ಕೊಲ್ಹಾರ: ತಾಲೂಕಿನ ನಾಗರದಿನ್ನಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಎರಡು ಚಿರತೆ ಮರಿಗಳು ಕಾಣಿಸಿಕೊಂಡ ಕಾರಣದಿಂದ ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ರೈತ ಮಹಿಳೆ ಪ್ರೇಮಾ ಸಂಜು ನಾವಿ ಅವರ ಹೇಳಿಕೆಯ ಮೇರೆಗೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸವನಗೌಡ ಬಿರಾದಾರ ಹಾಗೂ ಬಸವರಾಜ ಕೊಣ್ಣೂರ ಸೇರಿದಂತೆ ಅವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ಮರಿಗಳ ಹೆಜ್ಜೆ ಗುರುತು ಪರಿಶೀಲನೆ ಮಾಡಿದ ಬಳಿಕ ಚಿರತೆ ಇರುವುದು ಖಚಿತ ಪಡಿಸಿಕೊಂಡ ಹಿನ್ನೆಲೆ ಚಿರತೆಯ ಹುಡುಕಾಟಕ್ಕೆ ನಾವು ಎಂಟು ಸಿಬ್ಬಂದಿಗಳನ್ನು ನೇಮಿಸಿದ್ದೇವೆ. ಭಾನುವಾರ ಸಂಜೆಯಿಂದಲೇ ನಮ್ಮ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ನಾವು ಹುಡುಕಾಟ ನಡಿಸಿದ್ದೇವೆ. ಆದರೆ ಇದುವರೆಗೆ ಎಲ್ಲಿಯೂ ಕೂಡಾ ಚಿರತೆ ಪ್ರಾಣ ಹಾನಿ ಮಾಡಿರುವುದು ನಮಗೆ ಕಂಡು ಬಂದಿಲ್ಲ. ಚಿರತೆ ಮಧ್ಯಾಹ್ನದ ವೇಳೆ ತಿರುಗಾಡುವುದು ಕಡಿಮೆ, ಸಾಯಂಕಾಲ ಹಾಗೂ ಮುಂಜಾನೆಯ ಸಂದರ್ಭದಲ್ಲಿ ತಿರುಗಾಡುತ್ತದೆ. ಅದಕ್ಕಾಗಿ ನಾವು ಇಂದಿನಿಂದ ಸಾಯಂಕಾಲ ಹಾಗೂ ಮುಂಜಾನೆ ಸಂದರ್ಭದಲ್ಲಿ ಡ್ರೋನ್ ಕ್ಯಾಮರಾ ಸಹಾಯದಿಂದ ಚಿರತೆಯ ಹುಡುಕಾಟ ನಡೆಸುವುದಾಗಿ ತಿಳಿಸಿದ್ದಾರೆ.
ನಾಗರದಿನ್ನಿ ಗ್ರಾಮದ ಹೊರವಲಯದ ಜಮೀನಿನಲ್ಲಿ ನನ್ನ ಪತ್ನಿ ಪ್ರೇಮಾ ಮೆಕ್ಕೆ ಜೋಳಕ್ಕೆ ನೀರು ಹಾಯಿಸಲು ಹೋಗಿದ್ದರು. 10:30 ರ ಸುಮಾರಿಗೆ ಎರಡು ಚಿರತೆ ಮರಿ ಕಾಣಿಸಿಕೊಂಡಿದ್ದನ್ನು ನೋಡಿ ನನ್ನ ಪತ್ನಿ ಗಾಬರಿಯಿಂದ ಜಮೀನು ಬಿಟ್ಟು ಓಡಿ ಬಂದಿದ್ದಾಳೆ.
-ಸಂಜು ನಾವಿ -ನಾಗರದಿನ್ನಿ ಗ್ರಾಮದ ರೈತ