ಬೆಳ್ತಂಗಡಿ: ರಾಜ್ಯದಲ್ಲಿ ನನೆಗುದಿಗೆ ಬಿದ್ದಿದ್ದ 11 ಸಾವಿರ ಕೋಟಿ ರೂ. ರೈಲ್ವೇ ಯೋಜನೆಗಳನ್ನು ಮರು ಕಾರ್ಯರೂಪಕ್ಕೆ ತರಲಾಗಿದ್ದು, ದ.ಕ. ಹಾಗೂ ಉಡುಪಿ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಶಾಸಕ ಹರೀಶ್ ಪೂಂಜ ಅವರ ಬೇಡಿಕೆಯಂತೆ ಶೀಘ್ರದಲ್ಲೇ ಸಂಪುಟದಲ್ಲಿ ಚರ್ಚಿಸಿ ಕೊಲ್ಲೂರು- ಧರ್ಮಸ್ಥಳ- ಸುಬ್ರಹ್ಮಣ್ಯ ರೈಲ್ವೇ ಯೋಜನೆ ಸರ್ವೇ ಕಾರ್ಯ ಆರಂಭಿಸಲಾಗುವುದು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಹೇಳಿದರು.
ಸಚಿವ ಸೋಮಣ್ಣ ಅವರಿಗೆ ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಬುಧವಾರ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರೈಲ್ವೇ ಇಲಾಖೆಗೆ ಸಂಬಂಧಿಸಿ ಈಗಾಗಲೆ ಸಾವಿರಾರು ಕೋಟಿ ರೂ.ಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಬಹು ವರ್ಷದ ಬೇಡಿಕೆಯಾದ ಕಡೂರು-ಮೂಡಿಗೆರೆ ರೈಲ್ವೇ ಮಾರ್ಗವನ್ನು ಮುಂದುವರಿಸಿದ್ದೇವೆ. ಹೀಗಾಗಿ ಭಕ್ತರ ಅನುಕೂಲಕ್ಕೆ ಧಾರ್ಮಿಕ ಕ್ಷೇತ್ರವನ್ನು ಕೇಂದ್ರೀಕರಿಸಿ ದಿಲ್ಲಿಗೆ ತೆರಳಿ ಕೊಲ್ಲೂರು- ಧರ್ಮಸ್ಥಳ- ಸುಬ್ರಹ್ಮಣ್ಯ ಬೆಸೆಯಲು ರೈಲ್ವೇ ವಿಸ್ತೃತ ಯೋಜನೆಯನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಶಾಸಕ ಹರೀಶ್ ಪೂಂಜ ಮಾತನಾಡಿ, ಬೆಳ್ತಂಗಡಿ ರೈಲ್ವೇಯಿಂದ ವಂಚಿತವಾಗಿರುವ ತಾಲೂಕು. ಕೊಲ್ಲೂರು ಮಾರ್ಗವಾದ ಕಾರ್ಕಳ, ಹೆಬ್ರಿ, ಬೈಂದೂರು ಧರ್ಮಸ್ಥಳ, ಸುಬ್ರಹ್ಮಣ್ಯ, ಸಂಪರ್ಕ ಹಾಗೂ ಹಾಸನ, ಬೇಲೂರು, ಬೈರಾಪುರ, ಶಿಶಿಲ, ಉಪ್ಪಿನಂಗಡಿ, ಬಿ.ಸಿ. ರೋಡ್ ಸಂಪರ್ಕಿಸಲು ಸರ್ವೇ ನಡೆಸಿ ಯೋಜನೆ ಅನುಷ್ಠಾನಗೊಳಿಸಿದರೆ ಜನರಿಗೆ ವರದಾನವಾಗಲಿದೆ. ಬೆಳ್ತಂಗಡಿಗೆ ವೆಂಟೆಡ್ ಡ್ಯಾಮ್‌ಗಳ ಮೂಲಕ ನೀರಿನ ಆವಶ್ಯಕತೆಯನ್ನು ಪೂರೈಸುವಂತೆ ಸಚಿವರಲ್ಲಿ ವಿನಂತಿಸಿದರು.
ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಮಂಡಲ ಉಪಾಧ್ಯಕ್ಷ ಮೋಹನ್ ಅಂಡಿಂಜೆ, ಸೀತಾರಾಮ್ ಬೆಳಾಲು, ವಸಂತಿ ಮಚ್ಚಿನ ವೇದಿಕೆಯಲ್ಲಿದ್ದರು. ರಾಜೇಶ್ ಪೆಬುìಂಡ ನಿರ್ವಹಿಸಿದರು.
ಕರಾವಳಿಗೆ ಪ್ರತ್ಯೇಕ ರೈಲ್ವೇ ವಿಭಾಗ ಸೃಜಿಸಿ
ಮಂಗಳೂರು: ಕರ್ನಾಟಕ ಕರಾವಳಿ ಭಾಗದ ರೈಲ್ವೆ ಪ್ರದೇಶಕ್ಕೆ ಪ್ರತ್ಯೇಕ ಮಂಗ ಳೂರು ವಿಭಾಗ ವನ್ನು ಸೃಜಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ರೈಲ್ವೆ ಸಹಾಯಕ ಸಚಿವಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಬುಧವಾರ ಸಚಿವರು ಮಂಗಳೂರಿಗೆ ಭೇಟಿಯಾದ ಸಂದರ್ಭದಲ್ಲಿ ಮಂಜುನಾಥ ಭಂಡಾರಿ ಅವರು ಈ ಬಗ್ಗೆ ಮನವಿ ಸಲ್ಲಿಸಿದರು.
ಪಾಲಾ^ಟ್, ಮೈಸೂರು ಮತ್ತು ಕೊಂಕಣ ರೈಲ್ವೆಗೆ ಮಂಗಳೂರು ಸಂಪರ್ಕ ಕೊಂಡಿಯಾಗಿರುತ್ತದೆ.
ಹಾಗಾಗಿ ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಬೇಕು. ಕರ್ನಾಟಕ ಕರಾವಳಿ ಭಾಗದ ರೈಲ್ವೆ ಪ್ರದೇಶಕ್ಕೆ ಪ್ರತ್ಯೇಕ ಮಂಗಳೂರು ವಿಭಾಗವನ್ನು ಸೃಜಿಸಬೇಕು ಎಂದು ಮನವಿ ಮಾಡಿದರು.