ಕೊಲ್ಲೂರು: ಭಕ್ತ ಸಾಗರದ ನಡುವೆ ಮೂಕಾಂಬಿಕೆಯು ನೂತನ ರಥದಲ್ಲಿ ವಿಜೃಂಭಿಸಿರುವುದು ರಥೋತ್ಸವದ ಸಂಭ್ರಮದ ಆಚರಣೆಗೆ ವಿಶೇಷ ಮೆರುಗು ನೀಡಿತ್ತು. ಪುರಾತನ ರಥಕ್ಕೆ ಬೀಳ್ಕೊಡುಗೆ ಕೆಳದಿ ಅರಸರ ಕಾಲದ ಇತಿಹಾಸ ಹೊಂದಿರುವ ಪುರಾತನ ರಥ ಬದಲಾಯಿಸಿ, ಯಥಾವತ್ ನೂತನ ರಥ ನಿರ್ಮಿಸುವುದರ ಮೂಲಕ ಭಕ್ತರ ಕಾತುರಕ್ಕೆ ಹೊಸ ಚೈತನ್ಯ ತುಂಬಿದಂತಾಗಿದೆ.
ಸಂಪೂರ್ಣ ಅಲಂಕಾರಗೊಂಡ ನೂತನ ರಥಕ್ಕೆ ಅರ್ಚಕರಾದ ಡಾ| ರಾಮಚಂದ್ರ ಅಡಿಗ, ಶ್ರೀಧರ ಅಡಿಗ, ಡಾ| ಕೆ.ಎನ್. ನರಸಿಂಹ ಅಡಿಗ, ಗೋವಿಂದ ಅಡಿಗ, ಮಂಜುನಾಥ ಅಡಿಗ, ಸುಬ್ರಹ್ಮಣ್ಯ ಅಡಿಗ, ವಿಶೇಷ ಪೂಜೆಯ ಅನಂತರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಚಾಲನೆ ನೀಡಿದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಗೋಪಾಲ ಪೂಜಾರಿ, ಸಮಿತಿ ಸದಸ್ಯರಾದ ಡಾ| ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಗೋಪಾಲಕೃಷ್ಣ ನಾಡ, ಗಣೇಶ ಕಿಣಿ ಬೆಳ್ವೆ, ಶೇಖರ ಪೂಜಾರಿ, ರತ್ನಾ ಆರ್. ಕುಂದರ್, ಸಂಧ್ಯಾ ರಮೇಶ, ಉಪ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ನಾಯ್ಕ, ಮಾಜಿ ಧರ್ಮದರ್ಶಿಗಳಾದ ರಮೇಶ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ಪಿ.ಆರ್.ಒ. ಜಯಕುಮಾರ್, ದೇಗುಲದ ಎಂಜಿನಿಯರ್ ಪ್ರದೀಪ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ದಾನಿಗಳಾದ ಸುನಿಲ್ ಶೆಟ್ಟಿ ದಂಪತಿ ಹಾಗೂ ಕೃಷ್ಣಮೂರ್ತಿ ಮಂಜರು ದಂಪತಿ, ರಥದ ಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ ಅವರನ್ನು ಗೌರವಿಸಲಾಯಿತು.
ಕೆ.ಎಸ್.ಈಶ್ವರಪ್ಪ ಭೇಟಿ
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಕುಟುಂಬಿಕರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವದಲ್ಲಿ ಪಾಲ್ಗೊಂಡರು. ದೇಗುಲದ ವತಿಯಿಂದ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಮಾಜಿ ಸಚಿವರನ್ನು ಸಮ್ಮಾನಿಸಿದರು.
ಭಕ್ತ ಸಾಗರ
ನೂತನ ರಥದ ರಥೋತ್ಸವ ವೀಕ್ಷಿಸಲು ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ 20 ಸಾವಿರಕ್ಕೂ ಮಿಕ್ಕಿ ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.