Advertisement

ಮೊದಲ ಬಾರಿಗೆ ಬಿಎಸ್ಪಿ-ಬಿಜೆಪಿ ಮೈತ್ರಿಗೆ ಅಧಿಕಾರ

04:09 PM Oct 30, 2020 | Suhan S |

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಚ್ಚರಿಯ ವಿದ್ಯಮಾನ ಜರುಗಿದೆ. ಇದೇ ಮೊದಲ ಬಾರಿಗೆ ಬಿಎಸ್ಪಿ (ಶಾಸಕ ಎನ್‌.ಮಹೇಶ್‌ ಬಣ) ಹಾಗೂ ಬಿಜೆಪಿ ಮೈತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಅಧ್ಯಕ್ಷ ಸ್ಥಾನವನ್ನು ಬಿಎಸ್ಪಿ ಪಡೆದಿದ್ದರೆ, ಉಪಾಧ್ಯಕ್ಷ ಸ್ಥಾನವು ಬಿಜೆಪಿ ಪಾಲಾಗಿದೆ. ನಗರಸಭೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನ ಪಡೆದಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫ‌ಲವಾಗಿದೆ.

Advertisement

ಬಹುಮತ: 31 ಸದಸ್ಯ ಬಲದ ನಗರಸಭೆಯಲ್ಲಿ ಅಧಿಕಾರ ಹಿಡಿಯಲು 17 ಮತ ಅಗತ್ಯವಿತ್ತು. ಬಿಜೆಪಿ- 7, ಬಿಎಸ್ಪಿ- 7, ಶಾಸಕ ಎನ್‌.ಮಹೇಶ್‌, ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌, ಓರ್ವ ಪಕ್ಷೇತರ ಅಭ್ಯರ್ಥಿ ಶಂಕರನಾರಾಯಣಗುಪ್ತ ಮತ ಸೇರಿ 17 ಮತ ಲಭಿಸಿದ್ದರಿಂದ ಬಿಜೆಪಿ ಹಾಗೂ ಬಿಎಸ್ಪಿ ಮೈತ್ರಿಯಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿವೆ.

ನೂತನ ಅಧ್ಯಕ್ಷೆ: ನಗರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಎಸ್‌ಟಿ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಎನ್‌.ಮಹೇಶ್‌ ಬೆಂಬಲಿತ ಬಿಎಸ್ಪಿ ಸದಸ್ಯೆ ಗಂಗಮ್ಮ ಹಾಗೂ 27ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಪುಷ್ಪಲತಾ ಸ್ಪರ್ಧಿಸಿದ್ದರು. ಗಂಗಮ್ಮ 17 ಮತ ಪಡೆದು ಅಧ್ಯಕ್ಷೆ ಗದ್ದುಗೆ ಏರಿದರೆ, ಪುಷ್ಪಲತಾ 14 ಮತಗಳಿಸಿ ಪರಾಭವ ಗೊಂಡರು. ಅಧ್ಯಕ್ಷೆ ಸ್ಥಾನಕ್ಕೆ ಬಿಎಸ್ಪಿ ಸದಸ್ಯೆ ಜಯಮೇರಿ ಕೂಡ ಸ್ಪರ್ಧಿಸಿದ್ದು, ಕೇವಲ 2 ಮತ ಪಡೆದರು.

ನೂತನ ಉಪಾಧ್ಯಕ್ಷೆ: ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿಸದಸ್ಯೆ ಕವಿತಾ ಹಾಗೂ ಕಾಂಗ್ರೆಸ್‌ ಸದಸ್ಯೆ ಸುಶೀಲಾ  ಕಣಕ್ಕಿಳಿದಿದ್ದರು. ಕವಿತಾ 17 ಮತ ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಸುಶೀಲಾ 14 ಮತಗಳಿಸಿ ಸೋಲು ಅನುಭವಿಸಿದರು. ಚುನಾವಣೆ ನಡೆದ 2 ವರ್ಷ ಬಳಿಕ ಆಯ್ಕೆ: 2018 ರಲ್ಲಿ ನಗರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 11 ಸ್ಥಾನ, ಬಿಜೆಪಿ 7 ಸ್ಥಾನ, ಬಿಎಸ್ಪಿ 9 ಸ್ಥಾನ, ನಾಲ್ವರು ಪಕ್ಷೇತರರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಎರಡು ವರ್ಷದ ಬಳಿಕ ನ್ಯಾಯಾಲಯವು ನಗರಸಭೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷ ಚುನಾವಣೆ ನಡೆಸಲು ಸೂಚಿಸಿದ ಹಿನ್ನೆ ಲೆಯಲ್ಲಿ ನೂತನ ನಗರಸಭಾ ಕಟ್ಟಡದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಿತು.

Advertisement

ಸಂಭ್ರಮಾಚರಣೆ: ನಗರಸಭೆಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಬಿಎಸ್ಪಿ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಚುನಾವಣಾಧಿಕಾರಿಯಾಗಿ ಉಪ ವಿಭಾಗಾಧಿಕಾರಿ ಡಾ. ಗಿರೀಶ್‌ ಕಾರ್ಯ ನಿರ್ವಹಿಸಿದರು. ಈ ವೇಳೆ ನಗರಸಭೆ ಪೌರಾಯುಕ್ತ ನಾಗಶೆಟ್ಟಿ, ಉಪ ವಿಭಾಗ ಕಚೇರಿಯ ತಹಶೀಲ್ದಾರ್‌ ಚಿಗರಿ, ಶಿರಸ್ತೇದಾರ್‌ ಬಿ.ಕೆ.ಶ್ರೀನಿವಾಸ್‌ ಮತ್ತುಸಿಬ್ಬಂದಿ ಉಪಸ್ಥಿತರಿದ್ದರು.

ಸಂಸದ ಪ್ರಸಾದ್‌, ಶಾಸಕ ಮಹೇಶ್‌ ಕಾರ್ಯತಂತ್ರ :  ಕೊಳ್ಳೇಗಾಲ ನಗರಸಭೆಯಲ್ಲಿ ಅತಂತ್ರ ಫ‌ಲಿತಾಂಶ ಬಂದಿದ್ದರಿಂದ ಯಾರಿಗೆ ಅಧಿಕಾರ ಎಂಬುದು ಕುತೂಹಲ ಮೂಡಿಸಿತ್ತು. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಕಾಂಗ್ರೆಸ್‌ ಪರ ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ಕಾರ್ಯ ತಂತ್ರ ರೂಪಿಸುತ್ತಿದ್ದರು. ಈ ನಡುವೆ ಕೇಂದ್ರದ ಮಾಜಿ ಸಚಿವರೂ ಆದ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಖುದ್ದಾಗಿ ಕಣಕ್ಕಿಳಿದು, ಶಾಸಕ ಎನ್‌. ಮಹೇಶ್‌ ಜೊತೆಗೂಡಿ ಬಿಜೆಪಿ ಬಿಎಸ್ಪಿ ಮೈತ್ರಿಯಾಗಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆ ವೇಳೆ ಈ ಇಬ್ಬರೂ ಪಾಲ್ಗೊಂಡಿ ದ್ದರು. ನಗರಸಭೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ-ಬಿಎಸ್ಪಿ ಮೈತ್ರಿಯಾಗಿ ಅಧಿಕಾರ ಹಿಡಿದಿವೆ.

ಹೆಚ್ಚು ಸ್ಥಾನ ಪಡೆದಿದ್ದರೂ ಸೋಲುಂಡ ಕಾಂಗ್ರೆಸ್‌ :  ನಗರಸಭೆಯಲ್ಲಿ 11ಸ್ಥಾನ ಪಡೆದಿರುವ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಾಲ್ವರು ಪಕ್ಷೇತರ ರನ್ನು ತನ್ನತ್ತ ಸೆಳೆದು, ಮತ್ತಿಬ್ಬರು ಬಿಎಸ್ಪಿ ಸದಸ್ಯರ ಬೆಂಬಲ ಪಡೆದು ಅಧಿಕಾರ ಹಿಡಿಯಲು ಕಾಂಗ್ರೆಸ್‌ ಯತ್ನಿಸಿತ್ತು. ಅಲ್ಲದೇ ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಅವರು “ಕೋಮುವಾದಿ ಪಕ್ಷ ಬಿಜೆಪಿಯನ್ನು ಹೊರಗಿಟ್ಟು ಬಿಎಸ್ಪಿ ಬೆಂಬಲ ಪಡೆದು ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ’ ಎಂದು ತಿಳಿಸಿದ್ದರು. ಇದಕ್ಕಾಗಿ ಪಕ್ಷದ ಸದಸ್ಯರೊಂದಿಗೆ ಸಭೆಯನ್ನು ನಡೆಸಿದ್ದರು. ಆದರೆ, ಬಿಜೆಪಿ ಹಾಗೂ ಬಿಎಸ್ಪಿ ಮೈತ್ರಿಯಾಗಿ ಅಧಿಕಾರ ಹಿಡಿಯುವ ಮೂಲಕ ಕಾಂಗ್ರೆಸ್‌ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿವೆ.

 

ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next