ಕೊಲ್ಲೂರು: ದೇವಸ್ಥಾನಗಳ ವಾರ್ಷಿಕ ಜಾತ್ರೆಯ ಮೇಲೂ ಕೊರೊನಾ ಭೀತಿ ತಟ್ಟಿದ್ದು, ಮಾ. 17ರಂದು ನಡೆಯಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ರಥೋತ್ಸವದ ಸಂದರ್ಭ ದೂರದ ಊರುಗಳಿಂದ ಆಗಮಿಸುವ ಭಕ್ತರ ಆರೋಗ್ಯದ ಮೇಲೆ ನಿಗಾ ಇರಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಯಾರಲ್ಲಾದರೂ ಜ್ವರ, ಕಫ, ಕೆಮ್ಮು ಇತ್ಯಾದಿ ಲಕ್ಷಣ ಕಂಡುಬಂದಲ್ಲಿ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು. ಕ್ಷೇತ್ರಕ್ಕೆ ಕೇರಳದ ಭಕ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸುವುದರಿಂದ ಅವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು, ಎಲ್ಲ ವಸತಿಗೃಹಗಳಲ್ಲಿ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ.
ದೇಗುಲ ಹಾಗೂ ಪರಿಸರದಲ್ಲಿ ಸ್ವತ್ಛತೆ ಕಾಪಾಡಲಾಗಿದ್ದು ಔಷಧೀಯ ದ್ರವ್ಯಗಳನ್ನು ಸಿಂಪಡಿಸಲಾಗಿದೆ. ಅಂತೆಯೇ ರೈಲು, ಬಸ್ ಅಲ್ಲದೆ ಇನ್ನಿತರ ಖಾಸಗಿ ವಾಹನಗಳಲ್ಲಿ ಆಗಮಿಸುವ ಭಕ್ತರ ಆರೋಗ್ಯದ ಮೇಲೂ ನಿಗಾ ಇಡಲಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಪ್ರತಿ ಯೊರ್ವರೂ ವೈಯಕ್ತಿಕ ಸ್ವತ್ಛತೆಗೆ ಅದ್ಯತೆ ನೀಡಬೇಕು. ಈವರೆಗೆ ಕುಂದಾಪುರ ತಾಲೂಕಿನಲ್ಲಿ ಕೊರೊನಾ ವೈರಸ್ ಬಾಧೆ ಕಂಡುಬಂದಿಲ್ಲವಾದರೂ ಕ್ಷೇತ್ರದಲ್ಲಿ ತುರ್ತು ಸೇವೆಗೆ ವೈದ್ಯಾ ಧಿಕಾರಿಗಳು ಸನ್ನದ್ಧರಾಗಿದ್ದಾರೆ ಎಂದು ತಾಲೂಕು ವೈದ್ಯಾಧಿ ಕಾರಿ ಡಾ| ನಾಗಭೂಷಣ ಉಡುಪ ತಿಳಿಸಿದ್ದಾರೆ.
ದೇಶದೆಲ್ಲೆಡೆ ಕೊರೊನಾ ಭೀತಿ ಇದ್ದರೂ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ವ್ಯತ್ಯಾಸವಾಗಿಲ್ಲ. ಮಾ. 12ರಂದು ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ನಡೆಯುವ ವಿಶೇಷ ಸಭೆಯಲ್ಲಿ ಕ್ಷೇತ್ರದಲ್ಲಿ ಭಕ್ತರಿಗೆ ಯಾವ ರೀತಿ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.
-ಅರವಿಂದ ಎ. ಸುತಗುಂಡಿ,
ಕೊಲ್ಲೂರು ದೇಗುಲದ ಸಿಇಒ