Advertisement

ಕೊಳ್ನಾಡು ಗ್ರಾ.ಪಂ.: ಪ್ರಗತಿ ಪರಿಶೀಲನ ಸಭೆ 

05:21 PM Nov 25, 2017 | |

ಕೊಳ್ನಾಡು : ಕೊಳ್ನಾಡು ಗ್ರಾ.ಪಂ. ವ್ಯಾಪ್ತಿಯ ಕುಡ್ತಮುಗೇರು ಪ್ರದೇಶಕ್ಕೆ ಒಬ್ಬ ವೈದ್ಯರು, ಒಬ್ಬ ಶುಶ್ರೂಷಕರು, ಒಬ್ಬ ಫಾರ್ಮಸಿಸ್ಟ್‌ ಹಾಗೂ ಅಟೆಂಡರ್‌ ಒಳಗೊಂಡಂತೆ ಆರೋಗ್ಯ ವಿಸ್ತರಣ ಚಿಕಿತ್ಸಾಲಯ ಕೇಂದ್ರ ಮಂಜೂರುಗೊಂಡಿದೆ. ಈ ಉದ್ದೇಶಕ್ಕೆ ನಿವೇಶನಕ್ಕಾಗಿ ಸರಕಾರಿ ಜಮೀನು ಗುರುತಿಸಬೇಕು ಎಂದು ಕೊಳ್ನಾಡು ಗ್ರಾ.ಪಂ.ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಗ್ರಾಮಕರಣಿಕರಿಗೆ ಸೂಚಿಸಿದರು.  ಅವರು ನೇತ್ರಾವತಿ ಸಭಾಂಗಣದಲ್ಲಿ ಕೊಳ್ನಾಡು ಗ್ರಾ.ಪಂ. ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

Advertisement

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಹಿರಿಯ ಆರೋಗ್ಯ ಸಹಾಯಕಿ ಹೇಮಲತಾ ಜಮೀನಿನ ಆವಶ್ಯಕತೆಯನ್ನು ಅಧ್ಯಕ್ಷರ ಗಮನಕ್ಕೆ ತಂದಾಗ ಗ್ರಾಮಕರಣಿಕ ಅನಿಲ್‌ ಕುಮಾರ್‌ ಅವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು. 2ನೇ ಹಂತದ 94ಸಿ ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಮತ್ತು ಅಕ್ರಮ ಸಕ್ರಮ ಅರ್ಜಿಗಳು ಕೂಡ ಬಡ ಕೃಷಿಕರಲ್ಲಿ ಆದ್ಯತೆ ನೆಲೆಯಲ್ಲಿ ಮಂಜೂರಾತಿಗೆ ಸಮಿತಿಗೆ ಮಂಡಿಸಬೇಕೆಂದು ಅಧ್ಯಕ್ಷರು ಸೂಚಿಸಿದರು.

ಎಲ್ಲ ಬೇಡಿಕೆಗೆ ಸ್ಪಂದನೆ
ಶಿಕ್ಷಣ ಇಲಾಖೆ ಕ್ಲಸ್ಟರ್‌ ಗಂಗಾಧರ ಅವರು ಮಾತನಾಡಿ ಕೊಳ್ನಾಡು ಗ್ರಾ.ಪಂ. ವತಿಯಿಂದ ಶಿಕ್ಷಣ ಇಲಾಖೆಯ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ಇಲಾಖೆ ಪರವಾಗಿ ಅಭಿನಂದಿಸಿ, ಅಧ್ಯಕ್ಷರು ಸಲಹೆ ನೀಡಿದ ತಾಳಿತ್ತನೂಜಿ, ಸುರಿಬೈಲಿಗೆ ಆವರಣ ಗೋಡೆ, ಶಾಲೆಗಳಲ್ಲಿ ಪೌಷ್ಟಿಕ ತೋಟ ರಚನೆಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದರು.

ನಾಲ್ಕು ಅಂಗನವಾಡಿ ಪೂರ್ಣ
ಈ ತಿಂಗಳ ಅಂತ್ಯದೊಳಗೆ ಎಲ್ಲ ಶಾಲೆಗಳಲ್ಲಿ ಸರಕಾರಿ ಆದೇಶದಂತೆ ಹಳೆ ವಿದ್ಯಾರ್ಥಿ ಸಂಘ ರಚಿಸಿ ಸಂಘವನ್ನು ಶಾಲಾ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಪ್ರೋತ್ಸಾಹಿಸಬೇಕೆಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 4 ಅಂಗನವಾಡಿ ಕಟ್ಟಡಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು 27ನೇ ತಾರೀಕಿಗೆ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಮೇಲ್ವಿಚಾರಕಿ ರೇಣುಕಾ ತಿಳಿಸಿದರು. 

ಕುಂಟ್ರಕಳ ಹಾಗೂ ಮಾದಕಟ್ಟೆ ಅಂಗನವಾಡಿ ನಿವೇಶನಗಳನ್ನು ಶೀಘ್ರದಲ್ಲೇ ಮಂಜೂರಾತಿ ಮಾಡಲಾಗುವುದೆಂದು ಗ್ರಾಮಕರಣಿಕ ಅನಿಲ್‌ ಕುಮಾರ್‌ ತಿಳಿಸಿದರು. ಸಭೆಯಲ್ಲಿ ಪಶು ಸಂಗೋಪನಾ ಇಲಾಖೆಯ ಶ್ರೀಮಂದರ ಜೈನ್‌, ಜಿ.ಪಂ. ಎಂಜಿನಿಯರ್‌ ನಾಗೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಮೆಸ್ಕಾಂ ಇಲಾಖಾ ಪ್ರಗತಿಯನ್ನು ತಿಳಿಸಲಾಯಿತು. ಸೌಕರ್ಯ ಸಮಿತಿ ಸದಸ್ಯರಾದ ವಿಶ್ವನಾಥ ಶೆಟ್ಟಿ ಪೆರ್ಲದಬೈಲು, ಜಯಂತಿ ಎಸ್‌. ಪೂಜಾರಿ, ಯೂಸುಫ್‌ ಟಿ. ಮತ್ತಿತರರು ಉಪಸ್ಥಿತರಿದ್ದರು. ಪಂ.ಅಭಿವೃದ್ಧಿ ಅಧಿಕಾರಿ ಸುಧೀರ್‌ ಸ್ವಾಗತಿಸಿ, ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next