Advertisement

ಬೆಳ್ಳಾಲ ಸಂಪರ್ಕ ರಸ್ತೆ ಕೆಸರುಮಯ

07:30 AM Sep 02, 2017 | |

ಕೊಲ್ಲೂರು:  ಬಿ.ಎಸ್‌. ಯಡಿಯೂರಪ್ಪನವರ ಆದರ್ಶ ಗ್ರಾಮ ಯೋಜನೆಯಡಿ ಬರುವ ಕೆರಾಡಿ ಪಂಚಾಯತ್‌ನ ಬೆಳ್ಳಾಲ ಗ್ರಾಮದ  ರಸ್ತೆಯ ಗತಿ ನೋಡಿದರೆ ಅಯ್ಯೋ ಅನಿಸುತ್ತಿದೆ.  ಬೆಳ್ಳಾಲದ ಕಾರಿಮೈಲಿನಿಂದ ಕೆರಾಡಿ ಹಾಗೂ ಮಾರಣಕಟ್ಟೆಗೆ ಸಾಗುವ ಮುಖ್ಯ ಸಂಪರ್ಕ ರಸ್ತೆಯ 5 ಕಿ.ಮೀ. ದೂರ ವ್ಯಾಪ್ತಿಯ ಈ ರಸ್ತೆಯ ದುಃಸ್ಥಿತಿಗೆ ಇನ್ನೂ ಪರಿಹಾರ ಕಂಡುಕೊಳ್ಳಲಾಗದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಕಾರಣ ಎಂಬಂತಾಗಿದ್ದು ಮಳೆಗಾಲದಲ್ಲಿ ಈ ಮಾರ್ಗವು ಕೆಸರು ಗದ್ದೆಯಂತೆ ಮಾರ್ಪಾಟುಗೊಂಡಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಬಹಳಷ್ಟು ವರ್ಷಗಳ ಹಿಂದೆಯೇ ಸಂಪೂರ್ಣ ಡಾಮರೀಕರಣವಾಗ ಬೇಕಿರುವ ಈ ಭಾಗದ ರಸ್ತೆಗೆ ಮಾಜಿ ಶಾಸಕರು ರೂ. 70 ಲಕ್ಷ ಮೊತ್ತವನ್ನು ಸುವರ್ಣ ಗ್ರಾಮ ಯೋಜನೆಯಡಿ ಈ ಭಾಗಕ್ಕೆ ನೀಡಲಾಗಿದ್ದರೂ ಪ್ರಭಾವಿಗಳ ಒತ್ತಡಕ್ಕೆ ಸಿಲುಕಿದ ಆ ಯೋಜನೆಯ ಮೊತ್ತವು ಹಂಚಿಹೋಗಿರುವುದು ಈ ರಸ್ತೆಯ ದುಃಸ್ಥಿತಿಗೆ ಕಾರಣವಾಗಿದೆ ಎಂದು ಜನರು ಆರೋಪಿಸಿದ್ದಾರೆ. ಸರಕಾರಿ ನೌಕರಿಯಲ್ಲಿರುವ ವ್ಯಕ್ತಿಯೋರ್ವರು ಈ ರಸ್ತೆಯ ಪಕ್ಕದಲ್ಲಿ 10 ಸೆಂಟ್ಸ್‌ ಜಾಗವನ್ನು ಖರೀದಿ ಮಾಡಿದ್ದು ಗ್ರಾ.ಪಂ. ಸುಪರ್ದಿಯ ಜಾಗವನ್ನು ಮನೆಕಟ್ಟಲು ಬಳಸುತ್ತಿರುವುದು ಇನ್ನಷ್ಟು ಕಸಿವಿಸಿ ಉಂಟುಮಾಡಿದೆ ಎಂದು ಜನರು ಆರೋಪಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ
ಗ್ರಾ.ಪಂ.ಗೆ ದೂರು ನೀಡಲಾಗಿ ದ್ದರೂ ಸರಕಾರಿ ನೌಕರರ ಒತ್ತಡಕ್ಕೆ ಮಣಿದ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ರಸ್ತೆಯ ದುಃಸ್ಥಿತಿಗೆ ಕಾರಣವಾಗಿದೆ. ಮೇಲ್ಭಾಗದ ಜಮೀನಿನ ಮಣ್ಣು ಮುಖ್ಯರಸ್ತೆಯ ಮೇಲೆ ಬಿದ್ದಿರುವುದರಿಂದ ಕೆಸರುಮಯವಾಗಿದೆ. ಹಾಗಾಗಿ ಗ್ರಾಮ ನಿವಾಸಿಗಳ ಸಂಚಾರಕ್ಕೆ ತೊಡಕಾಗಿದೆ. ಇದಕ್ಕೊಂದು ಶಾಶ್ವತ ಪರಿಹಾರಕ್ಕೆ ಇಲಾಖೆ ಕ್ರಮ ಕೈಗೊಳ್ಳದಿದ್ದಲ್ಲಿ ಮಾರಣಕಟ್ಟೆ ಮಾರ್ಗವಾಗಿ ಕೆರಾಡಿ ಸಾಗುವ ಹೆಗ್ಗದ್ದೆ ಕ್ರಾಸ್‌ನಿಂದ ಕೇರಿ ಮೂಲಕ ಸಾಗುವ ಬೆಳ್ಳಾಲ ಸಂಪರ್ಕ ರಸ್ತೆಯ ಈ ಭಾಗದ ನಿವಾಸಿಗಳು ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದ್ದಾರೆ.

ಬಹಳಷ್ಟು ಮಂದಿಗೆ ತೊಂದರೆಯಾಗುತ್ತಿರುವ ಕೆಸರುಮಯವಾಗಿರುವ ಈ ಮಾರ್ಗವಾಗಿ ಪ್ರಯಾಣಿಸುವ ಮಂದಿಯ ಪಾಡು ಹೇಳತೀರದು. ಕೆರಾಡಿ ಗ್ರಾ.ಪಂ. ಈ ಸಮಸ್ಯೆಗೊಂದು ಪರಿಹಾರ ಒದಗಿಸಬೇಕಿದೆ.    
– ಚಂದ್ರಶೇಖರ ಶೆಟ್ಟಿ, ಗ್ರಾಮಸ್ಥರು

ಹಳೆಯ ರಸ್ತೆ ತೆರವು ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದು ಹೊಸತಾಗಿ ನಿರ್ಮಿಸಿದ ರಸ್ತೆಯ ಅಗಳು ತೋಡಿರುವುದರಿಂದ ಅಲ್ಲಿನ ನೀರು ಕೆಳಗಡೆ ಹರಿದು ಮುಖ್ಯರಸ್ತೆಯು ಕೆಸರುಮಯವಾಗಿರುವುದು ಸಹಜ.ಭಾರೀ ಮಳೆ ಬರುವುದರಿಂದ ಪೈಪ್‌ ಅಳವಡಿಸಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ. ಮಳೆ ಕಡಿಮೆಯಾದೊಡನೆ ಪೈಪ್‌ ಜೋಡಿಸುವುದರ ಮೂಲಕ ಈ ಭಾಗದ ನಿವಾಸಿಗಳ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. 
– ನಾರಾಯಣ ಶೆಟ್ಟಿ, ಪಿಡಿಒ ಕೆರಾಡಿ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next