನ್‌ ಹಿತರಕ್ಷಣ ಸಮಿತಿ

ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next